ಮಳೆಯೆಂದರೆ ಸ್ವರ್ಗವಿದ್ದಂತೆ, ಗುಡುಗು ಮಿಂಚುಗಳ ಆರ್ಭಟದ ನಡುವೆ ಹನಿ ಹನಿಯಾಗಿ ಭೂಮಿಯನ್ನು ತಂಪಾಗಿಸಿ ಬಿಸಿಲ ಧಗೆಗೆ ಬರಡು ಭೂಮಿಯಂತಿರುವ ಮಣ್ಣಿಗೆ ಪರಿಮಳವನ್ನು ಪಸರಿಸುತ್ತದೆ .ಆ ಧೋ! ಎನ್ನುವ ಮಳೆಯ ಶಬ್ಧಕ್ಕೆ ಸಾಕಷ್ಟು ನೆನಪುಗಳು ಮರುಕಳಿಸುತ್ತವೆ. ಸಣ್ಣವರಿದ್ದಾಗ ಒದ್ದೆ ಬಟ್ಟೆಯಲ್ಲಿ ತರಗತಿಗೆ ಹೋದದ್ದು, ಮಳೆಯಲ್ಲಿ ಆಟವಾಡಿದ್ದು ಹೀಗೆ ಹಲವಾರು ಸಿಹಿ ನೆನಪು ಗಳು ಮನಕ್ಕೆ ಮುದ ನೀಡುತ್ತದೆ. ಕೆಲವರಿಗೆ ಹೊರಗಡೆ ಸುರಿಯುವ ಮಳೆಯು ಖುಷಿ ನೀಡಿದರೆ ಇನ್ನೂ ಕೆಲವರಿಗೆ ಗುಡುಗು -ಮಿಂಚುಗಳ ಶಬ್ಧಕ್ಕೆ ಕಿರಿಕಿರಿಯುಂಟಾಗುತ್ತದೆ.
ಅಂದು ವರ್ಷದ ಮೊದಲ ಮಳೆ .
ಮಳೆಯೆಂದರೆ ಏನೋ ಖುಷಿ ,ಅದರಲ್ಲೂ ಒದ್ದೆಯಾಗುವುದೆಂದರೆ ಇನ್ನೂ ಖುಷಿ .ಕಾಲೇಜು ಬಿಟ್ಟ ಸಮಯದಲ್ಲಿ ಹೊರಗೆ ಜೋರಾಗಿ ಸುರಿಯುತ್ತಿರುವ ಮಳೆಯನ್ನು ನೋಡುತ ಬಾಲ್ಯದ ಸಿಹಿ ನೆನಪು ಮರುಕಳಿಸಿ ಮುಗುಳು ನಗೆ ಮೂಡಿತು.
ಆ ಜಡಿ ಮಳೆಗೆ ಒದ್ದೆ ಬಟ್ಟೆಯಲ್ಲಿ ಓಡೋಡಿ ಬಂದು ಬಸ್ಸಿನ ಕಿಟಕಿ ಬದಿಯಲ್ಲಿ ಕುಳಿತು ಪ್ರಕೃತಿ ನೋಡುತ್ತಿದ್ದರೆ, ಮನಸ್ಸು ಶುಭ್ರವಾದಂತೆ. ಮನೆಗೆ ಬಂದರೆ ಮಳೆಗೆ ಮತ್ತೆ ಶುರುವಾದ ಶೀತ ,ಜ್ವರ ಇದು ನನ್ನನ್ನು ಬಿಟ್ಟು ಹೋಗದ ಒಂದು ನನ್ನ ಮಳೆಗಾಲದ ಆಪ್ತಸ್ನೇಹಿತರು.
ಅಮ್ಮನ ಬೈಗುಳದ ನಡುವೆ ಬಿಸಿ ಬಿಸಿ ಹಬೆಯಾಡುತ್ತಿರುವ ಚಹಾ ಕುಡಿದರೆ ,ಮತ್ತೇ ಯಾವುದೇ ದುಬಾರಿ ಫಿಲ್ಟರ್ ಕಾಫಿ ಬೇಕೆಂದು ಇಲ್ಲ. ಗುಡುಗು- ಮಿಂಚು ಕಡಿಮೆಯಾದ ತಕ್ಷಣ ಮೊಬೈಲ್ನಲ್ಲಿ “ಮುಂಗಾರು ಮಳೆ” ಪದ್ಯ ಹಾಕಿ ಮಲಗಿದರೆ ಬೆಳಗಾಗುವುದು ತಿಳಿಯುವುದೇ ಇಲ್ಲ. ಮತ್ತೆ ಪ್ರತಿದಿನ ದಂತೆ ಮರುಕಳಿಸಿದೆ ಮಳೆಗಾಲದ ದಿನ .
ಮಳೆ ಬಂದರೆ ತುಂಬಿ ಹರಿಯುತ್ತಿರುವ ನೀರು. ರಸ್ತೆ ಯಾವುದೂ ಹಳ್ಳ ಯಾವುದೆಂದೂ ತಿಳಿಯಲು ಪರದಾಡಬೇಕು. ಅದರಲ್ಲೂ ಬೆಳ್ಳಂಬೆಳಗ್ಗೆ ಹನಿ ಹನಿ ಮಳೆಗೆ ಕಾಲೇಜು ಹೋಗಲು ಆಗುವ ಉದಾಸೀನ ಕೆಲವು ಕ್ಷಣವಷ್ಟೇ. ಒದ್ದೆಯಾದ ನಂತರ ತರಗತಿಗೆ ಹೋಗಲೇ ನಮಗೆ ಮತ್ತೆ ಉದಾಸೀನ. ಆದರೆ ಈಗೀನ ಕಾಲದಲ್ಲಿ ಮಳೆಗಾಲ ಯಾವುದು ಚಳಿಗಾಲ ಯಾವುದೆಂದೂ ತಿಳಿಯುವುದೇ ಕಷ್ಟವಾಗಿದೆ. ಬೆಳ್ಳಗೆ ಮೋಡದಿಂದ ಕೂಡಿದ ಆಕಾಶ ,ಮಧ್ಯಾಹ್ನ ಕಣ್ಣುಬಿಡದಷ್ಟು ಬಿಸಿಲಿನ ತಾಪಕ್ಕೆ ಸುಡುತ್ತದೆ,ಸಂಜೆ ಪುನಃ ಜೋರಾದ ಗುಡುಗು -ಮಿಂಚುಗಳ ಕಾದಾಟದ ನಡುವೆ ಮತ್ತೆ ಶುರುವಾದ ಮಳೆ…
ಆದರೂ ಮಳೆಗಾಲದಲ್ಲಿ ಕಳೆಯುವ ಪ್ರತಿಯೊಂದು ಸಮಯವೂ ಅನನ್ಯವಾದದ್ದು. ಅದೆಷ್ಟೋ ಮನಸ್ಸಿನ ಮಾತುಗಳು ಮೌನದಲ್ಲೇ ಮಾತಾಡುತ್ತದೆ. ಹೀಗೆ ಮಳೆಗಾಲದ ದಿನದಲ್ಲಿ ಬೆಚ್ಚಗೆ ಇರೋಣ..
✍️ *ಧನ್ಯ* ದಾಮೋದರ
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು
ಪುತ್ತೂರು