ಕೋಟಿಗಟ್ಟಲೆ ಆಸ್ತಿ, ಉದ್ಯಮಿ ಮಗ, ಲಾಯರ್ ಪುತ್ರಿಯನ್ನು ಹೊಂದಿರುವ ಲೇಖಕರೊಬ್ಬರು ವೃದ್ದಾಶ್ರಮದಲ್ಲಿದ್ದುಕೊಂಡು ಅನಾಥರಾಗಿ ಜೀವ ತೆತ್ತ ಸುದ್ದಿಯೊಂದು ಹಲವರ ಮನಸ್ಸನ್ನು ಘಾಸಿಗೊಳಿಸಿತ್ತು. ಜೊತೆಗೆ ತಮ್ಮ ಮಕ್ಕಳ ಲಕ್ಷ ಲಕ್ಷ ಪ್ಯಾಕೇಜ್‌ಗಳ ಬಗ್ಗೆ ಬಿಲ್ಡಪ್ ಕೊಡುವ ಹೆತ್ತವರಿಗೆ ಇದೊಂದು ಎಚ್ಚರಿಕೆ ಗಂಟೆಯೂ.
ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಮಾತೊಂದಿದೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಮಕ್ಕಳನ್ನು ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿಸುವ ಹೆತ್ತವರು, ಆ ಮಕ್ಕಳಿಗೆ ಹೇಳಿ ಕೊಡುವುದು ಲಕ್ಷ ಎಣಿಸುವ ದಾರಿಗಳ ಬಗ್ಗೆಯೇ ಹೊರತು ಬದುಕುವ ಕಲೆಯ ಬಗ್ಗೆಯಲ್ಲ. ಬಹುಶಃ ಪ್ರತೀ ಹೆತ್ತವರು ಮಾಡುವ ದೊಡ್ಡ ತಪ್ಪೇ ಇದು.
ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ನನಗೆ ಶಿಕ್ಷಣ ಬೀಟ್ ಇದ್ದುದರಿಂದ ಪಿಯುಸಿ, ಸಿಇಟಿ ಫಲಿತಾಂಶಗಳ ದಿನ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮಾತನಾಡಿಸುವುದಕ್ಕೆಂದು ಹೋಗುತ್ತಿದ್ದೆ. ಲಕ್ಷ ಲಕ್ಷ ವ್ಯಯಿಸಿ ಕೆಲವು ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳೇ ರ್ಯಾಂಕ್ ಗಳಿಸುತ್ತಿದ್ದರು. ಅಂತಹ ವಿದ್ಯಾರ್ಥಿಗಳನ್ನು ನೋಡಿದಾಗ ನಿಜವಾಗಲು ಅಯ್ಯೋ ಪಾಪ ಎನಿಸುತ್ತಿತ್ತು. ಕಾಲೇಜು, ಹಾಸ್ಟೆಲ್‌ನ ನಾಲ್ಕು ಗೋಡೆಗಳ ಮಧ್ಯೆ ಇರಿಸಿ ಕೇವಲ ರ್ಯಾಂಕ್‌ಗೋಸ್ಕರವೇ ತಯಾರು ಮಾಡಿದಂತಿರುತ್ತಿದ್ದವು ಆ ವಿದ್ಯಾರ್ಥಿಗಳ ನಡೆನುಡಿ, ಹಾವಭಾವ ಎಲ್ಲವೂ. ಸಾಮಾನ್ಯ ಜ್ಞಾನದ ʼಸಾಮಾನ್ಯ ಜ್ಞಾನʼವೂ ಆ ವಿದ್ಯಾರ್ಥಿಗಳಿಗೆ ಗಗನ ಕುಸುಮ.
ಇತ್ತೀಚೆಗೆ ಹಾಡೊಂದನ್ನು ಆಲಿಸುತ್ತಿದ್ದೆ. ತರಗತಿ ಕೋಣೆಯ ಕೊನೆಯ ಬೆಂಚ್‌ನಲ್ಲಿ ಕುಳಿತ ಹುಡುಗ ಕಂಪೆನಿಯೊಂದನ್ನು ಹುಟ್ಟು ಹಾಕಿ ಬಾಸ್ ಪಟ್ಟಕ್ಕೇರಿದ್ದ. ಅದೇ ತರಗತಿಯ ಮೊದಲ ಬೆಂಚ್‌ನಲ್ಲಿ ಕುಳಿತ ರ್ಯಾಂಕ್ ವಿದ್ಯಾರ್ಥಿ ಅದೇ ಕೊನೆಯ ಬೆಂಚ್‌ನಲ್ಲಿ ಕುಳಿತ ಹುಡುಗ ಕಟ್ಟಿದ ಕಂಪೆನಿಯ ಉದ್ಯೋಗಿಯಾಗಿದ್ದ. ಇದು ಆ ಹಾಡಿನ ತಿರುಳು. ಬಹುಶಃ ಅಂಕವೇ ಮಾನದಂಡವಾದಾಗ ಆಗುವ ಪರಿಸ್ಥಿತಿಯನ್ನು ಈ ಹಾಡು ಸೂಕ್ಷ್ಮವಾಗಿ ತಿಳಿಸಿಕೊಡುವಂತಿತ್ತು.
ಪ್ರಸ್ತುತ ಸಮಾಜದಲ್ಲಿ ಬದುಕು ಎಂದರೆ ಹಣ ಮಾಡುವುದಷ್ಟೇ ಎಂಬಂತಾಗಿದೆ. ಆಗಲೇ ಹೇಳಿದಂತೆ ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬಂತೆ, ಹಣದ ರುಚಿಯೊಂದು ಹತ್ತಿ ಬಿಟ್ಟರೆ ಮಿಕ್ಕಿದ್ದೆಲ್ಲಾ ಪಕ್ಕಕ್ಕೇ. ಸಂಬಂಧಗಳು ದೂರವೇ. ಹೆತ್ತವರೂ..
ಒಂಬತ್ತು ತಿಂಗಳು ಉದರ ಭಾರ ಹೊತ್ತುಕೊಂಡು ಸಾಕಿ, ಕೊನೆಗೊಂದು ದಿನ ಮಗುವಿಗೆ ಜನ್ಮ ನೀಡಿ ಆ ಮಗುವಿನ ಹರೆಯದವರೆಗೂ ಸಂಪೂರ್ಣ ಲಾಲನೆ ಪೋಷಣೆ ಮಾಡಿದ ತಾಯಿ, ಅದಕ್ಕೆ ಏನೂ ಕಮ್ಮಿಯಾಗದಂತೆ ತಮ್ಮೆಲ್ಲಾ ಶ್ರಮವನ್ನು ಅದರ ಬೆಳವಣಿಗೆಗೆ ಹಾಕಿದ ತಂದೆ..ಇವರಿಬ್ಬರ ಶ್ರಮಕ್ಕೂ ಕೊನೆಗೆ ಸಿಗುವುದು ವೃದ್ದಾಶ್ರಮದ ವಾಸವೆಂದರೆ ಇವತ್ತಿನ ಜಗತ್ತು ಎಲ್ಲಿಗೆ ಸಾಗುತ್ತಿದೆ ಎಂಬುದೇ ಅರ್ಥವಾಗದ ವಿಚಾರ. ಇದರಲ್ಲಿ ಮಕ್ಕಳದೆಷ್ಟು ತಪ್ಪಿದೆಯೋ ಹೆತ್ತವರದ್ದು ದುಪ್ಪಟ್ಟು ತಪ್ಪಿದೆ. ಲಕ್ಷ ಲಕ್ಷ ಕೊಟ್ಟು ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿಸುವ ಅದೇ ತಂದೆ ತಾಯಿ ಮಕ್ಕಳನ್ನು ತಯಾರು ಮಾಡುವುದು ಲಕ್ಷ ಎಣಿಸುವುದಕ್ಕೆ ಹೊರತು ಜೀವನ ನಡೆಸುವುದಕ್ಕೆ ಅಲ್ಲ. ಮನೆಯಲ್ಲಿ ಹಣ, ಜಾಗದ ವಿಷಯ ಬಿಟ್ಟರೆ ಬೇರೆ ಏನಿಲ್ಲ. ಓದು, ಅಂಕ ಗಳಿಸು, ಉದ್ಯೋಗ ಹಿಡಿ, ಹಣ ಮಾಡು, ಜಾಗ ಖರೀದಿಸು, ಶ್ರೀಮಂತರನ್ನೇ ಮದುವೆಯಾಗು…ಇವಿಷ್ಟೇ ಈಗಿನ ಹೆತ್ತವರು ಮಕ್ಕಳಿಗೆ ಹೇಳಿಕೊಡುವ ಪಾಠ. ತನ್ನ ಮಗ/ಮಗಳಿಗೆ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಸಿಕ್ಕಿದೆ. ವರ್ಷಕ್ಕೆ ಇಷ್ಟು ಲಕ್ಷ ಪ್ಯಾಕೇಜ್! ಎನ್ನುವಲ್ಲಿಗೆ ಬಹುತೇಕ ಹೆತ್ತವರು ತಮ್ಮ ಜೀವನ ಪಾವನವಾಗುತ್ತದೆ ಎಂದು ನಂಬಿದ್ದಾರೆ.
ಬಹುಶಃ ಶ್ರೀಮಂತಿಕೆಯ ಕನಸಿನ ಗೋಪುರದಲ್ಲಿ ಬದುಕು ನುಚ್ಚುನೂರಾಗುತ್ತಿರುವ ವಿಚಾರ ಗಮನಕ್ಕೆ ಬರುವುದೇ ಇಲ್ಲ.
ಪ್ರತೀ ಮಕ್ಕಳು ಗಳಿಸುವ ಹಣದ ಹಿಂದೆ ಹೆತ್ತವರ ಮತ್ತೆಂದೂ ಸಿಗದ ಅಮೂಲ್ಯ ಯೌವನ ಸವೆದಿರುತ್ತದೆ ಎಂಬ ಕನಿಷ್ಠ ಪ್ರಜ್ಞೆ ಮಕ್ಕಳಿಗೆ ಇರುವುದಿಲ್ಲ. ಹಣ ಮಾಡುವುದೊಂದೇ ಅವರ ಮೂಲ ಉದ್ದೇಶ. ಮಕ್ಕಳು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಅದೆಷ್ಟೇ ದುಡ್ಡು ಗಳಿಸಿದರೂ ಅದು ಹೆತ್ತವರು ಸವೆಸಿದ ಅವರ ಯೌವನದ ಭಿಕ್ಷೆಯಷ್ಟೇ. ಇಂದಿರುವ ಮನುಷ್ಯ ನಾಳೆ ಇರುವುದಿಲ್ಲ. ಹಾಗಿರುವಾಗ ಇಂದು ದುಡಿದ ಹಣಕ್ಕೂ ಮೌಲ್ಯವೇನಿದೆ? ನಾಳೆ ಅದನ್ನು ಅನುಭವಿಸಲು ಸಿಗದೇ ಹೋದರೆ ಕೂಡಿಟ್ಟ ಕಾಸಿಗೆ ಅರ್ಥವೆಲ್ಲಿದೆ?
ಜಗತ್ತಿನಲ್ಲಷ್ಟೇ ಯಾಕೆ, ವಿಶಿಷ್ಟ ಪರಂಪರೆಯನ್ನು ಹೊಂದಿರುವ ನಮ್ಮ ಭಾರತದಲ್ಲಿಯೂ ಅನಾಥಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ. ಅನಾಥಾಶ್ರಮವಾಸಿಗಳ ಸಂಖ್ಯೆಯೂ ಅಧಿಕಗೊಳ್ಳುತ್ತಿದೆ ಎಂಬುದು ಅತಿ ಭಯಾನಕ ವಿಚಾರವೇ ಸರಿ. ಜನ್ಮ ಕೊಟ್ಟವರನ್ನೇ ಮನೆಯಲ್ಲಿ ಇರಿಸಿಕೊಳ್ಳಲಾಗದ, ಅವರ ಆಸ್ತಿ ಲಪಟಾಯಿಸಿ ಅವರನ್ನು ಅನಾಥರನ್ನಾಗಿಸುವ ವಿದ್ಯಾವಂತ ಮಕ್ಕಳ ಸಂಖ್ಯೆ ಅಧಿಕಗೊಳ್ಳುತ್ತಿರುವುದು ಖೇದಕರ. ಇಂತಹ ಮಕ್ಕಳಿಗೆ ಜನ್ಮ ನೀಡುವುದಕ್ಕಿಂತ ಆ ತಂದೆ ತಾಯಿಗೆ ಮಕ್ಕಳಿಲ್ಲವೆಂಬ ಕೊರಗೇ ಎಷ್ಟೋ ವಾಸಿಯಲ್ಲವೇ?
✍️ *ಧನ್ಯಾ ಬಾಳೆಕಜೆ*