ಭಟ್ಕಳ: ಸೂರಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದ ತಾಲೂಕಿನ ಕೋಣಾರ ಬೀಳೂರಮನೆ ವ್ಯಾಪ್ತಿಯ ಕುಟುಂಬವೊಂದಕ್ಕೆ ಭಟ್ಕಳ ಸಾಲಗಾರರ ಕ್ಷೇಮಾಭಿವೃದ್ಧಿ ಸಂಘ (ರಿ) ಭಟ್ಕಳ ಇದರ ವತಿಯಿಂದ ಸುಮಾರು 6.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ‘ಪುನೀತ್ ರಾಜ್ ಕುಮಾರ್’ ಆಶ್ರಯ ಮನೆಯನ್ನು ಮಾಜಿ ಶಾಸಕ ಜೆ.ಡಿ.ನಾಯ್ಕ ಉದ್ಘಾಟಿಸಿದರು.
ಅವರು ಮಾತನಾಡಿ, “ಸಾಲಗಾರರ ಕ್ಷೇಮಾಭಿವೃದ್ಧಿ ಸಂಘ ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಟ್ಟಿರುವುದು ಸಂತಸದ ಸಂಗತಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯು ಅರಣ್ಯದಿಂದ ಆವೃತವಾಗಿದ್ದು, ಹೆಚ್ಚಿನ ಜನರು ಅರಣ್ಯ ಪ್ರದೇಶದಲ್ಲಿಯೇ ವಾಸ ಮುಂದುವರೆಸಿದ್ದಾರೆ. ದನ ಕರುಗಳ ಆರೈಕೆಗೂ ಅರಣ್ಯವನ್ನೇ ಅವಲಂಬಿಸಿದ್ದಾರೆ. ಈ ಹಿಂದೆ ಅರಣ್ಯ ಪ್ರದೇಶದಲ್ಲಿಯೇ ಆಶ್ರಯ ಮನೆಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ ಈಗ ಅದಕ್ಕೆ ಅರಣ್ಯಾಧಿಕಾರಿಗಳು ತಡೆಯೊಡ್ಡುತ್ತಿದ್ದಾರೆ. ಕೋಣಾರದಲ್ಲಿ ಪುನೀತ್ ರಾಜಕುಮಾರ ಹೆಸರಿನಲ್ಲಿ ಮನೆ ನಿರ್ಮಾಣ ಪುಣ್ಯದ ಕೆಲಸವಾಗಿದೆ. ಇದಕ್ಕೆ ಅನೇಕ ದಾನಿಗಳು ಕೈ ಜೋಡಿಸಿರುವುದು ಸ್ತುತ್ಯಾರ್ಹವಾಗಿದೆ. ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು” ಎಂದು ಕರೆ ನೀಡಿದರು.