ಈಗೆಲ್ಲಾ ಮೊದುವೆಗಳ್ದೇ ಜಂಬರ. ಒಂದು ಮನೆಲಿ ಮೊದುವೆ ಎದ್ದತ್‌ತೇಳ್ರೆ ಕೇಳೊಕಾ..ಆ ಮನೆವ್ಕೆ, ಅವರ ನೆಂಟ್ರುಗಳಿಗೆ ಸಂಭ್ರಮನೋ ಸಂಭ್ರಮ. ಹೆಣ್ಮಕ್ಕ ಎಲ್ಲ ಎರ್ಡು ತಿಂಗ ಮುಂದೆನೇ ಸೀರೆ ತೆಗೆಕೆ, ಚಿನ್ನ ತೆಗೆಕೆ ಸುರು ಮಾಡುವೆ. ಸೀರೆ ಅಂಗುಡಿಯವ್ಕೆ, ಚಿನ್ನದಂಗುಡಿಯವ್ಕೆ ಈ ಮೊದುವೆ ಸೀಸನ್ ಬಾತ್ ತೇಳ್ರೆ ದೀಪಾವಳಿ ಹಬ್ಬ ಬಂದ ಹಾಂಗೆನೇ.
ಇನ್ನು ಮೊದೊಳಿಗೆಗೆ ಸೀರೆ ತೆಗೆವ ಕತೆ. ಇದರ್ಲಿ ಒಂಥರಾ ಸ್ಟೇಟಸ್ ಮೈಂಟೆನ್ ಮಾಡುದು ಕೂಡಾ ಸಾಮಾನ್ಯ. ಅದರ್ಲೂ ನಮ್ಮ ಗೌಡ್ರುಗಳಲ್ಲಿ ಒಳ್ಳ ಸೀರೆ ತೆಗಿದು ತೇಳಿ ಉಟ್ಟು. ಪಚಾರಕ್ಕೆ ಉಡಿಕೆ ಹೈದನ ಸೈಡ್ಂದ ಈ ಒಳ್ಳ ಸೀರೆನ ತೆಗ್ದು ಕೊಡ್ದು ಹಿಂದೆಂದಳೇ ನಡ್ಕಂಡ್ ಬಂದದ್. ಹಾ..ಆಗಳೇ ಹೇಳ್ದೆ ಅಲ ಸ್ಟೇಟಸ್ ಮೈಂಟೇನ್ ಮಾಡ್ದುತ. ಅದು ಇದೇ ಒಳ್ಳ ಸೀರೆ ತೆಗಿವ ವಿಷಯಲಿ. ಅಷ್ಟಕ್ಕೂ ಸೀರೆಲಿ ಒಳ್ಳ ಸೀರೆ, ಹಾಳು ಸೀರೆ ಅಂತ ಉಟ್ಟಾತ ಗೊತ್ಲೆ. ಆದರೂ ಪಚಾರಕ್ಕೆ ಉಡುವ ಸೀರೆಗೆ ಒಳ್ಳ ಸೀರೆತನೇ ಹೇಳುವೆ. ನಂಗನ್ಸಿದ ಪ್ರಕಾರ ಭಾರೀ ರೇಟ್‌ನ ಸೀರೆ ತೆಗಿವ ಕಾರಣ ಅದ್ಕೆ ಒಳ್ಳ ಸೀರೆತ ಹೇಳ್ದು ಆಗಿರೊಕು.
ಅಂದಾಂಗೆ ಈ ಒಳ್ಳ ಸೀರೆ ಕಡಿಮೆ ರೇಟ್‌ದು ಮನಿ ತೆಗ್ದರೆ ಹೋದ್ದೇ. ಜಾಸ್ತಿ ರೇಟ್‌ದೇ ಆಕು. ಯಾಕೆ ಗೊತ್ತುಟ? ಸೀರೆ ತೆಗೆಕೆ ಹೋದ ದಿನ ಆಚೀಚೆ ಮನೆ ಹೆಂಗುಸುಗ ಎಲ್ಲ ಕೆಲ್ಸ ಬೇಗ ಬೇಗ ಮುಗ್ಸಿ ಒಳ್ಳ ಸೀರೆನ ವಿಷಯ ಮಾತಾಡಿಕೆನೇ ಮೊದುವೆ ಮನೆಗೆ ಬಂದು ಕುದ್ರುದುಟ್ಟು. ಫಸ್ಟ್ ಕೇಳ್ದೇ ಒಳ್ಳ ಸೀರೆಗೆ ಎಷ್ಟು ರೇಟ್‌ತ. ಇನ್ನು ಆ ದಿನ ಸೀರೆ ನೋಡಿಕೆ ಬಾಕೆ ಆಗದವು ಕೂಡಾ ಒಳ್ಳ ಸೀರೆ ಎಷ್ಟರ್ದು ಗಡಯ ಅಂತ ಆಚೀಚೆ, ಮೇಲೆ, ಕೆಳಗೆ ಮನೆವರೊಟ್ಟಿಗೆ ಎಲ್ಲಾ ಕೇಳಿ ರೇಟ್ ತಿಳ್ಕಂಬ ಕಸರತ್ತು ಮಾಡ್ದು ನೋಡ್ಕನ ನೆಗೆ ತಡೆಕಾದ್ಲೆ ಒಮ್ಮೊಮ್ಮೆ. ಅದ್ಕಾಗೇ ಪಾಪದವು ಕೂಡಾ ಹಂಗೋ ಹಿಂಗೋ ಕಾಸು ಕೂಡಿಟ್ಟು ಬರೀ ಒಂದು ದಿನದ ಮೂರು ಗಂಟೆ ಮಾತ್ರ ಉಡುವ ಒಳ್ಳ ಸೀರೆಗೆ 10,000 ರೂ. ಮೇಲೆನೇ ಖರ್ಚು ಮಾಡುವೆ ಪಾಪ. ಆಚೀಚೆ ಮನೆವು ಆಡಿಕೊಂಬೊಕೆ ಬೊತ್ತಲ..
ಇನ್ನು ಬೇಕಾದಷ್ಟು ದುಡ್ಡಿದ್ದವರ ಕತೆ ಬೇರೆನೇ. ಈ ಒಳ್ಳ ಸೀರೆಗೆ ಬೇಕಾಗಿ 50,000, 1 ಲಕ್ಷ ಎಲ್ಲಾ ಖರ್ಚು ಮಾಡ್ದುಟ್ಟು. ಅದರ ನೋಡಿ ಕೆಲವು ಪಾಪದ ಹೆಣ್ಮಕ್ಕ ಆಸೆ ಮಾಡ್ದೂ ಉಟ್ಟು. ಆದರೆ ಇಷ್ಟೆಲ್ಲಾ ಖರ್ಚು ಮಾಡಿ ತಕಂಡ ಈ ಒಳ್ಳ ಸೀರೆನ ಉಡ್ದು ಮೊದುವೆಲಿ ಮಾತ್ರ. ಆಮೇಲೆ ಆ ಸೀರೆ ಹಂಗೇ ಗೋದ್ರೇಜ್‌ನ ಮೂಲೆ ಸೇರಿ ಕುದ್ದದೆ. ಎಲ್ಲೋ ಕೆಲವು ಮಂದಿ ಹೆಚ್ಚೆಂದರೆ ಎರ್ಡು ಸಲ ಆ ಸೀರೆನ ಉಡುವ ತೇಳ್ರೆ ದೊಡ್ಡ ವಿಷಯ. ಈಗೀಗ ಹೆಂಗೂ ಮೊಬೈಲ್‌ನ ಕಾಲ. ಒಂದು ಸಲ ಆ ಸೀರೆ ಉಟ್ಟು ಫೋಟೋ ತೆಗ್ದು ಸ್ಟೇಟಸ್‌ಗೆ ಹಾಕಿದ ಮೇಲೆ ಅದರ ನಾಲ್ಕು ಜನ ನೋಡ್ದ ಮೇಲೆ ಆ ಸೀರೆ ಹಳ್ತ್ ಆದಾಂಗೆನೇ. ಮತ್ತೆ ಯಾವುದೇ ಫಂಕ್ಷನ್‌ಗೂ ಅದರ ಉಡಿಕೆ ಹೋದುಲೆ, ಸ್ಟೇಟಸ್‌ಲಿ ಹೊಸ ಹೊಸ ಸೀರೆಗಳೇ ಕಾಣೊಕಲ. ಇದು ಎಲ್ಲರ ಮನಸ್ಥಿತಿ ಕೂಡಾ.
ಬರೀ ಮೂರ್ನಾಲ್ಕು ಗಂಟೆ ಉಡುವ ಈ ಸೀರೆಗೆ ಸಾವಿರ, ಲಕ್ಷ ಖರ್ಚು ಮಾಡಿ ಪೋಲು ಮಾಡುವ ಬದಲು ಒಂದು ಚೂರು ಕಡಿಮೆ ರೇಟ್‌ದು ತಕಂಡ್ರೆ ಮನೆವ್ಕೂ ಖರ್ಚು ಕಡಿಮೆ ಆದಾಂಗೆ. ದುಡ್ಡು ಇದ್ದವರ ವಿಷಯ ಬೇರೆ. ಕಷ್ಟಪಟ್ಟು ಕೆಲಸ ಮಾಡಿ ಸಂಪಾದನೆ ಮಾಡುವ ನಮ್ಮಂತ ಮಧ್ಯಮ ವರ್ಗದ ಕುಟುಂಬದ ಹೆಣ್ಣು ಮಕ್ಕಳಿಗೆ ಇಂತ ಯೋಚನೆ ಬಂದರೆ ಈ ಒಳ್ಳ ಸೀರೆಗೆ ವಿಪರೀತ ಖರ್ಚು ಮಾಡುವ ಪರಿಸ್ಥಿತಿ ಬಾದುಲೆ ಅಲ..
ಪವನಿಗೆ ಲಕ್ಷ ಹೊಂದ್ಸುದೆಲ್ಲಿಂದ?
ಇನ್ನು ಚಿನ್ನದ ವಿಷಯಲೂ ಸ್ಟೇಟಸ್ ಮೈಂಟೇನ್ ಮಾಡ್ದರ ನೋಡ್ಕನ ನೆಗೆ ಬಂದದೆ. ಇತ್ತ ಅಪ್ಪನೊಟ್ಟಿಗೆ ಹತ್ತು ಪವನ್ ಎಲ್ಲ ಸಾಕಾಕಿಲೆ, ಒಂದು ಇಪ್ಪತ್ತಾದರೂ ಬೇಕು ಅಂತ ಮಗಳ ವಾದ. ಮಗಳಿಗೆ ಓದ್ಸಿಕೆ ಆದರೂ ಅಪ್ಪ ಅಮ್ಮ ಇಷ್ಟೊಂದು ತಲೆ ಕೆಡಿಸಿಕೊಂಬಲ್ಲೆ. ಆದರೆ ಮೊದುವೆಲಿ ಚಿನ್ನ ಹಾಕಿಕೆ ಪಡುವ ಬೇನೆ ಸಣ್ಣದಲ್ಲ. ಈಗನ ಚಿನ್ನದ ರೇಟ್ ಕೇಳಿರೆ ತಲೆ ತಿರ್ಗುವಾಂಗೆ ಉಟ್ಟು. ಅಂತದರ್ಲಿ ರಾತ್ರಿ ಹಗುಲು ಕೈ ಕಾಲಿಗೆ ಒಂಚೂರೂ ರೆಸ್ಟ್ ಇಲ್ಲದೆ, ಕಾಲು ನೆಲಕೆ ಊರಿಕೆನೂ ಟೈಮಿಲ್ಲದೆ ದುಡಿವ ಆ ಅಪ್ಪ ತೇಳುವ ಇಳಿ ಜೀವ ಅದೆಲ್ಲಿಂದ ಇಪ್ಪತ್ತು ಪವನ್‌ಗೆ ಬೇಕಾಗುವಷ್ಟು ಲಕ್ಷಗಳ ಹೊಂದುಸುದು ತೇಳುವ ಸಣ್ಣ ಪರಿಜ್ಞಾನ ಮಗಳಿಗೆ ಇದ್ದಿದ್ದರೆ ಯಾರಿಗೂ ಗೊತ್ತಿಲ್ಲದಾಂಗೆ ಕಣ್ಣೀರು ಸುರ್ಸಿ ಕಣ್ಣಿಗೆ ಕಾಡು ಬಿದ್ದು ಕಣ್ಣು ಕೆಂಪಾದ್ದ್‌ತ ತನ್ನ ಮನ್ಸುನೊಳಗೆ ಹುಕ್ಕು ಕುದ್ದ ಬೇನೆನ ಕಸದ ಮೇಲೆ ದೂರು ಹಾಕುವ ಕಷ್ಟ ಅಪ್ಪಂಗೆ ಬಾತಿತ್ಲೆ. ಮಕ್ಕಳಿಗೆ ಬೇಕಾಗಿ ಜೀವ ಸವ್ಸಿದ ಅಪ್ಪನ ಕಣ್ಣ್‌ಲಿ ಆನಂದಭಾಷ್ಟ ಮಾತ್ರ ಸುರಿತಿತ್ತಲ..ಅತ್ತ ಸೊಸೆ ಮನೆಗೆ ಕಾಲಿಟ್ಟಾಂಗೆ ತಂದ ಚಿನ್ನ ಎಷ್ಟುಟ್ಟುತ ಲೆಕ್ಕ ಹಾಕುವ ಅತ್ತೆ, ಮಾವಂಗೂ “ನಮ್ಮ ಮಗಳು ಇನ್ನೊಬ್ಬರ ಮನೆಗೆ ಹೋಕನ ನಾವ್ಗೆನೂ ಕಷ್ಟʼತೇಳುವ ಯೋಚನೆ ಬಂದರೆ ಕ್ಷೇಮ ಅಲ.
ತಾಳಿಚೈನುಗೂ ಸ್ಟೇಟಸ್!
ಆಚೆ ಮನೆ ಗೂಡೆಗೆ ತಾಳಿ ಚೈನ್ ಆರು ಪವನ್ ಹಾಕಳಗಡ. ಆರು ಇತ್ಲರೂ ಐದಾದ್ರು ಬೇಕೇ ಅಂತ ಹೈದನೊಟ್ಟಿಗೆ ಗೂಡೆನ ಹಠ. ತಾಳಿ ಚೈನ್ ಎಲ್ಲಾರ್ ಸಣ್ಣದಾತ್‌ತೇಳ್ರೆ ಆ ಹೈದ ಬರೀ ಕೈಲಾಗದವ ಎಂಬ ಮಟ್ಟಿಗೆ ಈಗನವು ಮುಂದುವರ್ದೊಳ. ಈ ಹಿಂದೆ ಮೊದುವೆ ಆದ ಚಿಕ್ಕಪ್ಪ, ದೊಡ್ಡಪ್ಪ, ಮಾವ, ಅತ್ತೆನ ಮಕ್ಕಳಿಗೆ ಆರು ಪವನ್ ತಾಳಿ ಚೈನ್ ಹಾಕಳ, ಹೊಕ್ಕುಳು ಮುಟ್ಟ ಉದ್ದ ಉಟ್ಟು, ಕುತ್ತಿಗೆಲಿ ಎಷ್ಟು ಎದ್ದುಕಂಡದೆ ಗೊತ್ತುಟಾ, ನಂಗೂ ಅಂತದೇ ಆಕು ಅಂತ ಹಠ. ತಾಳಿ ಕಟ್ಟುದು ಶೋಕಿಗೇ ಬೇಕಾಗಿ ಅಲ್ಲ, ಅದು ಎಷ್ಟು ಉದ್ದ ಉಟ್ಟು, ಅದರ್ಲಿ ಎಷ್ಟು ಚಿನ್ನ ಉಟ್ಟು ತೇಳಿ ಅಳೆವ ಶೋಕಿಗೆ ಅದು ಇರ್ದಲ್ಲ, ಹಿಂದೂ ಸಂಸ್ಕೃತಿನ ಪ್ರಕಾರ ತಾಳಿ ಹೆಣ್ಣು ಗಂಡು ಸಂಬಂಧನ ಅಧಿಕೃತವಾಗಿ ಒಂದು ಮಾಡಿ ಅವು ಇಬ್ಬರು ಇನ್ನು ಮುಂದೆ ಒಟ್ಟಿಗೇ ಬಾಳಿ ಬದ್ಕೊಕು ತೇಳಿ ಪ್ರತಿನಿಧಿಸುವ ಪವಿತ್ರ ಬಂಧ ಅದು. ಆದರೆ ಆ ತಾಳಿಚೈನ್ ಹಾಕುದರ್ಲಿ ಕೂಡಾ ಈಗ ಸ್ಟೇಟಸ್ ನೋಡುವ ಹಂತಕ್ಕೆ ಜನ ಹೋಗಳ. ಬರೀ ಒಂದು ಮೊದುವೆಗೆ ಬೇಕಾಗಿ ಶಿಕ್ಷಣ ಮುಗ್ಸಿದಾಂಗೆ ಪೇಟೆಲಿ ಹೋಗಿ ದೊಡ್ಡವರ ಬೈಗಳು ಕೇಳಿಕೊಂಡು ದುಡ್ದ ದುಡ್ಡು ಎಲ್ಲಾ ಈಗನ ಚಿನ್ನದ ರೇಟ್‌ನೊಟ್ಟಿಗೆ ಏರಿಕಂಡ್ ಹೋಗಿರ್ವ ತಾಳಿ ಚೈನ್‌ನ ʼಪವನ್ ಪ್ರಮಾಣʼ ಹೈದನ ಹೈರಾಣಾಗಿಸ್ತುಟ್ಟು ತೇಳ್ದು ಕೂಡಾ ಅಷ್ಟೇ ಸತ್ಯ. ಗೂಡೆ ಸಿಕ್ಕದೆ ಬೇಜಾರ್‌ಲಿರುವ ಹೈದಂಗಳಿಗೆ ಸಿಕ್ಕಿದ ಗೂಡೆ ಹೇಳ್ದಕ್ಕೆಲ್ಲಾ ಒಪ್ಪೇ ಒಪ್ಪಕಾದ ಮನಸ್ಥಿತಿ ಇನ್ನೊಂದು ಕಡೆ.
ಈ ಸೀರೆ ಮತ್ತು ಚಿನ್ನದ ಮೇಲೆ ಹೆಣ್ಮಕ್ಕಳಿಗೆ ಇರುವ ವ್ಯಾಮೋಹದ ಬಗ್ಗೆ ನಂಗೆ ಒಂದೊದ್ಸಲ ಬೇಜಾರಾಗುದು ಉಟ್ಟು. ಈ ಬಗ್ಗೆ ಹೇಳ್ಕನೆಲ್ಲ ನನ್ನಮ್ಮ ನಂಗೆ “ನೀ ಒಂದು ವಿಚಿತ್ರ ಗೂಡೆʼ ಅಂತ ಹೇಳುವೆ. ಅದೂ ಮಧ್ಯಮ ವರ್ಗದ ಕುಟುಂಬದ ವಿಷಯಲಿ ಮಾತ್ರ. ಆಚೆ ಆರಕ್ಕೆ ಏರಿಕಾಗದೆ, ಈಚೆ ಮೂರಕ್ಕೆ ಇಳೆಕೆ ಆಗದೆ ಅಡಕತ್ತರಿಲಿ ಸಿಕ್ಕಿಕಂಡಿರುವ ಬದ್ಕು ನಮ್ಮಂತ ಮಧ್ಯಮ ವರ್ಗದ ಕುಟುಂಬಗಳ್ದು. ಇಂತ ಕುಟುಂಬಗ ಮಕ್ಕಳ ಓದುಸಿಕೆ ಖರ್ಚು ಮಾಡ್ದಕ್ಕಿಂತ ಹೆಚ್ಚು ಮೊದುವೆಗೆ ಖರ್ಚು ಮಾಡಕಾದೆ. ಇದೆಲ್ಲ ಯೋಚಿಸ್ಕನ ಬರೀ ಒಂದು ದಿನ ಉಡುವ ಸೀರೆಗಳಿಗೆ ಯಾಕೆ ಸಾವಿರ ಸಾವಿರ ಖರ್ಚು ಮಾಡ್ದು, ಬೇರೆವರ ತರ ನಾವೂ ಖರ್ಚು ಮಾಡೊಕು, ಅವರಾಂಗೆ ದೊಡ್ಡ ರೇಟ್‌ನ ಸೀರೆ ಉಡೊಕು, ಅವರಾಂಗೆ ಮೈತುಂಬಾ ಚಿನ್ನ ಹಾಕೊಕು ತೇಳುವ ಮನಸ್ಥಿತಿನೇ ಮನುಷ್ಯನ ಅರ್ಧ ಕೊಲ್ಲುವ ಸ್ಲೋ ಪಾಯ್ಸನ್. ಇಂತ ಯೋಚನೆಗ ಇದ್ದರೆ ಮತ್ತು ಆ ಯೋಚನೆಗೆ ತಕ್ಕ ಪ್ರತಿಕ್ರಿಯೆ ಗಂಡ ಅಥವಾ ಅಪ್ಪಂದ ಸಿಕ್ಕದೇ ಇದ್ದಲ್ಲಿ ಆ ಮನೆಲಿ ನೆಮ್ಮದಿನೂ ಹೊರ್ಟೋದೆ, ಒಟ್ಟಿಗೆ ಅಂತಹ ಯೋಚನೆ ಬೆಳ್ಸಿಕಂಡವರ ಬೊದ್ಕುಸ ಅದೇ ಚಿಂತೆಲಿ ಹಾಳಾಗುವಾಂಗೆ ಆದೆ. ಇದ್ದದರ್ಲೇ ಖುಷಿ ಪಡುವ ಮತ್ತು ಚಿನ್ನ, ಸೀರೆನ ವಿಷಯ ಮನ್ಸಿಂದ ತೆಗ್ದು ಹಾಕುವ ಹೆಣ್ಮಕ್ಕ ಜೀವನಲಿ ಸದಾ ಪರಮಸುಖಿ ಆಗಿದ್ದವೆ. ಇಂತ ಮನ್ಸು ಎಲ್ಲಾ ಹೆಣ್ಮಕ್ಕಳ್ದಾಗಲಿ.
✍️ ಧನ್ಯಾ ಬಾಳೆಕಜೆ