ಪತ್ರಿಕೋದ್ಯಮ ಬಿಟ್ಟು ನನ್ನದೇ ಸ್ವಂತ ಏನಾದರೂ ಮಾಡಬೇಕೆಂಬ ತುಡಿತದೊಂದಿಗೆ ಆನ್‌ಲೈನ್ ಉದ್ಯಮಕ್ಕಿಳಿದ ಆರಂಭದ ದಿನಗಳವು. ನನ್ನಂತೆ ನೂರಾರು ಮಂದಿ ಯುವತಿಯರು, ಮಹಿಳೆಯರು ಮನೆಯಲ್ಲೇ ತಯಾರಿಸಿದ ಉತ್ಪನ್ನಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುತ್ತಿದ್ದುದರಿಂದ ನಾನೂ ಅವರಂತಾಗಬೇಕು ಎಂಬ ಹಂಬಲ ಬಲವಾಗಿತ್ತು. ಹಾಗಾಗಿ ನನ್ನ ಕನಸಿನ ನನಸಿಗಾಗಿ ಫೇಸ್ಬುಕ್, ವಾಟ್ಸಾಪ್‌ನಂತಹ ಸಾಮಾಜಿಕ ಜಾಲತಾಣಗಳನ್ನು ಆಯ್ಕೆ ಮಾಡಿಕೊಂಡಿದ್ದೆ.
ಮದುವೆ, ಮಗು ಆದ ಮೇಲೆ ಮನೆಯಲ್ಲಿ ಕುಳಿತಿರಬಾರದು, ಅವರಿವರ ಬಾಯಿಗೆ ಆಹಾರವಾಗಬಾರದು ಎಂಬುದು ಜಾಗೃತ ಮನಸ್ಸಿನ ಪ್ರತಿ ಬಾರಿಯ ಎಚ್ಚರಿಕೆ. ಉತ್ಪನ್ನಗಳ ಮಾರಾಟದ ಬಗ್ಗೆ ಅಷ್ಟೊಂದು ಐಡಿಯಾ ಇರಲಿಲ್ಲ. ನೋಡೇ ಬಿಡೋಣ ಎನ್ನುವ ಧೋರಣೆಯೊಂದಿಗೆ ಫೋನ್ ನಂಬರ್ ಸಮೇತ ಫೇಸ್ಬುಕ್ ನಲ್ಲಿ ಹಾಕುತ್ತಿದ್ದೆ. ಫೋನ್ ನಂಬರ್ ಹಾಕದೇ ಇದ್ದಲ್ಲಿ ಉತ್ಪನ್ನಗಳನ್ನು ಕೊಳ್ಳುವವರೂ ಇರುತ್ತಿರಲಿಲ್ಲ. ಮೊದಲೇ ಹಲವಾರು ಆನ್‌ಲೈನ್ ಸ್ಕ್ಯಾಮ್‌ಗಳು ನಡೆಯುತ್ತಿರುವುದರಿಂದ ಗುರುತು ಪರಿಚಯ ಇಲ್ಲದೇ ಇರುವವರಿಗೆ ಮುಂಗಡವಾಗಿ ಹಣ ಪಾವತಿ ಮಾಡಿ ಆನಂತರ ಉತ್ಪನ್ನಗಳು ಬಾರದೇ ಇದ್ದಲ್ಲಿ ಎಂಬ ಭಯವೂ ಗ್ರಾಹಕರಲ್ಲಿ ಸಾಮಾನ್ಯವಾಗಿ ಇರುತ್ತದೆ. ಹೀಗಾಗಿ ಮಾರಾಟಗಾರರ ವಿಳಾಸ ಮತ್ತು ಫೋನ್ ನಂಬರ್ ಕೂಡಾ ಉತ್ಪನ್ನಗಳ ಜೊತೆಯಲ್ಲಿದ್ದರೆ ಗ್ರಾಹಕರಿಗೂ ಸ್ವಲ್ಪ ಧೈರ್ಯ ಬರುತ್ತದೆ ಅಲ್ಲವೇ?
ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮೊಬೈಲ್ ಸಂಖ್ಯೆಯನ್ನು ಹಾಕುವುದು ಇನ್ನೊಂದು ಸಮಸ್ಯೆಯನ್ನು ಹುಟ್ಟು ಹಾಕಿಕೊಂಡಂತೆಯೇ. ಆದರೆ ಅದೇ ಸಾಮಾಜಿಕ ಜಾಲತಾಣಗಳನ್ನು ನಮ್ಮ ಉತ್ಪನ್ನಗಳ ಮಾರಾಟಕ್ಕೆ ವೇದಿಕೆಯನ್ನಾಗಿಸಿಕೊಂಡಾಗ ಫೋನ್ ನಂಬರ್‌ಗಳನ್ನು ಹಾಕುವುದು ಅನಿವಾರ್ಯ. ಅದರಂತೆ ನಾನೂ ಫೋನ್ ನಂಬರ್‌ನ್ನು ಸಾಮಾಜಿಕ ಜಾಲತಾಣಗಳಲ್ಲಿ ನಾನು ಮಾರಾಟ ಮಾಡುವ ಉತ್ಪನ್ನಗಳ ಜೊತೆಯಲ್ಲಿ ಹಾಕುತ್ತಿದ್ದೆ.
ಡಿಪಿಯಲ್ಲಿ ಪೊಲೀಸ್ ಫೋಟೋ!
ಸ್ವಾಭಿಮಾನಿಯಾಗಿ ಬದುಕಬೇಕೆಂಬ ತುಡಿತದೊಂದಿಗೆ ಉತ್ಪನ್ನಗಳ ಮಾರಾಟಕ್ಕೆ ಆನ್‌ಲೈನ್‌ನ್ನು ವೇದಿಕೆಯಾಗಿಸಿಕೊಂಡ ಬಹುತೇಕರಿಗೆ ಎದುರಾದ ಸಮಸ್ಯೆ ಇದು. ಸಾಮಾನ್ಯವಾಗಿ ಬಹುತೇಕರ ಹೆಸರಿನಲ್ಲಿ ನಕಲಿ ಫೇಸ್ಬುಕ್, ಇನ್‌ಸ್ಟಾಗ್ರಾಂ ಅಕೌಂಟ್ ತೆರೆದೋ ಹಣಕ್ಕೆ ಬೇಡಿಕೆ ಇಡುವ ವಂಚನೆಯ ಕರಾಮತ್ತು ನಡೆಯುತ್ತಲೇ ಇದೆ. ಹಲವಾರು ಜಾಗೃತಿಗಳ ಹೊರತಾಗಿಯೂ ಕೆಲವರು ಇನ್ನೂ ನಿಜವಾದ ವ್ಯಕ್ತಿಯೇ ಹಣ ಕೇಳುವುದೆಂದು ನಂಬಿಕೊಂಡು ಮೋಸ ಹೋಗಿದ್ದಾರೆ. ಹೀಗಿರುವಾಗ ಇಂತಹ ಸ್ಕ್ಯಾಮರ್‌ಗಳಿಗೆ ಫೋನ್ ನಂಬರ್ ಸಿಕ್ಕಿದರೆ ಕೇಳಬೇಕೇ?
ಆರಂಭದಲ್ಲಿ ನನಗೂ ಇಂತಹ ಅನುಭವ ಆಗಿತ್ತು. ಉತ್ಪನ್ನಗಳ ಮಾರಾಟಕ್ಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಫೋನ್ ನಂಬರ್‌ನ್ನು ಬಳಸಿಕೊಂಡು ಸುಮಾರು ಮೂರು ಮಂದಿ ಸ್ಕ್ಯಾಮರ್‌ಗಳನ್ನು ನನ್ನನ್ನು ಸಂಪರ್ಕಿಸಿದ್ದರು. ಓರ್ವ ಸ್ಕ್ಯಾಮರ್ ಬ್ಯಾಂಕ್ ಅಕೌಂಟ್‌ಗೆ ಹಣ ಜಮೆ ಮಾಡುವಾಗ ತಪ್ಪಾಗಿ ನಿಮ್ಮ ಅಕೌಂಟ್‌ಗೆ ಹಣ ಜಮೆ ಆಗಿದೆ ಮತ್ತು ಅದನ್ನು ಈಗಲೇ ತನಗೆ ರೀಫಂಡ್ ಮಾಡಬೇಕೆಂದು ಬೇಡಿಕೆ ಇಟ್ಟಿದ್ದ. ಕರೆ ಮಾಡಿದ್ದಲ್ಲದೆ ವಾಟ್ಸಾಪ್‌ನಲ್ಲಿಯೂ ಕೆಲವೊಂದು ನಕಲಿ ದಾಖಲೆಗಳನ್ನು ಕಳುಹಿಸಿ ಹಣ ರೀಫಂಡ್ ಮಾಡುವಂತೆ ಬೇಡಿಕೆ ಇಟ್ಟಿದ್ದ. ಅಲ್ಲದೆ ಆತ ತನ್ನನ್ನು ಒಬ್ಬ ಪೊಲೀಸ್ ಎಂಬುದಾಗಿ ಬಿಂಬಿಸಲು ವಾಟ್ಸಾಪ್ ಡಿಪಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಫೋಟೋವನ್ನು ಹಾಕಿಕೊಂಡಿದ್ದ. ಇನ್ನೊಬ್ಬ ಸ್ಕ್ಯಾಮರ್ ನನ್ನ ಮೊಬೈಲ್ ನಂಬರ್‌ನ್ನೇ ಆತನ ಬ್ಯಾಂಕ್ ಅಕೌಂಟ್ ನಂಬರ್ ಆಗಿ ನಕಲಿಯಾಗಿ ಮುದ್ರಿಸಿಕೊಂಡು ಹಣ ರೀಫಂಡ್ ಮಾಡುವಂತೆ ಬೇಡಿಕೆ ಇಟ್ಟಿದ್ದ. ಆದರೆ ಇಂತಹ ಸ್ಕ್ಯಾಮರ್‌ಗಳ ಬಗ್ಗೆ ತಿಳಿದಿದ್ದರಿಂದ ನಾನು ಅವರ ನಂಬರ್‌ಗಳನ್ನು ಬ್ಲಾಕ್ ಮಾಡಿದ್ದೆ ಮತ್ತು ಮುಂದೆ ನನ್ನ ಎಲ್ಲಾ ಆನ್‌ಲೈನ್ ವ್ಯವಹಾರಕ್ಕೆ ಪರ್ಸನಲ್ ನಂಬರ್ ಬದಲಾಗಿ ಬಿಸಿನೆಸ್ ವಾಟ್ಸಾಪ್ ಅಕೌಂಟ್ ತೆರೆದು ಬಿಸಿನೆಸ್ ನಂಬರ್‌ನ್ನೇ ಬಳಸುತ್ತಿದ್ದೆ.
*ಸ್ಕ್ಯಾಮರ್‌ಗಳ ದಿನಕ್ಕೊಂದು ತಂತ್ರ!*
ಡಿಜಿಟಲ್ ಯುಗದಲ್ಲಿ ಪ್ರತಿ ವ್ಯವಹಾರವೂ ಆನ್‌ಲೈನ್ ಆಗಿದೆ. ಇದರಿಂದ ಮನುಷ್ಯನ ಕೆಲಸ ಕಡಿಮೆಯಾಗಿದೆ. ಆದರೆ ಇದೇ ಸ್ಕ್ಯಾಮರ್‌ಗಳ ಪಾಲಿಗೆ ವರದಾನವಾಗಿದೆ. ಹಣ ಪೀಕಿಸಲು ದಿನಕ್ಕೊಂದು ತಂತ್ರವನ್ನು ಸ್ಕ್ಯಾಮರ್‌ಗಳು ಕಂಡುಕೊಳ್ಳುತ್ತಿದ್ದಾರೆ. ಎಷ್ಟೇ ಎಚ್ಚರವಾಗಿದ್ದರೂ, ಕೆಲವೊಮ್ಮೆ ತಿಳಿಯದೇ ಇವರ ಮಾಯಾಜಾಲದೊಳಗೆ ಬಿದ್ದು ಬಿಡುತ್ತೇವೆ. ನಕಲಿ ಫೇಸ್ಬುಕ್, ಇನ್‌ಸ್ಟಾ ಅಕೌಂಟ್ ತೆರೆದು ಹಣಕ್ಕೆ ಬೇಡಿಕೆ ಇಡುವುದು ಹಳೆಯದಾಯಿತು. ಅದಾದ ನಂತರ ಇತ್ತೀಚೆಗೆ ಎಪಿಕೆ ಫೈಲ್ ಕಳುಹಿಸಿ ಹಣ ಪೀಕಿಸುವ ತಂತ್ರ ನಡೆಯುತ್ತಿದೆ. ದುರಾದೃಷ್ಟವಶಾತ್ ಆ ಫೈಲ್ ಡೌನ್‌ಲೋಡ್ ಮಾಡಿಕೊಂಡರೆ ಗತಿ ಅಧೋಗತಿಯಾಗುವುದು ನಿಶ್ಚಿತ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸ್ಕ್ಯಾಮರ್‌ಗಳು ಇತ್ತೀಚೆಗೆ ಮದುವೆ ಇನ್ವಿಟೇಶನ್ ಕಾರ್ಡ್ ಕಳುಹಿಸುವ ಮೂಲಕ ಯಾಮಾರಿಸುವ ತಂತ್ರವನ್ನೂ ಅನುಸರಿಸಿಕೊಂಡಿದ್ದಾರೆ ಎಂದರೆ ಡಿಜಿಟಲ್ ಯುಗದಲ್ಲಿ ಎಷ್ಟೊಂದು ಎಚ್ಚರಿಕೆ ವಹಿಸಬೇಕೆಂಬುದು ತಿಳಿಯುತ್ತದೆ.
ಇತ್ತೀಚೆಗಷ್ಟೇ ಯಾವುದೋ ವ್ಯವಹಾರ ಸಲುವಾಗಿ ಬ್ಯಾಂಕ್‌ವೊಂದಕ್ಕೆ ಹೋಗಿದ್ದೆ. ಅಲ್ಲಿ ವ್ಯಕ್ತಿಯೊಬ್ಬರು ಬ್ಯಾಂಕರ್ ಜೊತೆ ಮಾತನಾಡುತ್ತಿದ್ದರು. ಅವರ ಮಗ ಚಹಾ ಕುಡಿದು ಚಹಾದ ಹಣವನ್ನು ಚಹಾ ಅಂಗಡಿಯಲ್ಲಿ ಸ್ಕ್ಯಾನ್ ಮಾಡಿದ್ದರಂತೆ. ಕೆಲವೇ ನಿಮಿಷಗಳಲ್ಲಿ ಅವರ ಅಕೌಂಟ್‌ನಲ್ಲಿದ್ದ 40,000 ರೂಪಾಯಿ ಹಣ ವಿತ್‌ಡ್ರಾ ಆಗಿತ್ತಂತೆ! ಇದು ಹೇಗೆ ಎಂಬುದು ತಿಳಿದಿಲ್ಲ. ಆದರೆ ಈ ಡಿಜಿಟಲ್ ಯುಗದಲ್ಲಿ ನಮ್ಮ ಪ್ರತಿಯೊಂದು ಆನ್‌ಲೈನ್ ವ್ಯವಹಾರಗಳೂ ಎಲ್ಲೋ ಒಂದು ಕಡೆ ಮಾನಿಟರ್ ಆಗುತ್ತಿದೆ ಎಂಬುದು ಅಷ್ಟೇ ಸತ್ಯ. ವಂಚಕರು ಎಷ್ಟೊಂದು ಬುದ್ದಿವಂತರೆಂದರೆ ಹಣ ಎಲ್ಲಿ, ಹೇಗೆ, ಯಾರಿಂದ ಡ್ರಾ ಮಾಡಲ್ಪಟ್ಟಿದೆ ಎಂಬುದು ಯಾವುದೇ ತಂತ್ರಜ್ಞಾನಗಳಿಂದಲೂ ಬೇಧಿಸಲಾಗದಷ್ಟು!
*ಫೋಟೋ ಇಟ್ಕೊಂಡು ಬ್ಲ್ಯಾಕ್‌ಮೇಲ್*
ಸಾಮಾಜಿಕ ಜಾಲತಾಣಗಳ ಬಳಕೆ ಜಾಸ್ತಿಯಾದಂತೆ ಅಲ್ಲಿ ಫೋಟೋ, ರೀಲ್ಸ್ ಅಪ್ಲೋಡ್ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಎಳೆ ವಯಸ್ಸು-ಇಳಿ ವಯಸ್ಸು ಬೇಧವಿಲ್ಲದೆ ಎಲ್ಲರೂ ರೀಲ್ಸ್ ಪ್ರಪಂಚದಲ್ಲಿ ಮೈಮರೆಯುತ್ತಿದ್ದಾರೆ. ಇಂತಹ ಫೋಟೋ, ವೀಡಿಯೋಗಳನ್ನು ಬಳಸಿಕೊಂಡು ಲಕ್ಷ ಲಕ್ಷ ಪೀಕಿಸುವ ತಂಡ ಸಕ್ರಿಯವಾಗಿದೆ. ಅದರಲ್ಲೂ ಯುವತಿಯರು ಈ ದಾಳಕ್ಕೆ ಹೆಚ್ಚೆಚ್ಚು ಬೀಳುತ್ತಿರುವುದು ದುರದೃಷ್ಟಕರ. ಆಕ್ಟಿಂಗ್‌ಗೆ ಅವಕಾಶ ನೀಡುತ್ತೇವೆಂದು ಆಸೆ ಹುಟ್ಟಿಸಿ ಫೋಟೋ, ವೀಡಿಯೋ, ವೈಯಕ್ತಿಕ ಮಾಹಿತಿ ಪಡೆದುಕೊಂಡು ಬಳಿಕ ಆ ಫೋಟೋ, ವೀಡಿಯೋಗಳನ್ನು ಮಾರ್ಫ್ ಮಾಡಿ ಅದನ್ನೇ ಬಳಸಿಕೊಂಡು ಲಕ್ಷ ಲಕ್ಷ ಬೇಡಿಕೆ ಇಡುತ್ತಾರೆ. ಹಣ ನೀಡದೇ ಇದ್ದಲ್ಲಿ ಅಶ್ಲೀಲವಾಗಿ ತಯಾರಿಸಿದ ಫೋಟೋಗಳನ್ನು ಸಂಬಂಧಿಕರಿಗೆ, ಮನೆಯವರಿಗೆ ಕಳುಹಿಸುವುದಾಗಿ ಬೆದರಿಕೆಯೊಡ್ಡುವ ಘಟನೆಗಳೂ ನಡೆಯುತ್ತಿದೆ.
*ಹೆದರದಿರಿ, ಧೈರ್ಯವಾಗಿರಿ*
ಇಂತಹ ಸಂದರ್ಭಗಳು ಅಚಾನಕ್ ಆಗಿ ಎದುರಾದಲ್ಲಿ ಹಲವರು ಆತ್ಮಹತ್ಯೆಯ ದಾರಿ ಹಿಡಿಯುವುದಿದೆ. ಆದರೆ ಡಿಜಿಟಲ್ ಯುಗದಲ್ಲಿ ಇವೆಲ್ಲ ನಡೆಯುತ್ತಿರುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಬಂದಿರುವ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ಯಾವುದೇ ವಂಚನೆಗೆ ಬಲಿಯಾಗುವ ಮುನ್ನ ನಾಲ್ಕು ಬಾರಿ ಯೋಚಿಸಿ. ಒಂದು ವೇಳೆ ಪರಿಸ್ಥಿತಿ ಕೈ ಮೀರಿ ಹೋದರೆ ಧೃತಿಗೆಡಬೇಡಿ. ಧೈರ್ಯ ಕಳೆದುಕೊಳ್ಳಬೇಡಿ. ಡಿಜಿಟಲ್ ಯುಗದಲ್ಲಿ ಎಲ್ಲವೂ ಸಾಧ್ಯ. ಹೀಗಾಗಿ ಇಂತಹ ಘಟನೆಗಳಿಗೆ ಧೈರ್ಯಗುಂದುವ ಅವಶ್ಯವಿಲ್ಲ. ಬದಲಾಗಿ ಯಾರಾದರೂ ಈ ರೀತಿಯಾಗಿ ಹೆದರಿಸಿದರೆ ತತ್‌ಕ್ಷಣ ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಿ ಮಾಹಿತಿ ನೀಡಿದರೆ ಪೊಲೀಸರು ಅದರ ಮೇಲೆ ಕ್ರಮ ವಹಿಸುತ್ತಾರೆ. ಇಲ್ಲವೇ ಹತ್ತಿರದ ಪೊಲೀಸ್ ಠಾಣೆಗೂ ಸಂಪರ್ಕಿಸಿ ಇದರ ಬಗ್ಗೆ ಮಾಹಿತಿ ನೀಡಬಹುದು.
✍️ *ಧನ್ಯಾ ಬಾಳೆಕಜೆ*