ತುಳುನಾಡಿನ ಜನ ಜೀವನದಲ್ಲಿ ಮಹತ್ವವಾದ ಹಬ್ಬ ಈ ತುಡರ ಹಬ್ಬ, ದೀಪಾವಳಿ ಹಬ್ಬವನ್ನು ಈ ಭಾಗದಲ್ಲಿ ತುಡರ ಹಬ್ಬ ಎನ್ನುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬ. ಈ ಹಬ್ಬದ ಹಿಂದೆ ಹಲವಾರು ಪುರಾಣ ಕಥೆಗಳು, ಸಾಂಸ್ಕೃತಿಕ ಆಚರಣೆಗಳಿವೆ .ಈ ದೀಪಾವಳಿಯು ಹಿಂದೂ ಧರ್ಮದ ಪ್ರಕಾರ ರಾಮಾಯಣದ ಕಥೆಗೂ ಸಂಬಂಧಿಸಿದೆ. ಕರಾವಳಿ ಭಾಗದಲ್ಲಿ ಈ ದೀಪಗಳ ಹಬ್ಬವನ್ನು ಮೂರು ದಿನಗಳ ಕಾಲ ಆಚರಿಸುತ್ತೇವೆ. ಮೊದಲನೆಯ ದಿನ ನರಕ ಚತುರ್ದಶಿ, ಈ ದಿವಸದಂದು ಎಣ್ಣೆ ಸ್ನಾನ ಮಾಡುವಂತಹ ಸಂಪ್ರದಾಯವಿದೆ. ಹೀಗೆ ಮಾಡುವುದರಿಂದ ದೇಹದಲ್ಲಿರುವ ಚರ್ಮ ವ್ಯಾದಿ ದೂರ ಮಾಡುತ್ತದೆ ಎಂದು ವೈಜ್ಞಾನಿಕ ವಾಗಿ ತಿಳಿಸಲಾಗಿದೆ. ಈ ದಿನದ ಇನ್ನೊಂದು ವಿಶೇಷತೆ ಏನೆಂದರೆ, ಭೂದೇವಿ ಮತ್ತು ವರಹನ ಮಗನಾದ ನರಕಾಸುರನು ಶ್ರೀ ಕೃಷ್ಣನಿಂದ ವಧೆ ಆದ ಈ ದಿನವನ್ನು ನರಕ ಚತುರ್ದಶಿ ಆಗಿ ಆಚರಿಸುತ್ತೇವೆ.ನರಕಾಸುರನಿಗೆ ಒಂದು ಶಾಪವಿತ್ತು ಅದೇನೆಂದರೆ..ಹೆಣ್ಣು ಒಬ್ಬಳು ತನ್ನ ಸಾವಿಗೆ ಕಾರಣ ವಾಗುವಳು ಎಂದು. ಎರಡನೇ ದಿನದಂದು ನಮ್ಮಲ್ಲಿ ಬಲಿಯಂದ್ರ ಮರ ಹಾಕುವ ಪದ್ಧತಿ ಇದೆ ಹಾಲೆ ಮರದ ಎರಡು ಕಂಬವನ್ನು ಮನೆಯ ಮುಂದೆ (ತುಳಸಿ ಗಿಡದ ಪಕ್ಕದಲ್ಲಿ ನೆಡುತ್ತಾರೆ ) ನಂತರ ಗೊಂಡೆ ಹೂವು, ದಾಸವಾಳ ಹೀಗೆ ಹಲವಾರು ಬಗೆಯ ಹೂಗಳನ್ನು ಮಾಲೆ ಮಾಡಿ ಹಾಕಿ ಕಂಬದ ಕಾಲಿಗೆ ಗೆಜ್ಜೆಯನ್ನು ಕಟ್ಟುತ್ತಾರೆ. ಹೀಗೆ ಶೃಂಗರಿಸಿ ಕಂಬದ ಮೇಲೆ ಮಣ್ಣಿನ ದೀಪದಲ್ಲಿ ದೀಪ ಹಚ್ಚುತ್ತಾರೆ.ಈ ದಿನದಂದು ಬಲಿಯೇಂದ್ರನಿಗೆ ಬಾಳೆ ಎಲೆಯ ಮೇಲೆ ಅಕ್ಕಿ ಮತ್ತು ತೆಂಗಿನಕಾಯಿ ಇಡುತ್ತಾರೆ. ಬಲಿಪಾಡ್ಯಮಿಯ ಮೂರನೇ ದಿನರಾತ್ರಿ ಬಲಿಯೇಂದ್ರ ಮರಕ್ಕೆ ಪೂಜೆ ನಡೆಯುತ್ತದೆ ಆ ವೇಳೆ ಸಂಧಿಯ ಮೂಲಕ ಮೂರು ಬಾರಿ ಬಲಿಯೇಂದ್ರ ನನ್ನು ಕರೆಯುತ್ತಾರೆ. ಅಂದಿನ ದಿನ ಬಾಳೆ ಎಲೆಯ ಮೇಲೆ ಅಕ್ಕಿ ಮತ್ತು ಸೌತೆಕಾಯಿ ಇಡುತ್ತಾರೆ. ಎಲ್ಲ ಪೂಜೆ ಆದ ನಂತರ ಗೋವುಗಳಿಗೆ ರಾತ್ರಿಯ ಹೊತ್ತಿನಲ್ಲಿ ಬೆಳಕನ್ನು ತೋರಿಸುವ ಪದ್ಧತಿ ಇದೆ. ದನಗಳನ್ನು ತೊಳೆದು ಕತ್ತಿಗೆ ಹೂವಿನ ಮಾಲೆ ಹಾಕಿ ಕುಂಕುಮ ಇಟ್ಟು ತಿನ್ನಲು ಸೌತೆಕಾಯಿ ಉದ್ದಿನ ದೋಸೆ ಅವಲಕ್ಕಿ ಬೆಲ್ಲ ವನ್ನೆಲ್ಲ ನೀಡುತ್ತಾರೆ. ಇಲ್ಲಿಯ ಇನ್ನೊಂದು ವಿಶೇಷ ಆಚರಣೆ ಎಂದರೇ ತೀರಿಕೊಂಡವರಿಗೆ ಅವಲಕ್ಕಿ ಹಾಕುವ ಕ್ರಮವಿದೆ. ಇದನ್ನು ತುಳುವಿನಲ್ಲಿ ಸೈತಿನಕುಲೆನ ಪರ್ಬ ಮತ್ತು ಬಜಿಲ್ ಪಡುನ ಎಂದು ಕರೆಯುತ್ತಾರೆ. ಅಮಾವಾಸ್ಯೆಯ ದಿನ ಹೆಣ್ಣು ಜನಕ್ಕೆ ಅವಲಕ್ಕಿ ಹಾಕುತ್ತಾರೆ. ಪಾಡ್ಯದಲ್ಲಿ ತೀರಿ ಹೋದ ಗಂಡಸರಿಗೆ ಅವಲಕ್ಕಿ ಹಾಕುತ್ತಾರೆ. ಇಂತಹ ಆಚರಣೆ ಕ್ರಮ ಮತ್ತು ಸಂಪ್ರದಾಯವನ್ನು ನಮ್ಮ ಕರಾವಳಿ ಭಾಗದಲ್ಲಿ ಜನರು ಅನಾದಿ ಕಾಲದಿಂದ ನಡೆಸಿಕೊಂಡು ಬಂದ ಪದ್ಧತಿಯಾಗಿದೆ.
ದೀಪಿಕಾ ದೋಳ
ಪ್ರಥಮ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ವಿವೇಕಾನಂದ ಕಾಲೇಜು ಪುತ್ತೂರು