,
ಜಗಳವಾದಾಗ ದೇವರು ನೋಡಿಕೊಳ್ಳಲಿ, ದೈವ ನೋಡಿಕೊಳ್ಳಲಿ ಎಂದು ಹೇಳುವುದು ಸಾಮಾನ್ಯ. ಆದರೆ, ಇಲ್ಲಿ ಊರಿನಲ್ಲಿ ನಡೆಯುವ ಜಗಳವನ್ನು ಖುದ್ದಾಗಿ ದೈವವೇ ಬಂದು ಬಿಡಿಸುತ್ತದೆ. ಇಂಥಹುದೊಂದು ವಿಶೇಷ ನಂಬಿಕೆ ಇರುವುದು ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ
ಇಲ್ಲಿನ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಸಂದರ್ಭದಲ್ಲಿ ಅಡ್ಡಣಪಟ್ಟು ಆಚರಣೆ ನಡೆಯುತ್ತದೆ. ಈ ಬಾರಿ ಶುಕ್ರವಾರ ಬೆಳಗ್ಗೆ ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವ ಜರುಗಿತು. ಇದೇ ವೇಳೆ ಅಡ್ಡಣಪೆಟ್ಟು ಸಂಪ್ರದಾಯದಂತೆ ಜರುಗಿತು. ಬಳಕ ಪ್ರಸಾದ ವಿತರಣೆ ನಡೆದು ಶ್ರೀ ಧೂಮಾವತಿ ಮತ್ತು ರುದ್ರಚಾಮುಂಡಿ ದೈವದ ನೇಮ ನಡೆಯಿತು.
ನೇಮದಲ್ಲಿ ಬೆಳಗ್ಗೆ ದೇವಸ್ಥಾನಕ್ಕೆ ಸಂಬಂಧಪಟ್ಟ ಕೇನಾಜೆ-ಮುರೂರು, ಮಾವಣೆ-ಬೊಳುಗಲ್ಲು ನಾಲ್ಕೂರಿನ ಪ್ರತಿನಿಧಿಗಳ ನಡುವೆ ತುಳುನಾಡಿನ ಅಡ್ಡಣಪೆಟ್ಟು ಎಂಬ ವಿಶಿಷ್ಟ ಹೊಡೆದಾಟದ ಆಚರಣೆ ನಡೆಯಿತು. ಕೇನಾಜೆ-ಮುರೂರು ಒಂದು ಪಕ್ಷವಾಗಿ, ಮಾವಜಿ-ಬೊಳುಗಲ್ಲು ಇನ್ನೊಂದು ಪಕ್ಷವಾಗಿ ನಿಂತು ದೇವಸ್ಥಾನದ ಬಲಭಾಗದ ಗದ್ದೆಯಲ್ಲಿ ಪ್ರತಿಷ್ಠಾಪಿಸಲಾದ ಇರುವೆರ್ ಉಳ್ಳಾಕುಲು ದೈವದ ಕಟ್ಟೆಯ ಮುಂದೆ ಉಳ್ಳಾಕುಲು ನೇಮದ ಸಂದರ್ಭಹೊಡೆದಾಡುತ್ತಾರೆ.
ಈ ನಾಲ್ಕು ಮನೆತನದ ಪ್ರತಿನಿಧಿಗಳು ಸಮವಸ್ತ್ರ ಧರಿಸಿ, ಬೆತ್ತದಿಂದ ತಯಾರಿಸಿದ ಗುರಾಣಿಯ ಮಾದರಿಯ ಅಡ್ಡಣವನ್ನು ಹಿಡಿದು ದಂಡದಿಂದ ಪರಸ್ಪರ ಹೊಡೆದುಕೊಳ್ಳುತ್ತಾರೆ. ಈ ವೇಳೆ ಉಳ್ಳಾಕುಲು ದೈವ ಬಂದು ಹೊಡೆದಾಟವನ್ನು ಬಿಡಿಸುತ್ತದೆ. ಈ ವಿಶಿಷ್ಟ ಆಚರಣೆಯನ್ನು ಸಾವಿರಾರು ಮಂದಿ ವೀಕ್ಷಿಸಿದರು. ಸಂಪ್ರದಾಯದಂತೆ ನಡೆದ ಅಡ್ಡಣ ಪೆಟ್ಟು ಆಚರಣೆ.
ಮಂಡೆಕೋಲು ದೇವಸ್ಥಾನದ ಜಾತ್ರೆ ನೇಮದಲ್ಲಿ ಅಡ್ಡಣ ಪೆಟ್ಟು ಸಂಪ್ರದಾಯಕ್ಕೆ ಬೇರೆಬೇರೆ ಐತಿಹ್ಯವಿದೆ. ಅಡ್ಡಣವೆಟ್ಟು ನಡೆದರೆ ಊರಿನಲ್ಲಿ ಮುಂದೆ ಗಲಾಟೆ, ಹೊಡೆದಾಟಗಳು ಸಂಭವಿಸುವುದಿಲ್ಲ ಎಂಬ ನಂಬಿಕೆಯೂ ಊರಿನ ಭಕ್ತಜನರಲ್ಲಿದೆ. ನಾಲ್ಕೂರಿನ ಜಗಳವನ್ನು ದೈವ ಬಿಡಿಸುವುದು, ಗಲಾಟೆ ಮಾಡದೆ ಸೌಹಾರ್ದದಿಂದ ಬಾಳಿ ಎನ್ನುವ ಸಂದೇಶವೂ ಈ ಆಚರಣೆಯಲ್ಲಿದೆ. ಪುರಾತನ ಕಾಲದಲ್ಲಿಯಾವುದೋ ಗಲಾಟೆ ನಡೆದ ಸಂದರ್ಭ ಉಳ್ಳಾಕುಲು ದೈವಬಂದು ಗಲಾಟೆ ಬಿಡಿಸಿ ಪರಸ್ಪರ ಸಂಧಾನ ನಡೆಸಿತ್ತು ಎಂಬ ಪ್ರತೀತಿಯೂ ಇದೆ. ಇದೇ ಕಾರಣದಿಂದ ಪ್ರತೀ ವರ್ಷ ಉಳ್ಳಾಕುಲು ನೇಮದ ಸಂದರ್ಭ ಅಡ್ವಣಪೆಟ್ಟು ಒಂದು ಸಂಪ್ರದಾಯವಾಗಿ ನಡೆದು ಬರುತ್ತಿದೆ.