ಹಲವು ಉಪ ಭಾಷೆ, ಸಂಸ್ಕೃತಿ, ವೈವಿಧ್ಯತೆಯಿಂದ ಕೂಡಿದ ರಾಜ್ಯ ನಮ್ಮ ಕರ್ನಾಟಕ. ಒಂದೇ ನಾಡಿನೊಳಗೆ ವೈವಿಧ್ಯತೆಯಿದ್ದರೂ, ರಾಜ್ಯ ಎಂದು ಬಂದಾಗ ಅಲ್ಲಿ ಮೇಳೈಸುವುದು ಶ್ರೀಮಂತಿಕೆಯಿಂದ ಕೂಡಿದ ಕನ್ನಡ. ಅದಕ್ಕೇ ನಮ್ಮ ಕವಿಗಳು ಬಾರಿಸು ಕನ್ನಡ ಡಿಂಡಿಮವ..ಓ ಕರ್ನಾಟಕ ಹೃದಯ ಶಿವ ಎಂದು ಹಾಡಿದರು.
ಕರ್ನಾಟಕ ಜನಗಳ ಮಾತೃಭಾಷೆ ಕನ್ನಡ. ವಿಶ್ವದ ಎಲ್ಲೇ ಹೋದರೂ ಅಲ್ಲಿ ಕನ್ನಡಿಗರು ಸಿಗುತ್ತಾರೆ. ವಿಶಾಲ ಹೃದಯಿಗಳಾದ ಕನ್ನಡಿಗರ ಪರಂಪರೆಯೇ ಅಂತಹುದು. ವಿಶ್ವಾದ್ಯಂತ ತಮ್ಮ ಛಾಪು ಮೂಡಿಸಿ ಕರ್ನಾಟಕದ ಹಿರಿಮೆಯನ್ನು ಬಾನೆತ್ತರಕ್ಕೆ ಹಾರಿಸುವಲ್ಲಿ ಕನ್ನಡಿಗರು ಒಂದೆಜ್ಜೆ ಮುಂದೆ.
ಕರ್ನಾಟಕ ರಾಜ್ಯ ರೂಪುಗೊಂಡ ದಿನವೇ ನವೆಂಬರ್ 1. ಅಂದು ಮೈಸೂರು ರಾಜ್ಯ ಎಂದು ಕರೆಯಲ್ಪಡುತ್ತಿದ್ದ ಈಗಿನ ಕರ್ನಾಟಕ ರಾಜ್ಯವು 1956ರ ನವೆಂಬರ್ 1ರಂದು ರೂಪುಗೊಂಡಿತು. ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆ ಮಾತನಾಡುವ ಜನರಿರುವ ಎಲ್ಲಾ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯ ಎಂಬುದಾಗಿ ಘೋಷಣೆ ಮಾಡಲಾಯಿತು. ಆರಂಭದಲ್ಲಿ ಮೈಸೂರು ಪ್ರಾಂತ್ಯವಾಗಿದ್ದ ಕರ್ನಾಟಕವು 1950ರಲ್ಲಿ ಭಾರತ ಗಣರಾಜ್ಯವಾದ ಬಳಿಕ ವಿವಿಧ ಭಾಷೆ, ಪ್ರಾಂತ್ಗಳ ಆಧಾರದ ಮೇಲೆ ಮೈಸೂರು ರಾಜ್ಯವಾಗಿ ಉದಯವಾಯಿತು. ಬಳಿಕ 1973 ನವೆಂಬರ್ 1ರಂದು ಅದು ಕರ್ನಾಟಕ ರಾಜ್ಯ ಎಂಬುದಾಗಿ ಮರು ನಾಮಕರಣಗೊಂಡಿತು.
ಕರ್ನಾಟಕ ರಾಜ್ಯ ಉದಯವಾಗಲು ಹೋರಾಡಿದ ಮಹನೀಯರನ್ನು ಸ್ಮರಿಸುವುದರೊಂದಿಗೆ ರಾಜ್ಯ ರೂಪುಗೊಂಡ ಸಂಭ್ರಮದ ದಿನವಾದ ನವೆಂಬರ್ 1ನ್ನು ಪ್ರತೀ ವರ್ಷ ಕರ್ನಾಟಕದಲ್ಲಿ ಕರ್ನಾಟಕ ರಾಜ್ಯೋತ್ಸವ ಎಂಬುದಾಗಿ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯ, ಹೊರ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಕೂಡಾ ತಮ್ಮ ನಾಡಹಬ್ಬ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿ ಸಂಭ್ರಮಿಸುತ್ತಾರೆ.
ಇದು ಕರ್ನಾಟಕದ ಉತ್ಸವ
ಅಂದಹಾಗೆ ನಮ್ಮ ರಾಜ್ಯದ ಬಹುತೇಕ ಜನರು ಕರ್ನಾಟಕ ರಾಜ್ಯೋತ್ಸವನ್ನು ʼಕನ್ನಡʼ ರಾಜ್ಯೋತ್ಸವವೆಂದೇ ಉಚ್ಚರಿಸುತ್ತಾರೆ. ಕನ್ನಡವೆಂಬುದು ಭಾಷೆ, ಅದು ರಾಜ್ಯವಲ್ಲ. ಕರ್ನಾಟಕ ರಾಜ್ಯೋತ್ಸವ ಕನ್ನಡಿಗರ ಸಂಭ್ರಮದ ಹಬ್ಬ, ನಾಡಹಬ್ಬ. ಇದು ರಾಜ್ಯ ರೂಪುಗೊಂಡ ದಿನ. ಹಾಗಾಗಿ ಇದು ಕನ್ನಡಿಗರ ಕರ್ನಾಟಕ ʼರಾಜ್ಯʼದ ಉತ್ಸವ, ಕನ್ನಡ ʼಭಾಷೆʼಯ ಉತ್ಸವವಲ್ಲ. ಹೀಗಾಗಿ ಕರ್ನಾಟಕ ರಾಜ್ಯೋತ್ಸವವನ್ನು ʼಕನ್ನಡʼ ರಾಜ್ಯೋತ್ಸವ ಎಂದು ಕರೆಯುವುದು ಅಷ್ಟು ಸಮಂಜಸವಲ್ಲ ಎನಿಸುತ್ತದೆ.
ಕನ್ನಡವು ಕರ್ನಾಟಕದ ಮಾತೃಭಾಷೆ. ಹೀಗಾಗಿ ಭಾಷೆಯ ರಾಜ್ಯೋತ್ಸವ ಅರ್ಥಾತ್ ಕನ್ನಡ ರಾಜ್ಯೋತ್ಸವ ಎಂದು ಬಳಕೆ ಮಾಡುವುದು ಸರಿಯಲ್ಲ. ಕರ್ನಾಟಕ ಎಂಬುದು ರಾಜ್ಯ. ಕರ್ನಾಟಕ ರಾಜ್ಯ ಏಕೀಕರಣಗೊಂಡ ದಿನವಿದು. ಹೀಗಾಗಿ ಈ ದಿನವನ್ನು ಕನ್ನಡ ರಾಜ್ಯೋತ್ಸವ ಎಂದು ಭಾಷೆಯ ಮುಖಾಂತರ ಹೇಳುವುದಕ್ಕಿಂತ ಕರ್ನಾಟಕ ರಾಜ್ಯೋತ್ಸವ ಎಂದೇ ರಾಜ್ಯದ ಮೂಲಕ ಸಂಬೋಧಿಸುವುದೇ ಸೂಕ್ತವಾಗುತ್ತದೆ.
ಬಾವುಟಕ್ಕಿದೆ ಇತಿಹಾಸ
ಕನ್ನಡದ ಕುಲಪುರೋಹಿತ ಎಂದೇ ಜನಜನಿತವಾಗಿರುವ ಆಲೂರು ವೆಂಕಟರಾವ್ ಅವರಿಂದ 1905ರಲ್ಲಿ ಕರ್ನಾಟಕ ಏಕೀಕರಣ ಚಳವಳಿ ಆರಂಭಗೊಂಡಿತು. ಕರ್ನಾಟಕ ಉದಯವಾದ ನಂತರ ಕನ್ನಡ ಚಳವಳಿ ಹೋರಾಟಗಾರ ಎಂ. ರಾಮಮೂರ್ತಿ ಅವರು ಕೆಂಪು-ಹಳದಿ ಬಾವುಟ ತಯಾರಿಸಿ ಮೊದಲ ಬಾರಿಗೆ ಬಳಸಿದ್ದರು ಮತ್ತು ಅದೇ ಬಾವುಟ ಮುಂದೆ ಕರ್ನಾಟಕದ ಹೆಮ್ಮೆಯ ಸಂಕೇತವಾಗಿ ರಾರಾಜಿಸುತ್ತಿದೆ.
ಕೊನೆಯದಾಗಿ..
ಕರ್ನಾಟಕದಲ್ಲಿ ಹುಟ್ಟಿದ ನಾವೇ ಭಾಗ್ಯಶಾಲಿಗಳು. ಶ್ರೀಗಂಧದ ನಾಡು ನಮ್ಮ ಕರ್ನಾಟಕ. ಕಾವೇರಿಯ ನೀರು ಈ ನಾಡಿನ ಜೀವಜಲ. ಹನುಮ ಜನಿಸಿದ ಊರು ನಮ್ಮ ಕರುನಾಡು. ಪಂಪ, ರನ್ನ, ಕುಮಾರವ್ಯಾಸರಂತಹ ಮಹನೀಯರನ್ನು ಕಂಡ ನಾಡು. ಕುವೆಂಪು ಅವರಂತಹ ಕವಿಪುಂಗವರು ಜನುಮಿಸಿದ ನಾಡು ನಮ್ಮ ಹೆಮ್ಮೆಯ ಕರ್ನಾಟಕ. ನಮ್ಮ ಕರ್ನಾಟಕದ ಕಂಪು ವಿದೇಶಿಗರನ್ನೂ ಆಕರ್ಷಿಸುತ್ತಿದೆ. ವಿದೇಶಿಗರು ಕರ್ನಾಟಕಕ್ಕೆ ಬಂದು ನಮ್ಮ ರಾಜ್ಯ ಭಾಷೆ ಕನ್ನಡವನ್ನು ಕಲಿತು ಮಾತನಾಡುವ ಮಟ್ಟಿಗೆ ಪ್ರತಿಯೊಬ್ಬರನ್ನೂ ಆಕರ್ಷಿಸುತ್ತಿದೆ ನಮ್ಮ ರಾಜ್ಯ, ಭಾಷೆ. ನಮ್ಮ ಪರಂಪರೆ, ಸಂಸ್ಕೃತಿಯ ಪರಂಪರೆಯೇ ಶ್ರೀಮಂತವಾದುದು. ಕರ್ನಾಟಕದ ಹೆಸರು, ಕನ್ನಡಿಗರ ಹಿರಿಮೆ ನಿತ್ಯನೂತನವಾಗಲಿ.
-ಧನ್ಯಾ ಬಾಳೆಕಜೆ