ದುಷ್ಟದಮನವಾಗಲಿ..ಮನೆ ಮನೆಗಳಲ್ಲಿ ದೀಪಾವಳಿಯ ಬೆಳಕು ತುಂಬಲಿ..

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಸಡಗರದಿಂದ ಆರಂಭಗೊಂಡಿದೆ. ಹಬ್ಬದ ತಯಾರಿಯೂ ಶುರುವಾಗಿದೆ. ಹಬ್ಬಗಳ ದೇಶ ಭಾರತದಲ್ಲಿ ವರ್ಷಪೂರ್ತಿ ಹಬ್ಬಗಳ ಸಂಭ್ರಮ. ಒಂದೊಂದು ರಾಜ್ಯ, ಜಿಲ್ಲೆ, ಪಂಗಡಗಳಲ್ಲಿ ಒಂದೊಂದು ಹಬ್ಬಗಳು ವೈಶಿಷ್ಟ್ಯ ಪಡೆಯುತ್ತದೆ. ಆದರೆ ಎಲ್ಲಾ ಹಬ್ಬಗಳ ಪೈಕಿ ಹಬ್ಬಗಳ ರಾಜ ದೀಪಾವಳಿಯಂತೂ ದೇಶಾದ್ಯಂತ ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ.
ದೀಪಾವಳಿ ಹೆಸರೇ ಹೇಳುವಂತೆ ದೀಪಗಳ ಹಬ್ಬ. ಮನೆಯಲ್ಲಿ ಸಾಲು ಹಣತೆ ಹಚ್ಚಿ, ಹೊಸ ಬಟ್ಟೆ ಧರಿಸಿ, ವೈವಿಧ್ಯ ಖಾದ್ಯ ತಯಾರಿಸಿ ಮನೆಮಂದಿಯೆಲ್ಲಾ ಜೊತೆ ಸೇರಿ ತಿನ್ನುವ, ಸಂಭ್ರಮಿಸುವ ಹಬ್ಬ ದೀಪಾವಳಿ. ಸಂಭ್ರಮದ ಆಚರಣೆಯೇ ದೀಪಾವಳಿಯ ಹಿರಿಮೆ. ಉತ್ತರ ಭಾರತದ ಕಡೆಗಳಲ್ಲಿ ದೀಪಾವಳಿಯನ್ನು ಐದು ದಿನಗಳ ಕಾಲ ಆಚರಿಸುತ್ತಾರೆ. ಕರ್ನಾಟಕದ ಕೆಲ ಭಾಗಗಳಲ್ಲಿಯೂ ಸಂಭ್ರಮ ಐದು ದಿನಗಳ ಕಾಲ ಇರುತ್ತದೆ. ನಮ್ಮ ತುಳುನಾಡಿನಲ್ಲಿ ಮೂರು ದಿನಗಳ ಕಾಲ ಮನೆಮನೆಗಳಲ್ಲಿ ಅದ್ದೂರಿಯ ದೀಪಾವಳಿಯ ಆಚರಣೆ ನಡೆಯುತ್ತದೆ.
ಅಶ್ವಯುಜ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನದಂದು ದೀಪಾವಳಿಯ ಆರಂಭ. ದೀಪಾವಳಿಯ ಆರಂಭದ ದಿನದಿಂದಲೇ ಮನೆಮನೆಗಳಲ್ಲಿ ಸಂಭ್ರಮ ಶುರುವಾಗುತ್ತದೆ. ಹಳೆ ಮೈಸೂರು ಭಾಗದಲ್ಲಿ ಮೊದಲ ದಿನದ ಹಬ್ಬವನ್ನು ನೀರು ತುಂಬುವ ಹಬ್ಬ ಎಂದು ಕರೆಯುತ್ತಾರೆ. ಅಂದು ಸ್ನಾನಗೃಹ, ಸ್ನಾನದ ಹಂಡೆಗಳನ್ನು ಶುಚಿಗೊಳಿಸಿ ಅಲಂಕರಿಸುವ ಪದ್ದತಿಯೂ ಇದೆ. ಶ್ರೀಕೃಷ್ಣನು ನರಕಾಸುರನನ್ನು ವಧಿಸಿ ಲೋಕವನ್ನು ಕಾಪಾಡಿದ ದಿನವನ್ನು ನರಕ ಚತುರ್ದಶಿ ಎಂದು ಆಚರಿಸುತ್ತಾರೆ. ತುಳುನಾಡಿನಲ್ಲಿ ನರಕ ಚತುರ್ದಶಿಯಂದು ದೀಪಾವಳಿಯ ಆರಂಭ. ಅಂದು ಮನೆಮಂದಿಯೆಲ್ಲಾ ಬೆಳಗ್ಗೆ ಎದ್ದು ಎಣ್ಣೆಸ್ನಾನ ಮಾಡಿ ಶುಚಿರ್ಭೂತರಾಗಿ ಹೊಸ ಬಟ್ಟೆ ಧರಿಸಿ ಹಬ್ಬವನ್ನು ಸಂಭ್ರಮಿಸುತ್ತಾರೆ. ತುಳುನಾಡಿನಲ್ಲಿ ಇದನ್ನು ಮೀಪುನ ಹಬ್ಬ ಎಂದು ಕರೆದರೆ, ಇನ್ನು ಕೆಲವೆಡೆ ಅಭ್ಯಂಗ ಸ್ನಾನ, ಎಣ್ಣೆಸ್ನಾನದ ದಿನ ಎಂದೆಲ್ಲಾ ಕರೆಯುತ್ತಾರೆ. ಎಣ್ಣೆ ಸ್ನಾನ ಮಾಡುವ ಪದ್ದತಿ ಒಂದೊಂದು ಕಡೆಗಳಲ್ಲಿ ಒಂದೊಂದು ದಿನಗಳಂದು ನಡೆಸಲಾಗುತ್ತದೆ. ಕೆಲವರು ದೀಪಾವಳಿಯ ಆರಂಭದ ದಿನದಂದೇ ಎಣ್ಣೆಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಹಬ್ಬವನ್ನು ಸ್ವಾಗತಿಸುತ್ತಾರೆ. ಕೆಲವೆಡೆಗಳಲ್ಲಿ ಹೊಸದಾಗಿ ಮದುವೆಯಾದ ಜೋಡಿ ದೀಪಾವಳಿಯಂದು ಎಣ್ಣೆಸ್ನಾನಕ್ಕಾಗಿ ತಪ್ಪದೇ ಹೆಣ್ಣಿನ ತವರು ಮನೆಗೆ ಆಗಮಿಸುವುದು ಪದ್ದತಿ.
ನರಕಾಸುರ ಎಂಬ ರಾಕ್ಷಸನನ್ನು ಶ್ರೀಕೃಷ್ಣ ವಧೆ ಮಾಡಿ ಲೋಕ ರಕ್ಷಣೆ ಮಾಡಿದ ಹಿನ್ನೆಲೆಯಲ್ಲಿ ಮೈಯಲ್ಲಿರುವ ಕೊಳೆಯನ್ನೆಲ್ಲಾ ತೊಡೆದು ಹಾಕುವ ಉದ್ದೇಶದೊಂದಿಗೆ ಈ ಎಣ್ಣೆಸ್ನಾನ ಮಹತ್ವ ಪಡೆಯುತ್ತದೆ. ಎಣ್ಣೆ ಸ್ನಾನ ಮಾಡಿದರೆ ಮೈಮನಕ್ಕೆ ಹೊಸ ಶಕ್ತಿಯ ಸಂಚಯನ. ದೈಹಿಕ ಆರೋಗ್ಯದ ದೃಷ್ಟಿಯಿಂದ ಎಣ್ಣೆಸ್ನಾನ ಮಾಡುವುದು ತೀರಾ ಪ್ರಯೋಜನಕಾರಿ. ನರಕಾಸುರನ ವಧೆಯ ದಿನವನ್ನು ಪಟಾಕಿ ಹೊಡೆದು ಸಂಭ್ರಮಿಸಲಾಗುತ್ತದೆ.
ತುಳುನಾಡಿನಲ್ಲಿ ಅಗಲಿದ ದಿವ್ಯಾತ್ಮಗಳಿಗೆ ಅಮವಾಸ್ಯೆ ಮತ್ತು ಬಲಿಪಾಡ್ಯಮಿಯಂದು ಅವುಲು ಹಾಕುವ ಪದ್ದತಿಯೂ ಇದೆ. ಮನೆಯಲ್ಲಿ ಯಾರಾದರೂ ತೀರಿಕೊಂಡರೆ ಹಬ್ಬದ ದಿನದಂದು ನೆಂಟರಿಷ್ಟರೆಲ್ಲಾ ಬಂದು ಆ ದಿವ್ಯಾತ್ಮಗಳಿಗೆ ಅವಲಕ್ಕಿ, ಬೆಲ್ಲ ಮುಂತಾದವುಗಳನ್ನು ಬಡಿಸಿ ಅವರನ್ನು ತೃಪ್ತಿಪಡಿಸುವ ಆಚರಣೆ ಇದು. ಪಿತೃಪಕ್ಷದಲ್ಲಿ ಪಿತೃತರ್ಪಣ ನೀಡಲಾಗದವರು ಈ ದಿನದಂದು ಪಿತೃತರ್ಪಣ ನೀಡುವ ಪದ್ದತಿ ಕೆಲವು ಕಡೆಗಳಲ್ಲಿವೆ.
ಇನ್ನು ದೀಪಾವಳಿಯಲ್ಲಿ ಸಂಭ್ರಮದ ಜೊತೆ ಪೂಜೆಗಳೂ ಮಹತ್ವ ಪಡೆದಿವೆ. ಅಂಗಡಿಗಳಲ್ಲಿ ಲಕ್ಷಿ ಪೂಜೆ, ಆಯುಧ ಪೂಜೆಯನ್ನೂ ದೀಪಾವಳಿಯಂದು ಮಾಡಲಾಗುತ್ತದೆ.
ಕೆಲವೆಡೆ ಐದು ದಿನಗಳ ಕಾಲ ದೀಪಾವಳಿಯನ್ನು ಆಚರಿಸಿದರೆ ತುಳುನಾಡಿನಲ್ಲಿ ಮೂರು ದಿನ ಸಂಭ್ರಮ ಹೆಚ್ಚಿರುತ್ತದೆ. ಮನೆಮಂದಿಯನ್ನೆಲ್ಲಾ ಒಟ್ಟು ಸೇರಿಸಿ ಸಂಭ್ರಮಿಸುವ ಶಕ್ತಿಯಿರುವುದು ಈ ದೀಪಾವಳಿ ಹಬ್ಬಕ್ಕೆ ಮಾತ್ರ. ಆದರೆ ಈಗೀಗ ಅಂತಹ ಸಂಭ್ರಮಗಳೂ ಕಳೆಗಟ್ಟಿರುವುದು ವಾಸ್ತವ. ಉದ್ಯೋಗ, ಶಿಕ್ಷಣಕ್ಕಾಗಿ ಮನೆಮಕ್ಕಳೆಲ್ಲಾ ದೂರದೂರಿಗೆ ತೆರಳುವುದರಿಂದ ರಜೆ ಮತ್ತಿತರ ಕಾರಣಗಳಿಂದಾಗಿ ಹಬ್ಬಕ್ಕೆ ಊರಿಗೆ ಬರಲಾಗದೆ ಊರಿನಲ್ಲಿನ ಹಬ್ಬದ ಸಂಭ್ರಮವನ್ನು ಕಳೆದುಕೊಳ್ಳುತ್ತಿದ್ದಾರೆ. ಹಬ್ಬ ಎಂದು ಒಟ್ಟು ಸೇರುವ ಪರಿಪಾಠವೂ ಇತ್ತೀಚಿನ ದಿನಗಳಲ್ಲಿ ಮೂಲೆಗುಂಪಾಗುತ್ತಿದೆ. ಆದರೆ ಆಚರಣೆ, ಮೌಲ್ಯಗಳು ಇನ್ನೂ ಉಳಿದುಕೊಂಡಿರುವುದು ಸಮಾಧಾನವಷ್ಟೇ.
ನರಕಾಸುರನ ವಧೆಯ ಮೂಲಕ ಶ್ರೀ ಕೃಷ್ಣನು ಲೋಕ ರಕ್ಷಣೆ ಮಾಡಿರುವುದೇ ದೀಪಾವಳಿಯ ಆಚರಣೆ ಹಿನ್ನೆಲೆಯ ವೈಶಿಷ್ಟ್ಯ. ದುಷ್ಟದಮನವಾಗುವ ಮೂಲಕ ಪ್ರತಿಯೊಬ್ಬರ ಬದುಕಿನಲ್ಲಿಯೂ ಸದಾ ದೀಪಾವಳಿಯ ಬೆಳಕೇ ತುಂಬಿರಲಿ. ನಮ್ಮಲ್ಲೇ ಬೆಳೆದಿರುವ ಕೆಟ್ಟಗುಣಗಳ ನಿರ್ನಾಮವಾಗಲಿ.

Ad Widget . Ad Widget . Ad Widget . . Ad Widget . . Ad Widget .

✍️ ಧನ್ಯಾ ಬಾಳೆಕಜೆ

. Ad Widget . Ad Widget . Ad Widget

Leave a Comment

Your email address will not be published. Required fields are marked *

error: Content is protected !!
Scroll to Top