ʼನಮ್ಮ ಪ್ರಾಡಕ್ಟ್ ಬಳಸಿದರೆ ನಿಮ್ಮ ಎಲ್ಲಾ ಸಮಸ್ಯೆಗಳು ಮಾಯ. ಫೇಸ್ ಕ್ರೀಂ, ಬ್ಯೂಟಿ ಪ್ರಾಡಕ್ಟ್‌ಗಳಿಗೆ ತುಂಬಾ ಗ್ರಾಹಕರಿದ್ದಾರೆ. ಒಮ್ಮೆ ಖರೀದಿಸಿದವರು ನಿರಂತರವಾಗಿ ನಮ್ಮ ಪ್ರಾಡಕ್ಟ್ ಖರೀದಿಸುತ್ತಿದ್ದಾರೆ. ನೀವೂ ಒಮ್ಮೆ ಖರೀದಿಸಿ ನೋಡಿ..ʼಮೊನ್ನೆ ಮೊನ್ನೆಯಷ್ಟೇ ಶಾಪ್‌ಗೆ ಬಂದ ವ್ಯಕ್ತಿಯೊಬ್ಬರು ಹೀಗೆ ಹೇಳಿದರು.
ʼತಲೆನೋವು ಮತ್ತೆ ಬರುವುದಿಲ್ಲ ಎಂದು ನಿಮ್ಮದೇ ಕಂಪೆನಿಯ ಎಣ್ಣೆಯನ್ನು ಇನ್ನೊಬ್ಬರು ಒತ್ತಾಯ ಮಾಡಿ ನೀಡಿದ್ದರು. ಮೂರು ತಿಂಗಳು ಹಾಕಿದರೂ ತಲೆನೋವು ನಿವಾರಣೆಯಾಗಿಲ್ಲʼ ಎಂದಾಗ ಆ ವ್ಯಕ್ತಿ ಸ್ವಲ್ಪ ಮೌನವಾದರು. ಅದು ಯಾಕೆ ಹಾಗಾಯಿತು, ನಮ್ಮ ಯಾವುದೇ ಪ್ರಾಡಕ್ಟ್‌ಗಳೂ ಉತ್ತಮವಾದ ಪರಿಣಾಮವನ್ನೇ ಕೊಡುತ್ತವೆ..ಎನ್ನುತ್ತಲೇ ಕಾಲ್ಕಿತ್ತರು.
ʼಎರಡು ಸಾವಿರ ರೂಪಾಯಿ ಕಟ್ಟಿದರಾಯಿತು. ಆಮೇಲೆ ಲೈಫ್ ಟೈಮ್ ಹಣ ಕಟ್ಟಲು ಇರುವುದಿಲ್ಲ. ನಿಮಗೆ ಬೇಕಾದ ಔಷಧ, ಮನೆ ಬಳಕೆಯ ವಸ್ತುಗಳು, ದಿನಸಿ ಎಲ್ಲವೂ ಅತಿ ಕಡಿಮೆ ಬೆಲೆಯಲ್ಲಿ ನಮ್ಮ ಸ್ಟೋರ್‌ಗಳಲ್ಲಿ ಸಿಗುತ್ತದೆ. ಎಲ್ಲವೂ ಸ್ವದೇಶಿ. ನೀವು ಮಾಡಬೇಕಾದುದು ಜನ ಸೇರಿಸುವುದೊಂದೆ ಕೆಲಸ. ಹೆಚ್ಚೆಚ್ಚು ಅಚೀವ್ ಮಾಡಿದರೆ ಕಮಿಷನ್ ಅಷ್ಟೇ ಅಲ್ಲ, ಕಾರು ಕೂಡಾ ಬಹುಮಾನವಾಗಿ ಸಿಗುತ್ತದೆ…ನೋಡಿ ನಾನೀಗ ಓಡಾಡುತ್ತಿರುವ ಕಾರು ಇದೇ ಕಂಪೆನಿಯಿಂದ ಬಹುಮಾನವಾಗಿ ಸಿಕ್ಕಿರುವುದು..ʼ
ಬಹುಶಃ ಇಂತಹ ಮಾತುಗಳನ್ನು ಈಗಾಗಲೇ ಹಲವರು ಕೇಳಿರಬಹುದು. ಅವರು ಹೇಳಿದಂತೆ ಹಣ ಕಟ್ಟಿ ಜನ ಸೇರಿಸಲಾಗದೆಯೋ, ಕಂಪೆನಿ ಬಂದ್ ಆಗಿಯೋ ಅತ್ತ ಕಳೆದುಕೊಂಡ ಹಣ ಮರಳಿ ಸಿಗದೆ, ಇತ್ತ ಮರ್ಯಾದೆಗಂಜಿ ಇತರರೊಡನೆ ಹೇಳಿಕೊಳ್ಳಲೂ ಆಗದೆ ತಲೆಮೇಲೆ ಕೈ ಹೊತ್ತು ಕುಳಿತಿರಬಹುದು ಅಲ್ಲವೇ?
ʼನಮ್ಮ ಆಪ್ ಡೌನ್‌ಲೋಡ್ ಮಾಡಿಕೊಂಡು ಮೊದಲು ನಿಗದಿತ ಹಣವನ್ನು ಕಟ್ಟಿ. ಆನಂತರ ಅಲ್ಲಿ ಬರುವ ಜಾಹೀರಾತು ವೀಕ್ಷಿಸಿದರಾಯಿತು, ಒಂದು ಜಾಹೀರಾತು ವೀಕ್ಷಣೆಗೆ ಇಷ್ಟು ಹಣ ಪಕ್ಕಾ..ಇನ್ನು ನಿಮ್ಮ ಕೆಳಗೆ ಇನ್ನಷ್ಟು ಜನ ಸೇರಿಸಿದರೆ ಕಮಿಷನ್!ʼ ಹಣ ಮಾಡಲು ಹೇಳಿಕೊಡುವ ಆಪ್, ಬಿಸಿನೆಸ್‌ಗಳು ಒಂದೋ ಎರಡೋ..?
ಹೌದು. ನಾಯಿಕೊಡೆಗಳಂತೆ ಅಲ್ಲಲ್ಲಿ ತಲೆ ಎತ್ತಿಕೊಂಡಿರುವ ಚೈನ್ ಬ್ಯುಸಿನೆಸ್ ಎಂಬ ಜನರನ್ನು ಸೆಳೆದು ಕೊನೆಗೆ ಚೊಂಬು ನೀಡುವ ಬ್ಯುಸಿನೆಸ್‌ನ ಝಲಕ್ ಇದು. ಈ ಚೈನ್ ಬ್ಯುಸಿನೆಸ್‌ನವರ ವಿವಿಧ ಬಣ್ಣದ ಮಾತುಗಳಿಗೆ ಮರುಳಾಗಿ ಜನ ಹಣ ಕಟ್ಟಿ ಇತರರನ್ನು ಸೆಳೆಯುವತ್ತ ತೊಡಗಿದ್ದೇ ತೊಡಗಿದ್ದು. ಕೊನೆಗೆ ಹಲವರ ಪರಿಸ್ಥಿತಿ ಇಂಗು ತಿಂದ ಮಂಗನಂತಾಗಿದ್ದು ಸುಳ್ಳಲ್ಲ. ಕೆಲವಕ್ಕೆ ಆರಂಭಿಕ ಸದಸ್ಯತ್ವ ಶುಲ್ಕ ೨೦೦೦ ಇದ್ದರೆ, ಇನ್ನು ಕೆಲವಕ್ಕೆ ೧೦ ಸಾವಿರ ರೂ.ಗಳವರೆಗೂ ಇದೆ. ಇಷ್ಟು ಹಣ ಕಟ್ಟಿದ ಬಳಿಕ ನಿಯಮಾನುಸಾರ ಇಷ್ಟು ಮಂದಿಯನ್ನು ನಿಮ್ಮ ಮೂಲಕ ಬಿಸಿನೆಸ್‌ಗೆ ಸೇರಿಸಬೇಕು. ಆನಂತರ ಜನರ ಸಂಖ್ಯೆ ಹೆಚ್ಚುತ್ತಾ ಹೋದರೆ ಪಾಯಿಂಟ್ಸ್ ಜಾಸ್ತಿಯಾಗುತ್ತದೆ. ಹೆಚ್ಚು ಜನರನ್ನು ಸೇರಿಸಿ ಸ್ಕೀಂನ ನಿಯಮಾನುಸಾರ ಸಾಧಿಸಿದರೆ ಕಾರು ಕೂಡಾ ಬಹುಮಾನವಾಗಿ ಸಿಗುತ್ತದೆ. ನಾನು ಓಡಾಡುತ್ತಿರುವ ಕಾರು ನನಗೆ ಹೀಗೆಯೇ ಬಹುಮಾನವಾಗಿ ಸಿಕ್ಕಿರುವುದು ಎಂಬುದಾಗಿ ಜನರನ್ನು ಆಕರ್ಷಿಸುವ ಪ್ಲಾನ್ ಈ ಬಿಸಿನೆಸ್ ಮಂದಿಯದ್ದು. ತೀರಾ ಬೆರಳೆಣಿಕೆಯ ಇಂತಹ ಬಿಸಿನೆಸ್‌ಗಳು ಸಾಧಾರಣ ಮಟ್ಟಿಗಾದರೂ ಓಕೆ ಎನಿಸಿದರೂ, ಬಹುತೇಕ ಎಲ್ಲವೂ ಜನರನ್ನು ಮಂಗ ಮಾಡಿ ಹಣ ಮಾಡುವುದಕ್ಕಾಗಿ ಹುಟ್ಟಿಕೊಂಡವಾಗಿವೆ.
ಇಂತಹವುಗಳನ್ನು ನಂಬಿ ಸಾವಿರಾರು ರೂಪಾಯಿ ಕಳೆದುಕೊಂಡವರು ಅದೆಷ್ಟೋ ಮಂದಿ ಇದ್ದಾರೆ. ನಿಜವಾಗಿಯೂ ಉತ್ತಮ ವ್ಯವಹಾರ ಎಂದು ನಂಬಿ ಮೋಸ ಹೋದವರಿದ್ದಾರೆ. ಸ್ವದೇಶಿ ಎಂದು ನಂಬಿಸಿ ಯಾವುದೇ ವೈದ್ಯರ ಅನುಮತಿಯಾಗಲೀ, ವೈದ್ಯಕೀಯ ಕ್ಷೇತ್ರದ ಅಭಿಪ್ರಾಯವಾಗಲೀ ಇಲ್ಲದೆ ಎಗ್ಗಿಲ್ಲದೆ ಔಷಧಗಳನ್ನು ಮಾರಾಟ ಮಾಡಿ ಹಣ ಗಳಿಸಲಾಗುತ್ತಿದೆ ಮತ್ತು ಜನ ಇದು ಅತ್ಯುತ್ತಮವಾದುದು ಎಂದು ನಂಬಿ ಖರೀದಿಸಿ ಸೇವಿಸುತ್ತಿದ್ದಾರೆ ಎಂದರೆ ಅದೆಷ್ಟರ ಮಟ್ಟಿಗೆ ಜನ ಈ ಚೈನ್ ಬ್ಯುಸಿನೆಸ್ ಎಂಬ ಮಾಯಾಜಾಲವನ್ನು ನಂಬಿದ್ದಾರೆ ಎನ್ನುವುದು ತಿಳಿಯುತ್ತದೆ. ಚೈನ್ ಬ್ಯುಸಿನೆಸ್‌ನಡಿ ಸಿಗುವ ಔಷಧಗಳನ್ನು ವೈದ್ಯರ ಅನುಮತಿ ಇಲ್ಲದೆ ನೇರವಾಗಿ ತೆಗೆದುಕೊಳ್ಳಬಾರದು ಎಂಬುದನ್ನು ಈಗಾಗಲೇ ವೈದ್ಯಕೀಯ ರಂಗದ ಹಲವು ಪರಿಣತರು ಎಚ್ಚರಿಸಿದ್ದಾರೆ ಕೂಡಾ.
ಶ್ರೀಮಂತ ಹಿನ್ನೆಲೆ ಹೊಂದಿದವರು ಇಂತಹ ಮಾತುಗಳಿಗೆ ಮರುಳಾಗುವುದಿಲ್ಲ. ಯಾಕೆಂದರೆ ಅವರ ಬಳಿ ನಾಲ್ಕು ತಲೆಮಾರು ಕುಳಿತು ಉಣ್ಣುವಷ್ಟು ಕಾಸಿರುತ್ತದೆ. ಇಂತಹ ಮಾತುಗಳಿಗೆ ಮರುಳಾಗುವುದು ಬಡ ಮತ್ತು ಮಧ್ಯಮ ವರ್ಗದ ಜನರು. ಅತ್ತ ಆರಕ್ಕೇರದೆ, ಇತ್ತ ಮೂರಕ್ಕಿಳಿಯದೆ ಮಧ್ಯದಲ್ಲಿ ಸಿಲುಕಿ ಒದ್ದಾಡುತ್ತಿರುವ ನಮ್ಮಂತ ಬಡ ಮತ್ತು ಮಧ್ಯಮ ವರ್ಗದ ಜನಗಳಿಗೆ ಸ್ವಂತ ಕಾರು, ಸ್ವಂತ ಮನೆ ಆಸೆಯಿದ್ದರೂ, ನನಸು ಮಾಡಲು ಒದ್ದಾಟವೇ ಜೊತೆಯಾಗುತ್ತದೆ. ಹೀಗಿರುವಾಗ ಇಂತಹ ಸ್ಕೀಂಗಳು ಬಂದಾಗ ಅದರ ಸೆಳೆತಕ್ಕೆ ಒಳಗಾಗಿ ಬಹುಬೇಗ ಬಿದ್ದು ಬಿಡುತ್ತೇವೆ. ಇಂತಹ ವ್ಯವಹಾರಗಳು ಹುಟ್ಟಿಕೊಳ್ಳುವುದೇ ಸುಲಭದಲ್ಲಿ ಬೀಳುವ ಮಧ್ಯಮ ವರ್ಗದ ಜನರನ್ನು ಸೆಳೆಯಲು. ಹಣ ಮಾಡುವ ಆಸೆಯಿಂದ, ಕಾರು ಸಿಗುತ್ತದೆ ಎಂಬ ಆಸೆಯಿಂದ ಇಂತಹವುಗಳ ಜಾಲಕ್ಕೆ ಬೀಳುವ ಮೊದಲು ಯೋಚಿಸಬೇಕು.
ಸುಲಭವಾಗಿ ಹಣ ಮಾಡಬಹುದು ಎಂದು ಇದನ್ನು ನಂಬಿದ ಹಲವರು ಆ ಬಿಸಿನೆಸ್‌ಗಳ ನಿಯಮಗಳನುಸಾರ ಜನರನ್ನು ಸೇರಿಸಲಾಗದೆ ಅರ್ಧಕ್ಕೇ ನಿಲ್ಲಿಸಿದ್ದಾರೆ. ಇನ್ನು ಕೆಲವರು ಜನ ಸೇರಿಸಿದ್ದರೂ, ಸೇರ್ಪಡೆಗೊಂಡವರಿಗೆ ಮತ್ತೆ ಜನರನ್ನು ಇದಕ್ಕೆ ಸೆಳೆಯಲಾಗದೆ…ಹೀಗೆ ಲಕ್ಷಾಂತರ ಮಂದಿ ತಮ್ಮ ಶ್ರಮದಿಂದ ಗಳಿಸಿದ ಹಣವನ್ನು ಚೈನ್ ಬ್ಯುಸಿನೆಸ್ ಎಂಬ ಎಲ್ಲೋ ಹುಟ್ಟಿದ ವ್ಯವಹಾರಕ್ಕೆ ಹಾಕಿ ಮೋಸ ಹೋಗಿದ್ದಾರೆ. ಅಷ್ಟಕ್ಕೂ ಅದೆಷ್ಟೋ ಇಂತಹ ವ್ಯವಹಾರಗಳು ಎಲ್ಲಿ ಜನ್ಮ ತಳೆದಿವೆ, ಕಾನೂನು ಪ್ರಕಾರ ನೋಂದಾವಣೆಗೊಂಡಿದೆಯೇ, ಅದರ ನಿಜವಾದ ಮಾಲಕರು ಯಾರು, ಇದರ ಉದ್ದೇಶವೇನು, ಎಷ್ಟು ವರ್ಷದಿಂದ ನಡೆಯುತ್ತಿದೆ, ಇವರು ಸ್ವದೇಶಿ ಎಂಬ ಹೆಸರಿನಲ್ಲಿ ವಿತರಿಸುತ್ತಿರುವ ಔಷಧಗಳು ನಿಜವಾಗಿಯೂ ಸೇವನೆಗೆ ಅರ್ಹವೇ?, ಅದಕ್ಕೆ ಪುರಾವೆಗಳಿವೆಯೇ? …ಇವ್ಯಾವುದೂ ಮುಗ್ದ ಜನತೆಗೆ ಗೊತ್ತಿಲ್ಲ. ಈ ಎಲ್ಲಾ ವಿಷಯಗಳಲ್ಲಿ ಮೊದಲೇ ಸಿದ್ದಪಡಿಸಿಕೊಂಡಿರುವ ಒಂದಷ್ಟು ಪೇಪರ್‌ಗಳನ್ನು ತೋರಿಸಿ ಸಂಸ್ಥೆ ನಂಬಿಕೆಗೆ ಅರ್ಹವಾದುದು ಎಂದು ಜನರನ್ನು ನಂಬಿಸಿ ಸೆಳೆಯುವುದರಲ್ಲಿ ಪರಿಣತರು ಅವರು.
ಹಣವಾಗಲೀ, ಕಾರು, ಅಂತಸ್ತು ಯಾವುದೂ ಕೂಡಾ ಸುಮ್ಮನೇ ಬರುವುದಿಲ್ಲ. ಶ್ರಮ ಮತ್ತು ದುಡಿಮೆಯಿಂದ ಅವುಗಳನ್ನು ದಕ್ಕಿಸಿಕೊಳ್ಳಬೇಕೇ ಹೊರತು ಯಾರೋ ಹೇಳಿದ ಮಾತಿಗೆ ಮರುಳಾಗಿ ದುಡ್ಡು ಹಾಕಿದರೆ ಪಂಗನಾಮ ಹಾಕಿಸಿಕೊಳ್ಳಲೂ ಸಿದ್ದರಿರಬೇಕು. ಕಮಿಷನ್ ಆಸೆಯಿಂದಲೋ ಅಥವಾ ಹಣ ದುಪ್ಪಟ್ಟಾಗುತ್ತದೆ ಎಂಬ ಪೊಳ್ಳು ಭರವಸೆಗಳನ್ನು ನೀಡಿದವರ ಮಾತನ್ನು ನಂಬುವ ಮುನ್ನ ಇದಕ್ಕೆ ಹಣ ಹೂಡಿಕೆ ಮಾಡಿದ ಬಳಿಕ ಅವರು ಹೇಳಿದ ಅಷ್ಟೂ ನಿಯಮಗಳಂತೆ ನಡೆದುಕೊಳ್ಳಲು ನನ್ನಿಂದ ಸಾಧ್ಯವೇ, ಹಣ ದುಪ್ಪಟ್ಟು ಸಿಗುವುದು ಸಾಧ್ಯವೇ? ಒಂದು ವೇಳೆ ನಿಯಮದಂತೆ ಸಾಧಿಸಿದರೂ ಅದು ಸಿಗಬಹುದೇ? ಎಂದು ನಾಲ್ಕು ಸಲ ಯೋಚನೆ ಮಾಡಿ. ಇಲ್ಲವಾದಲ್ಲಿ ಹಗಲು ರಾತ್ರಿ ಕಷ್ಟಪಟ್ಟು ದುಡಿದ ಹಣ ಯಾರದ್ದೋ ಪಾಲಾಗುವುದು ನಿಶ್ಚಿತ.
ಇಂತಹ ಚೈನ್ ಬಿಸಿನೆಸ್‌ಗಳಿಂದ ಮೋಸ ಹೋಗುವವರ ಸಂಖ್ಯೆ ದೊಡ್ಡದೇ ಇದೆ. ಹಲವು ಆಸೆಗಳನ್ನು ಹುಟ್ಟಿಸಿ ಜನರನ್ನು ನಂಬಿ ತಮ್ಮತ್ತ ಸೆಳೆದು ದುಡ್ಡು ಮಾಡುವ ಇಂತಹ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಒಮ್ಮೆ ಮೋಸ ಹೋದ ಜನಗಳು ಮತ್ತೆ ಹೊಸ ಸ್ಕೀಂ ಬಂದಾಗ ಅದೇ ರೀತಿ ಅದರ ಬಲೆಗೆ ಬಿದ್ದು ಪದೇ ಪದೇ ಮೋಸ ಹೋಗುತ್ತಿದ್ದಾರೆ. ಕಾರಣ ನಮ್ಮ ಸಂಸ್ಥೆ ಅಂತಹುದಲ್ಲ. ಕಾನೂನು ರೀತ್ಯಾ ನಡೆಯುತ್ತಿರುವ ನೋಂದಾಯಿತ ಮತ್ತು ನಂಬಲರ್ಹವಾದ ಸಂಸ್ಥೆ ಎಂದು ಬಣ್ಣದ ಮಾತುಗಳಿಂದ ಜನರನ್ನು ನಂಬಿಸುವ ಗುಂಪೇ ಇದರ ಹಿಂದೆ ಕಾರ್ಯಾಚರಿಸುತ್ತಿರುವುದರಿಂದ. ಇಂತಹ ಸಂಸ್ಥೆಗಳ ಬಣ್ಣದ ಮಾತುಗಳಿಗೆ ಮರುಳಾಗದಂತೆ ಜನ ತಮಗೆ ತಾವೇ ಸ್ವಯಂ ನಿರ್ಬಂಧ ಹೇರಿಕೊಂಡರೆ ಮತ್ತು ಮೋಸ ಹೋದ ಬಳಿಕವಾದರೂ ಎಚ್ಚೆತ್ತುಕೊಂಡರಷ್ಟೇ ಇಂತಹ ಬಿಸಿನೆಸ್‌ಗಳು ಕಡಿಮೆಯಾಗಲು ಸಾಧ್ಯ. ಅವುಗಳು ಕಡಿಮೆಯಾದರೆ ಜನ ಮೋಸ ಹೋಗುವುದೂ ನಿಲ್ಲಬಹುದು. ಮೋಸ ಹೋಗುವವರು ಇರುವಷ್ಟು ದಿನ ಮೋಸ ಮಾಡುವವರು ಇದ್ದೇ ಇರುತ್ತಾರಲ್ಲವೇ?
ಮೋಸ ಹೋಗುವವರು ಎಚ್ಚೆತ್ತುಕೊಂಡರೆ ಮೋಸ ಮಾಡುವವರಿಗೆ ಜಾಗವಿರುವುದಿಲ್ಲ. ಹೀಗಾಗಿ ಯಾವುದೇ ಸ್ಕೀಂಗಳನ್ನು ನಂಬಿ ಹಣ ಹೂಡಿಕೆ ಮಾಡುವ ಮುನ್ನ ನೂರಾರು ಬಾರಿ ಯೋಚಿಸಬೇಕು. ಲಕ್ಷ ಗಳಿಸಲು ವರ್ಷಗಳ ಕಾಲ ಶ್ರಮಿಸಬೇಕು. ಆದರೆ ಅದನ್ನು ಇಂತಹ ಮೋಸಗಾರರ ಜಾಲಕ್ಕೆ ಬಿದ್ದು ಅದನ್ನು ಕಳೆದುಕೊಳ್ಳಲು ಒಂದು ಸೆಕೆಂಡ್ ಸಾಕಲ್ಲವೇ? ಒಂದು ಸೆಕೆಂಡ್‌ನ ಮೋಹಕ್ಕೊಳಗಾಗಿ ಒಂದು ವರ್ಷದ ಶ್ರಮವನ್ನು ವ್ಯರ್ಥ ಮಾಡದಿರಿ. ಹಾಗೇನಾದರೂ ಹಣ ಮಾಡುವ ಆಸೆ ಇದ್ದರೆ, ಜೀವನದಲ್ಲಿ ಎಲ್ಲವೂ ಸ್ವಂತದ್ದು ಬೇಕೆಂದಾದಲ್ಲಿ ಬಣ್ಣದ ಮಾತುಗಳಿಗೆ ಮರುಳಾಗುವ ಮೊದಲು ಸರಕಾರಿ ಅಧಿಕೃತ ಸಂಸ್ಥೆಗಳಾದ ಬ್ಯಾಂಕ್‌ಗಳಲ್ಲಿ ಫಿಕ್ಸ್‌ಡ್ ಡೆಪಾಸಿಟ್ ಇಟ್ಟೋ ಅಥವಾ ಅಂಚೆ ಕಚೇರಿಗಳಲ್ಲಿ ಲಭ್ಯವಿರುವ ಸ್ಕೀಂಗಳಲ್ಲಿಯೂ ಹಣ ಇಟ್ಟು ಲಾಭ ಪಡೆಯಿರಿ. ಇದರಲ್ಲಿ ದೊಡ್ಡ ಮೊತ್ತದ ಲಾಭ ಬಾರದೇ ಇದ್ದರೂ, ಹಣ ಕಳೆದುಕೊಳ್ಳುವ ಪರಿಸ್ಥಿತಿ ಬಾರದು. ಹಣ ಸ್ವಲ್ಪ ಹೆಚ್ಚೇ ಬರಬಹುದು ಎಂಬುದನ್ನು ಅರಿತು ಮುನ್ನಡೆಯಿರಿ. ಹೀಗಿದ್ದಾಗ ಶ್ರಮದಿಂದ ಕೂಡಿಟ್ಟ ಹಣವನ್ನು ಕಳೆದುಕೊಂಡು ಜೀವಮಾನವಿಡೀ ಪಶ್ಚಾತ್ತಾಪ ಪಡುವ ಪ್ರಮೇಯವೇ ಒದಗಿ ಬರುವುದಿಲ್ಲ. ಜೊತೆಗೆ ಅಂದುಕೊಂಡದ್ದನ್ನು ಬಹುಬೇಗ ಸಾಧಿಸಲಾಗದಿದ್ದರೂ, ನಿಧಾನವಾಗಿಯಾದರೂ ಕನಸುಗಳನ್ನು ಒಂದೊಂದಾಗಿ ನನಸಾಗಿಸಬಹುದು.
✍️ ಧನ್ಯಾ ಬಾಳೆಕಜೆ
.