ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಪ್ರತೀ ವರ್ಷವೂ ಈ ದಿನ ಬರುತ್ತದೆ, ಹೋಗುತ್ತದೆ. ಮಹಿಳಾ ದಿನದಂದು ಅಲ್ಲಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಹಿಳೆಯನ್ನು ಹಾಡಿ, ಹೊಗಳಿ, ಅಟ್ಟಕ್ಕೇರಿಸುವ ಭಾಷಣಗಳೇ ಮೇಳೈಸುತ್ತದೆ.
ಮಹಿಳೆ ಕರುಣಾಮಯಿ, ಮಹಿಳೆ ತ್ಯಾಗಮಯಿ, ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ, ಅಕ್ಕನಾಗಿ, ತಂಗಿಯಾಗಿ….ಬಹುಶಃ ಮಹಿಳಾ ದಿನದಂದು ಕೇಳಿ ಬರುವ ಸರ್ವೇ ಸಾಮಾನ್ಯ ಡೈಲಾಗ್‌ಗಳಿವು. ಜಗತ್ತು ಅಂದ ಮೇಲೆ ಸಕಲ ಜೀವರಾಶಿಗಳ ಪೈಕಿ ಮನುಷ್ಯನೂ ಒಂದು. ಎಲ್ಲಾ ಜೀವಿಗಳಲ್ಲಿರುವ ಹೆಣ್ಣು ಗಂಡು ಪ್ರಬೇಧದಂತೆ ಮನುಷ್ಯನಲ್ಲಿಯೂ. ಇಲ್ಲಿ ಗಂಡಿನ ಕರ್ತವ್ಯವನ್ನು ಗಂಡು ನಿಭಾಯಿಸಬೇಕು, ಹೆಣ್ಣಿನ ಕರ್ತವ್ಯವನ್ನು ಹೆಣ್ಣು ನಿಭಾಯಿಸಬೇಕು. ತಾಯಿ, ಪತ್ನಿ, ಮಗಳು…ಇದೆಲ್ಲವೂ ನೈಸರ್ಗಿಕವಾಗಿ ಹೆಣ್ಣಿಗೆ ದೊರೆತ ಕರ್ತವ್ಯಗಳು ಮತ್ತು ಅದಕ್ಕೆ ಹೊಗಳಿಕೆಗಳು ಅನಗತ್ಯ. ಇದೆಲ್ಲವನ್ನು ಯಾರೂ ಹೇಳದಿದ್ದರೂ ಆಕೆ ನಿಭಾಯಿಸುವವಳೇ. ವಿಚಿತ್ರವೆಂದರೆ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಹೆಣ್ಣನ್ನು ಹೊಗಳುವವರೇ ಇನ್ನೊಂದೆಡೆ ತುಳಿಯುವವರು ಕೂಡಾ.
ಇಂದು ಸಮಾಜದಲ್ಲಿ ಹೆಣ್ಣಿನ ಮೇಲಾಗುತ್ತಿರುವ ಅತಿ ಹೀನ ಕೃತ್ಯವೆಂದರೆ ಅತ್ಯಾಚಾರ. ಅತ್ಯಾಚಾರ ಎಸಗಿ ಕೊಲೆ ಮಾಡಿ ಕಸ ಎಸೆದಂತೆ ಎಲ್ಲೆಂದರಲ್ಲಿ ಎಸೆದು ಬಿಡುವ ನಿಕೃಷ್ಟ ಸ್ಥಿತಿಗೆ ಮಾನವ ಎನಿಸಿಕೊಂಡ ಪ್ರಾಣಿಗಳು ತಲುಪಿವೆ ಎಂದರೆ ಸಮಾಜ ಎಲ್ಲಿವರೆಗೆ ಹದಗೆಟ್ಟಿದೆ ಎಂದು ಊಹಿಸಬಹುದು. ಒಂದೆಡೆ ಹೆಣ್ಣನ್ನು ದೇವತೆಗೆ ಹೋಲಿಸಿಕೊಂಡು ಭಾಷಣ ಬಿಗಿಯುವ ಮಂದಿ ಅದೇ ಹೆಣ್ಣಿಗೆ ಇನ್ಯಾರಿಂದಲೋ ಅನ್ಯಾಯವಾದಾಗ ಬಾಯ್ಮುಚ್ಚಿ ಕುಳಿತುಕೊಳ್ಳುತ್ತಾರೆ. ಅಂದ ಮೇಲೆ ಅವರಿಗೆ ಹೆಣ್ಣನ್ನು ಹೊಗಳುವ ಯೋಗ್ಯತೆಯೂ ಇಲ್ಲ.
ಒಂದು ಮಗುವನ್ನು ಒಂಬತ್ತು ತಿಂಗಳು ಹೊಟ್ಟೆಯೊಳಗೆ ಹೊತ್ತುಕೊಂಡು, ಆ ಮಗುವಿಗೆ ಜನ್ಮ ನೀಡಿ, ಅದರ ಲಾಲನೆ ಪಾಲನೆ ಮಾಡಿ ಮಗುವನ್ನು ಬೆಳೆಸಲು, ಆ ಮಗುವನ್ನು ಸಶಕ್ತ ಪ್ರಜೆಯಾಗಿ ರೂಪಿಸಲು ಒಬ್ಬ ತಾಯಿ ಎಷ್ಟು ಕಷ್ಟ ಪಡುತ್ತಾಳೆ ಎಂಬುದು ಈ ನಿಕೃಷ್ಟ ಮನಸ್ಥಿತಿಯವರಿಗೇನು ಗೊತ್ತು? ಕಷ್ಟಪಟ್ಟು ಸಾಕಿ ಬೆಳೆಸಿದ ಮಗಳನ್ನು ಯಾರೋ ಅತ್ಯಾಚಾರ ಎಸಗಿ ಕೊಲೆ ಮಾಡಿ ಎಸೆಯುತ್ತಾರೆಂದರೆ ಆ ತಾಯಿ ಕರುಳು ಅದು ಹೇಗೆ ತಾನೇ ತಡೆದುಕೊಳ್ಳಬಹುದು?
ಭಾರತವನ್ನು ವಿಶ್ವಗುರುವಾಗಿಸಬೇಕೆಂಬ ಶ್ರಮ ಒಂದೆಡೆ. ಆದರೆ ಯಾರೋ ಮಾಡುತ್ತಿರುವ ಅನಾಚಾರದ ಕೆಲಸದಿಂದಾಗಿ ಅದೇ ಭಾರತದ ಹೆಸರು ವಿಶ್ವ ಮಟ್ಟದಲ್ಲಿ ಹಾಳಾಗುತ್ತಿದೆ. ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾದ ಮೇಲೆ ಬಹುತೇಕ ಇಂತಹ ಘಟನೆಗಳು ದೇಶದ ಅಲ್ಲಲ್ಲಿ ಹೊರ ಬರುತ್ತಲೇ ಇರುತ್ತದೆ. ದೆಹಲಿಯ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಳಿಕ ಇಂತಹ ಸಾಕಷ್ಟು ಘಟನೆಗಳು ದೇಶದಲ್ಲಿ ನಡೆದು ಹೋಗಿವೆ. ಅತ್ಯಾಚಾರ-ಕೊಲೆ, ಪ್ರೀತಿಸಿ ಅತ್ಯಾಚಾರವೆಸಗಿ ಕೊಲೆ, ಪ್ರೀತಿ ನಿರಾಕರಿಸಿದಳೆಂದು ಕೊಲೆ…ಆದರೆ ಎಷ್ಟು ಘಟನೆಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಆಗಿದೆ? ಎಷ್ಟು ಘಟನೆಗಳು ಹಳ್ಳ ಹಿಡಿದಿವೆ ಎಂಬುದೇ ಚರ್ಚಿತ ವಿಷಯ.
ಹೆಣ್ಣು ಯಾವಾಗ ಮಧ್ಯರಾತ್ರಿಯೂ ಒಂಟಿಯಾಗಿ ನಡೆಯಬಲ್ಲಳೋ ಅಂದೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಂತೆ ಎಂದು ಮಹಾತ್ಮ ಗಾಂಧೀಜಿಯವರು ಅಂದು ಹೇಳಿದ್ದರು. ಆದರೆ ಮಧ್ಯರಾತ್ರಿಯಲ್ಲ, ಹಾಡು ಹಗಲೇ ಒಂಟಿಯಾಗಿ ನಡೆಯಲಾರದ ಪರಿಸ್ಥಿತಿಯಲ್ಲಿ ದೇಶದ ಹೆಣ್ಮಕ್ಕಳಿದ್ದಾರೆ.
ಕಳೆದ ಆಗಸ್ಟ್ ತಿಂಗಳಲ್ಲಿ ಇಂಡಿಯಾ ಟುಡೇ ವರದಿ ಮಾಡಿದ ಪ್ರಕಾರ ದೇಶದಲ್ಲಿ 2022ರಲ್ಲಿ 31516 ಅತ್ಯಾಚಾರ ಪ್ರಕರಣ ದಾಖಲಾಗಿದೆ. ದಿನವೊಂದಕ್ಕೆ ಕನಿಷ್ಠ 86 ಅತ್ಯಾಚಾರ ನಡೆದಿದೆ. ಪ್ರತೀ ಗಂಟೆಗೆ 4 ಅತ್ಯಾಚಾರವಾಗಿದೆ. ಇತ್ತೀಚಿನ ಸಂಖ್ಯೆಗಳು ಲಭ್ಯವಾಗಿಲ್ಲ. ಅತ್ಯಾಚಾರಕ್ಕೊಳಗಾದ ಮಹಿಳೆಯರು ತತ್‌ಕ್ಷಣವೇ ದೂರು ನೀಡಬಹುದು ಎಂದು ಸಂಬಂಧಪಟ್ಟವರು ಹೇಳುತ್ತಾರಾದರೂ, ನೀಡಿದ ಎಷ್ಟು ದೂರುಗಳಲ್ಲಿ ಕಾನೂನು ಪ್ರಕಾರ ಅತ್ಯಾಚಾರಿಗಳಿಗೆ ಶಿಕ್ಷೆ ಆಗಿದೆ ಎಂಬುದು ಪ್ರಶ್ನೆ.
ಇಲ್ಲಿ ನಾನು ಹೇಳುತ್ತಿರುವುದು ಪಬ್, ಬಾರ್ ಎಂದು ಎಲ್ಲೆಂದರಲ್ಲಿ ತಿರುಗಾಡುತ್ತಿರುವ ಹೆಣ್ಣು ಮಕ್ಕಳ ಬಗ್ಗೆಯಲ್ಲ. ತಾನಾಯಿತು, ತನ್ನ ಕೆಲಸವಾಯಿತು ಎಂಬಂತಿರುವ ಸುಸಂಸ್ಕೃತ ಹೆಣ್ಣು ಮಕ್ಕಳ ಬಗ್ಗೆ. ಶಾಲೆ-ಕಾಲೇಜಿಗೆ ಹೋದ ಮಗಳು ಮರಳಿ ಬರುವವರೆಗೆ, ದುಡಿಯಲು ಹೋದ ಮಗಳು ಮನೆಗೆ ಹಿಂತಿರುಗುವವರೆಗೆ, ಯಾವುದೇ ಅಗತ್ಯಕ್ಕಾಗಿ ಹೊರ ಹೋದ ಮಗಳು ಸುರಕ್ಷಿತವಾಗಿ ಮನೆಗೆ ಹಿಂತಿರುಗಿ ಬರುವವರೆಗೆ ಹೆಣ್ಣು ಮಕ್ಕಳ ತಂದೆ-ತಾಯಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಪ್ರಸ್ತುತ ಇದೆ. ಇಂದು ಅತ್ಯಾಚಾರದ ವಿಚಾರದಲ್ಲಿ ಬಾಲಾಪರಾಧಿಗಳೂ ಇದ್ದಾರೆ. ಕಾರಣ, ಶಾಲೆಗೆ ಹೋಗಿ ಕಲಿಯುವ ವಯಸ್ಸಿನಲ್ಲಿ ಕೈಗೆ ಬಂದಿರುವ ಮೊಬೈಲ್ ಎಂಬ ಭೂತ.
ಅತ್ಯಾಚಾರಿಗಳ ವಿರುದ್ದ ಕಠಿಣ ಕಾನೂನು ತಾರದ ಹೊರತು, ಇಂತಹ ಘಟನೆಗಳಾದಾಗ ಜಾತಿ, ಧರ್ಮ ನೋಡದೇ, ಶ್ರೀಮಂತರು-ಬಡವರು ಎನ್ನದೇ, ಯಾವ ಪಕ್ಷಕ್ಕೆ ಸೇರಿದವನು ಎನ್ನುವುದನ್ನು ನೋಡದೆ ಶಿಕ್ಷಿಸದ ಹೊರತು ಅತ್ಯಾಚಾರದಂತಹ ಹೇಯ ಕೃತ್ಯಗಳಿಗೆ ಕಡಿವಾಣ ಅಸಾಧ್ಯ. ಇನ್ನೊಮ್ಮೆ ಅಂತಹ ತಪ್ಪು ಮಾಡಲು ಯಾರೂ ಧೈರ್ಯ ಮಾಡದಂತಿರಬೇಕು ಶಿಕ್ಷೆಯ ಪ್ರಮಾಣ. ಹಾಗಿದ್ದಲ್ಲಿ ಮಾತ್ರ ಅತ್ಯಾಚಾರದಂತಹ ಅನಾಚಾರಗಳು ಕಡಿಮೆಯಾಗಿ ಹೆಣ್ಣು ಮಕ್ಕಳು ನಿರ್ಭೀತಿಯಿಂದ ಜೀವಿಸಲು ಸಾಧ್ಯ. ಆದರೆ ಜಾತಿ, ಧರ್ಮ, ಪಕ್ಷ, ಹಣ..ಇದೇ ಮೇಳೈಸುವ ನಮ್ಮ ಸಮಾಜದಲ್ಲಿ ಇದು ಸಾಧ್ಯವೇ ಎಂಬುದು ಪ್ರಶ್ನೆ.
✍️ಧನ್ಯಾ ಬಾಳೆಕಜೆ
(ಮಹಿಳಾ ದಿನ ವಿಶೇಷ) ಅತ್ಯಾಚಾರಿಗಳನ್ನು ಕಠಿಣವಾಗಿ ಶಿಕ್ಷಿಸದ ಹೊರತು..
