ಅರಂತೋಡು : ಶಾಸ್ತ್ರೀಯ ಭಾಷೆಯ ಸ್ಥಾನಮಾನ ಹೊಂದಿದ ಕನ್ನಡ ಭಾಷೆಯನ್ನು ವ್ಯಾಪಕವಾಗಿ ಬಳಸುವ, ಅದರ ಘನತೆಗೆ ಕುಂದುಟಾಗದಂತೆ ನೋಡಿಕೊಳ್ಳುವ ಜವಬ್ದಾರಿ ಕನ್ನಡಿಗರಾದ ನಮ್ಮೆಲ್ಲರ ಮೇಲಿದೆ. ಆಗಾದಾಗಲೇ ಕನ್ನಡ ಭಾಷೆ ಸಂಸ್ಕೃತಿ ಖಂಡಿತಾ ಸೋಲುವುದಿಲ್ಲ ಎಂದು ಸುಳ್ಯ ತಾಲೂಕು ೨೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ ಲೀಲಾದಾಮೋದರ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕ, ಸ್ವಾಗತ ಸಮಿತಿ ೨೭ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರಂತೋಡು ಇದರ ಆಶ್ರಯದಲ್ಲಿ ಅರಂತೋಡು ನೆಹರು ಸ್ಮಾರಕ ಪದವಿಪೂರ್ವ ವಿದ್ಯಾಲಯದ ಡಾ.ಕುರುಂಜಿ ವೆಂಕಟ್ರಮಣ ಗೌಡ ವೇದಿಕೆಯ ನಿರಂಜನ ಸಭಾಂಗಣದಲ್ಲಿ ನಡೆದ ಸುಳ್ಯ ತಾಲೂಕು ೨೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಸಮ್ಮೇಳಾನಾಧ್ಯಕ್ಷತೆ ವಹಿಸಿ ಮಾತನಾಡಿದರು. ಅತ್ಯುನ್ನತ ವೈಜ್ಞಾನಿಕ, ತಾಂತ್ರಿಕ ಶಿಕ್ಷಣ ಪಡೆದ, ವಿದೇಶದಲ್ಲಿ ನೆಲೆಸಿದ, ವಿದೇಶಕ್ಕೆ ಹೋಗಿ ಬರುತ್ತಿರುವ ಯುವ ಸಮೂಹದಲ್ಲಿ ಭಾಷೆಯ ಬಗ್ಗೆ ಜಾಗೃತಿ ಮೂಡುತ್ತಿರುವುದು ಭರವಸೆ ಹುಟ್ಟಿಸುತ್ತದೆ. ಕನ್ನಡ ಕಲಿಯುವವರಿಗಾಗಿ ಇಂಥವರು ಕನ್ನಡ ಕಲಿಕಾ ಸಿಡಿಗಳನ್ನು, ಕನ್ನಡ ಸಾಫ್ಟ್ವೇರ್‌ಗಳನ್ನು, ಕನ್ನಡ ಆ್ಯಪ್‌ಗಳನ್ನು ತಯಾರಿಸಿದ್ದಾರೆ. ಇದನ್ನು ಎಲ್ಲಾ ಕನ್ನಡಿಗರು ಬಳಸಿದರೆ, ಅವರಿಗೆ ಸುಲಭದಲ್ಲಿ ಲಭ್ಯವಾಗುವಂತೆ ಸರಕಾರ ಕೈಜೋಡಿಸಿದರೆ ಇಲ್ಲಿ ನೆಲೆಸಿದ ಅನ್ಯಭಾಷಿಕರು ಕೂಡಾ ಕನ್ನಡ ಕಲಿಯಲು ಸಹಾಯವಾಗುತ್ತದೆ ಎಂದರು.
ಮನೆಯಲ್ಲಿ ಪುಟ್ಟ ಗ್ರಂಥಾಲಯವಿರಲಿ:
ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕಾಗಿದ್ದು ಪೋಷಕರ ಕರ್ತವ್ಯ. ತಾವೂ ಓದುವುದರೊಂದಿಗೆ ಮಕ್ಕಳು ಓದಬಹುದಾದ ಪುಸ್ತಕಗಳನ್ನು ಅವರಿಗೆ ನೀಡಬೇಕು. ಭಾಷೆಯನ್ನು ಕಾಯ್ದುಕೊಳ್ಳುವ ಶಕ್ತಿಗಳಲ್ಲಿ ಪುಸ್ತಕಗಳಿಗೆ ಮಹತ್ವದ ಸ್ಥಾನವಿದೆ. ಮನೆಯಲ್ಲೊಂದು ಪುಟ್ಟ ಗ್ರಂಥಾಲಯವಿರಲಿ ಎಂದು ಸಲಹೆ ನೀಡಿದರು. ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಯಲ್ಲಿ, ಪೋಷಣೆಯಲ್ಲಿ ಸಾಹಿತ್ಯ ಪರಿಷತ್ತಿನ ಪಾತ್ರ ದೊಡ್ಡದು. ಸುಳ್ಯ ಪ್ರದೇಶಕ್ಕೆ ದ.ಕ.ಜಿಲ್ಲೆಯ ಇತರ ಭೂಭಾಗಗಳಿಗಿಂದ ಭಿನ್ನವಾದ ಇತಿಹಾಸವಿದೆ. ಸುಳ್ಯ ವಿವಿಧ ಕ್ಷೇತ್ರದಲ್ಲಿ ರಾಷ್ಟçಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು.
ಸಾಹಿತಿ ನರೇಂದ್ರ ರೈ ದೇರ್ಲ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸುಳ್ಯ ವಿವಿಧ ಕ್ಷೇತ್ರಗಳಲ್ಲಿ ಸುಳ್ಯ ಇಂದು ತನ್ನದೇ ಆದ ಛಾಪನ್ನು ಮೂಡಿಸುತ್ತಿದೆ. ನಾವು ಇಂದು ಅತಿರೇಕದ ಕಾಲದಲ್ಲಿ ಬದುಕುತ್ತಿದ್ದೇವೆ. ಕೊರೊನಾ ಬಳಿಕ ವಿವಿಧ ಬದಲಾವಣೆ ಕಂಡಿದ್ದೇವೆ. ಶೈಕ್ಷಣಿಕ ಕ್ಷೇತ್ರದಲ್ಲೂ ಇದು ಇದೆ. ಮಕ್ಕಳಿಗೆ ಒಂದು ಗಂಟೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಭಾಷೆ, ಸಾಹಿತ್ಯದಲ್ಲಿ ಮದ್ದು ಇದೆ ಎಂಬುದನ್ನು ಅರಿಯಬೇಕಿದೆ. ಭಾರತ ಬದುಕಿರುವುದೇ ಮಾನವೀಯ ಮೌಲ್ಯಗಳಿಂದ ಎಂದರು. ಕನ್ನಡ ಬದುಕು ನೀಡುವುದಿಲ್ಲ ಎಂದು ದೂರುವ ಬದಲು ಬದುಕು ನೀಡುವ ಹಾಗೆ ಕನ್ನಡವನ್ನು ಯಾಕೆ ವಿಸ್ತರಿಸಿಲ್ಲ, ಯಾಕೆ ನಾವು ಸೋತಿದ್ದೇವೆ. ಈ ಪ್ರಜ್ಞೆ ನಮ್ಮೊಳಗಿರಬೇಕು ಎಂದರು. ಕೇರಳಿಗರು, ತಮಿಳುಗರು ಎಲ್ಲೇ ಹೋದರೂ ತಮ್ಮ ಭಾಷೆ, ಊರಿನ ಬಗ್ಗೆ ಬಾಂಧವ್ಯ ಉಳಿಸಿಕೊಳ್ಳುತ್ತಿದ್ದಾರೆ. ಅವರು ಎಲ್ಲೇ ಹೋದರು ಮೊದಲ ಆದ್ಯತೆ ನೀಡುವುದು ಅವರವರ ಭಾಷೆ, ಸಾಹಿತ್ಯ, ಸಂಸ್ಕೃತಿಗೆ. ಅದರಿಂದಲೇ ಕೇರಳದ ಪತ್ರಿಕೆಗಳು ಇಂದಿಗೂ ಹೆಚ್ಚಿನ ಪ್ರಸರಣ ಹೊಂದಿದೆ ಎಂದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅರಳು ಸ್ಮರಣ ಸಂಚಿಕೆ ಬಿಡುಗಡೆ ಮಾತನಾಡಿ, ಕನ್ನಡ ನಮ್ಮ ಉಸಿರು, ಸಾಹಿತ್ಯ ಲೋಕಕ್ಕೆ ಕೊಡೊಯ್ದ ಹಲವರು ಸಾಹಿತಿಗಳು ನಮ್ಮಲ್ಲಿದ್ದಾರೆ. ಸುಳ್ಯ ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ರಾಷ್ಟç ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದರು.
ಸುಳ್ಯ ತಹಶೀಲ್ದಾರ್ ಮಂಜುಳಾ, ನಿಕಟಪೂರ್ವ ಅಧ್ಯಕ್ಷ ಕೆ.ಆರ್.ಗಂಗಾಧರ, ಸುಳ್ಯ ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಗ್ರಾ.ಪಂ.ಅಧ್ಯಕ್ಷ ಕೇಶವ ಅಡ್ತಲೆ, ಸಮಿತಿಯ ಪ್ರಧಾನ ಕರ‍್ಯದರ್ಶಿಗಳಾದ ಕಿಶೋರ್ ಕುಮಾರ್ ಕಿರ್ಲಾಯ, ಅಬ್ದುಲ್ಲಾ ಅರಂತೋಡು, ಕಸಾಪ ಸುಳ್ಯ ಗೌರವ ಕರ‍್ಯದರ್ಶಿಗಳಾದ ತೇಜಸ್ವಿ ಕಡಪಳ, ಚಂದ್ರಮತಿ ಕೆ., ಕೋಶಾಧಿಕಾರಿ ದಯಾನಂದ, ಪ್ರಮುಖರಾದ ಚಂದ್ರಾವತಿ ಬಡ್ಡಡ್ಕ, ರಾಮಚಂದ್ರ ಪಳ್ಳತ್ತಡ್ಕ, ಬಾಬು ಗೌಡ, ದಯಾನಂದ ಆಳ್ವ ಮತ್ತಿತರರು ಉಪಸ್ಥಿತರಿದ್ದರು. ಸುಳ್ಯ ಕಸಾಪ ಅಧ್ಯಕ್ಷ ಚಂದ್ರಶೇಖರ್ ಪೇರಾಲು ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಆಶಯ ನುಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಸ್ವಾಗತಿಸಿದರು. ಉಪನ್ಯಾಸಕ ಮೋಹನಚಂದ್ರ ಎನ್.ಪಿ. ಕಾರ್ಯಕ್ರಮ ನಿರೂಪಿಸಿದರು. ತೇಜಸ್ವಿ ಕಡಪಳ ವಂದಿಸಿದರು.
ಕನ್ನಡ ಭುವನೇಶ್ವರಿಯ ಮೆರವಣಿಗೆ
ಅರಂತೋಡು ಗ್ರಾ.ಪಂ. ಕಛೇರಿ ಬಳಿಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಿತು. ನಿವೃತ್ತ ಮುಖ್ಯಶಿಕ್ಷಕ ಹೊನ್ನಪ್ಪ ಮಾಸ್ತರ್ ಅಡ್ತಲೆ ಮೆರವಣಿಗೆಗೆ ಚಾಲನೆ ನೀಡಿದರು. ಸಮ್ಮೇಳಾನಧ್ಯಕ್ಷೆ ಲೀಲಾದಾಮೋದರ್ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಭಾಂಗಣದ ಬಳಿಗೆ ಕರೆತರಲಾಯಿತು. ಅರಂತೋಡು ಗ್ರಾ.ಪಂ. ಅಧ್ಯಕ್ಷ ಧ್ವಜಾರೋಹಣ ನೆರವೇರಿಸಿದರು. ಡಾ.ಎಂ.ಪಿ.ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು. ಚಂದ್ರಶೇಖರ್ ಪೇರಾಲು ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಕೃತಿಗಳ ಬಿಡುಗಡೆ:
ವಿವಿಧ ಕೃತಿಗಳನ್ನು ಕರ್ನಾಟಕ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಬಿಡುಗಡೆ ಮಾಡಿದರು. ಡಾ.ಪ್ರಭಾಕರ ಶಿಶಿಲ ಅವರ ಕುಂತಿ(ಕಾದಂಬರಿ), ಕಲ್ಲುರ್ಟಿಯ ಕುಕ್ಕಟ ಕಥನಗಳು(ಕಥಾಸಂಕಲನ), ಲೀಲಾದಾಮೋದರ್ ಅವರ ನದಿಯ ನಾದ(ಕವನ ಸಂಕಲನ), ಸಂಗೀತಾ ರವಿರಾಜ್ ಚೆಂಬು ಅವರ ಪಯಸ್ವಿನಿಯ ತೀರದಲ್ಲಿ(ಲಲಿತ ಪ್ರಬಂಧ), ಅಕ್ಕರೆಯ ಕಡೆಗೋಲು(ವಿಮರ್ಶಾ ಬರಹ), ಪ್ರಕಾಶ್ ಮೂಡಿತ್ತಾಯ ಅವರ ಲಸಿಕೆಯ ಕಥೆ(ವಿಜ್ಞಾನ ನಾಟಕ), ಮೌಡ್ಯವೇಕೆ ಇನ್ನೂ(ವಿಜ್ಞಾನ ನಾಟಕ), ನಿರೀಕ್ಷಾ ಸುಲಾಯ ಅವರ ನನ್ನ ಮಸು ನನ್ನ ಕನಸು(ಕವನಸಂಕಲನ) ಸಮ್ಮೇಳದಲ್ಲಿ ಬಿಡುಗಡೆ ಮಾಡಲಾಯಿತು.