✍️ಧನ್ಯಾ ಬಾಳೆಕಜೆ
ಕಳೆದ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಎಐ ಮುಖಾಂತರ ಎಡಿಟ್ ಮಾಡಿರುವುದು ಎನ್ನಲಾದ ಫೋಟೋಗಳು ಹರಿದಾಡುತ್ತಿದ್ದವು. ಬೆಳಗ್ಗೆ ಎದ್ದ ಕೂಡಲೇ ಫೇಸ್ಬುಕ್ ತೆರೆದಾಗ ಹರಿದಾಡುತ್ತಿದ್ದ ಇಂತಹ ಫೋಟೋಗಳು ನಿಜವೇ ಆಗಿರಬೇಕು ಎನ್ನುವಷ್ಟು ಸಹಜವಾಗಿದ್ದವು ಮತ್ತು ಈಗಲೂ ಅಂತಹ ಫೋಟೋಗಳು ನಿಜವೇ ಇರಬಹುದಲ್ಲವೇ ಎಂಬಷ್ಟು ಗೊಂದಲಗಳು ಮನಸ್ಸಿನೊಳಗೆ ಕೊರೆಯುವಷ್ಟು ಸಹಜವಾದ ಎಡಿಟ್ ಮಾಡಲಾದ ಫೋಟೋಗಳವು.
ಆ ಫೋಟೋಗಳು ಯಾವುವು, ಅದರಲ್ಲಿದ್ದ ವ್ಯಕ್ತಿಗಳು ಯಾರು ಎಂಬುದೆಲ್ಲ ಇಲ್ಲಿ ಅನಗತ್ಯ. ಆದರೆ ಇಂತಹ ಫೋಟೋಗಳನ್ನು ಸೃಷ್ಟಿ ಮಾಡಲು ಬಳಸಿಕೊಂಡ ತಂತ್ರಜ್ಞಾನದ ಬಗ್ಗೆ ನಾಗರಿಕ ಸಮಾಜ ಧ್ವನಿ ಎತ್ತಲೇಬೇಕಾದ ಅವಶ್ಯಕತೆ ಇದೆ. ಭಾರತದ ಭವಿಷ್ಯ ಕಮರಬಾರದು, ಅರಳಬೇಕು ಎಂಬ ಕಳಕಳಿಯೊಂದಿಗೆ.
ಎಐ (ಕೃತಕ ಬುದ್ದಿಮತ್ತೆ) ತಂತ್ರಜ್ಞಾನ ನಮ್ಮನ್ನು ಆಳುತ್ತಿದೆ. ಎಲ್ಲವನ್ನು ಸುಲಭದಲ್ಲಿ ದಕ್ಕಿಸಿಕೊಡಬಲ್ಲ ಸಾಮರ್ಥ್ಯ ಹೊಂದಿರುವ ಎಐ ತಂತ್ರಜ್ಞಾನಕ್ಕೆ ನಾವು ಮಾರು ಹೋಗಿದ್ದೇವೆ. ಬಹುಶಃ ನಮ್ಮೆಲ್ಲ ಕೆಲಸಗಳಿನ್ನು ಸ್ಮಾರ್ಟ್ ಮತ್ತು ಶೀಘ್ರ ಎಂದೇ ನಾವಂದುಕೊಂಡಿದ್ದೇವೆ. ಕಷ್ಟ ಎಂಬುದೇ ಮರೆತು ಹೋಗುವಷ್ಟು ಸುಲಭದ ಹಾದಿಯನ್ನು ನಮಗೆ ಎಐ ದಕ್ಕಿಸಿಕೊಟ್ಟಿದೆ. ಮತ್ತು ಅಷ್ಟರಮಟ್ಟಿಗೆ ನಾವದಕ್ಕೆ ಅಂಟಿಕೊಂಡಿದ್ದೇವೆ.
ತಂತ್ರಜ್ಞಾನದ ಬೆಳವಣಿಗೆ ಆಗಬೇಕಾದದ್ದೇ. ತಂತ್ರಜ್ಞಾನ ಕ್ಷೇತ್ರ ಅಭಿವೃದ್ದಿಯಾದಂತೆಲ್ಲ ನಮ್ಮ ಕೆಲಸ ಕಾರ್ಯಗಳಿಗೂ ವೇಗ ಸಿಗುತ್ತದೆ ಎಂಬುದು ಖುಷಿಯೇ. ದಿನಗಳು, ವರ್ಷಗಳು ತೆಗೆದುಕೊಳ್ಳುತ್ತಿದ್ದ ಕೆಲಸ ಕಾರ್ಯಗಳು ಕ್ಷಣಮಾತ್ರದಲ್ಲಿ ಆಗುತ್ತವೆ ಎಂದರೆ ಬಹುಶಃ ಈಗಿನ ಯುಗದಲ್ಲಿ ಅದರ ಅಗತ್ಯತೆಯೂ ಅಗತ್ಯವೇ. ಮುಂದುವರಿದ ತಂತ್ರಜ್ಞಾನಕ್ಕೆ ಹೊಸ ಸೇರ್ಪಡೆಯಾಗಿ ಕಳೆದ ಕೆಲವು ವರ್ಷಗಳಿಂದೀಚೆಗೆ ಸದ್ದು ಮಾಡುತ್ತಿರುವ ಮತ್ತು ಇತ್ತೀಚೆಗೆ ತುಸು ಜಾಸ್ತಿಯೇ ಪ್ರಚಲಿತದಲ್ಲಿರುವ ಎಐ ತಂತ್ರಜ್ಞಾನದ ಕಾರ್ಯವೈಖರಿ.
ಎಲ್ಲಾ ಕೆಲಸಗಳಿಗೂ ಮಾನವಶಕ್ತಿಯನ್ನೇ ನೆಚ್ಚಿಕೊಂಡಿದ್ದ ಜಗತ್ತಿನಲ್ಲೀಗ ಎಐ ಹವಾ. ಮಾನವಶಕ್ತಿಯನ್ನು ಕಡಿಮೆಮಾಡಿ ತಂತ್ರಜ್ಞಾನ ಶಕ್ತಿಯನ್ನೇ ಬಳಸಿಕೊಂಡು ಕೆಲಸ ಮಾಡುವ ಸಾಮರ್ಥ್ಯಕ್ಕೆ ಮಾರು ಹೋಗದ ಮನುಷ್ಯರಿಲ್ಲ. ಒಂದು ರೀತಿಯಲ್ಲಿ ನೋಡಿದರೆ ಇದರ ಪರಿಣಾಮಕಾರಿ ಬಳಕೆ ಎಲ್ಲಾ ಕ್ಷೇತ್ರಗಳಲ್ಲೂ ಒಳ್ಳೆಯದಲ್ಲವಾದರೂ, ಅಗತ್ಯಕ್ಕಷ್ಟೇ ಸೀಮಿತಗೊಳಿಸಿ ಬಳಕೆ ಮಾಡಿದರೆ ಪೂರಕವೇ. ಇದು ಕೆಲಸದ ದೃಷ್ಟಿಯಿಂದ ನೋಡಿದಾಗಲಷ್ಟೇ. ಆದರೆ ಮನುಷ್ಯನ ಕೆಲಸವನ್ನು ಕಡಿಮೆ ಮಾಡುವ ಈ ಕೃತಕ ಬುದ್ದಿಮತ್ತೆಯು ಇನ್ನೊಂದೆಡೆ ಅದೇ ಮನುಷ್ಯನನ್ನು ಕೊಲ್ಲುತ್ತಿದೆ ಎಂದರೆ ತಪ್ಪಿಲ್ಲ.
ಎಐ ಉಪಯೋಗಿಸಿಕೊಂಡು ಫೋಟೋಗಳನ್ನು ಎಡಿಟ್ ಮಾಡಬಹುದು. ನಿಮಗೆ ಯಾವುದೇ ಸ್ಥಳಗಳಿಗೆ ಹೋಗಲು ಅಸಾಧ್ಯ ಎಂದಿಟ್ಟುಕೊಳ್ಳೋಣ. ಆಗ ಎಐ ನಿಮ್ಮ ಸಹಾಯಕ್ಕೆ ಬರುತ್ತದೆ. ಯಾವ ಸ್ಥಳದಲ್ಲಿ ನಿಂತು ಫೋಟೋ ತೆಗೆಯಬೇಕೆಂದು ಬಯಸುವಿರೋ ಆ ಸ್ಥಳದೊಂದಿಗೆ ನಿಮ್ಮ ಫೋಟೋ ನಿಲ್ಲಿಸಲು ಹೇಳಿ ಎಐಗೆ ನಿಮ್ಮ ಫೋಟೋ ಕಳುಹಿಸಿದರೆ ಸೆಕೆಂಡ್‌ಗಳಲ್ಲಿ ಆ ಫೋಟೋ ನಮ್ಮ ಮುಂದೆ ಇರುತ್ತದೆ. ಧರಿಸಿದ ಬಟ್ಟೆಯ ಬಣ್ಣಗಳನ್ನೂ ಬದಲಾಯಿಸಿಕೊಡುತ್ತದೆ. ನಮ್ಮ ಫೋಟೋದೊಂದಿಗೆ ಇತರರ ಫೋಟೋಗಳನ್ನು ಮರ್ಜ್ ಮಾಡಿಕೊಡಲು ಹೇಳಿದರೆ ಅದನ್ನೂ ಮಾಡಿಕೊಡುತ್ತದೆ. ನಿಜವಾಗಲೂ ಫೋಟೋ ತೆಗೆದಂತೆಯೇ ಭಾಸವಾಗುವ ಮತ್ತು ಎಡಿಟ್ ಮಾಡಲಾದ ಫೋಟೋವೆಂದು ಗೊತ್ತೇ ಆಗದಷ್ಟು. ಆದರೆ ಇದೇ ಎಐಯ ಫೋಟೋ ಎಡಿಟಿಂಗ್ ಕೆಲವರ ಬಾಳನ್ನೇ ನರಕವಾಗಿಸಬಹುದು ಎಂಬ ಪರಿಜ್ಞಾನ ನಮಗಿಲ್ಲ.
ಕಳೆದ ಕೆಲವು ತಿಂಗಳುಗಳ ಹಿಂದೆ ಕೆಲ ನಟಿಯರ ಡೀಪ್ ಫೇಕ್ ಫೋಟೋಗಳು ವೈರಲ್ ಆದವು. ರಿಯಲ್ ಫೋಟೋಗಳಲ್ಲದಿದ್ದರೂ, ನಿಜವಾದ ಫೋಟೋಗಳಂತೇ ಭಾಸವಾಗುವ ಫೋಟೋಗಳು. ಕಳೆದ ನಾಲ್ಕೈದು ದಿನಗಳಿಂದೀಚೆಗೆ ಒಂದಷ್ಟು ಅಸಹನೀಯ ಎನಿಸುವಷ್ಟು ಎಡಿಟ್ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಯಾರದ್ದೋ ಫೋಟೋವನ್ನು ಇನ್ಯಾರದ್ದೋ ಫೋಟೋಗಳ ಜೊತೆಗೆ ನಿಲ್ಲಿಸಿ, ಎಡಿಟ್ ಮಾಡಿದ್ದು ಗೊತ್ತೇ ಆಗದಂತೆ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿತ್ತು. ಫೋಟೋಗಳು ಯಾರದ್ದೇ ಆಗಿರಬಹುದು. ಆದರೆ ಆ ಫೋಟೋಗಳ ಸೃಷ್ಟಿಗೆ ಬಳಕೆಯಾದ ಎಐ ತಂತ್ರಜ್ಞಾನವು ಭವಿಷ್ಯದ ಜನಾಂಗದ ಮೇಲೆ ಬೀರುವ ಪರಿಣಾಮ ಎಂತಹುದು ಎಂಬುದು ಚಿಂತನೆಗೆ ಹಚ್ಚುವಂತೆ ಮಾಡಿತ್ತು. ಈ ಎಐ ಫೋಟೋ ಎಡಿಟಿಂಗ್ ಎಂಬುದೊಂದು ಮಾರಕ ಕಾಯಿಲೆಯಂತೆ ಹಬ್ಬುವುದು ಖಂಡಿತ. ಜೊತೆಗೆ ಈಗಿಂದಲೇ ಎಚ್ಚೆತ್ತುಕೊಳ್ಳದಿದ್ದರೆ ಬಾಳಿ ಬದುಕಬೇಕಾದ ಮಕ್ಕಳ ಬದುಕು ಕಸಿಯುವುದೂ ನಿಶ್ಚಿತ.
ಹೇಳಿಕೇಳಿ ನಮ್ಮ ಭಾರತ ಮರ್ಯಾದಸ್ಥರ ಕುಟುಂಬಗಳಿಂದ ತುಂಬಿರುವ ದೇಶ. ಮರ್ಯಾದೆಗೆ ಅಂಜಿ ಬದುಕುವ ಅದೆಷ್ಟೋ ಹಳ್ಳಿ ಜನಗಳನ್ನು ಕಾಣಬಹುದು. ಮರ್ಯಾದೆಗೆ ತುಸು ತೊಂದರೆಯಾದರೂ ಜೀವಕ್ಕೇ ಹಾನಿ ಮಾಡಿಕೊಳ್ಳಬಲ್ಲ ಅದೆಷ್ಟೋ ಕುಟುಂಬಗಳು ಇಂದಿಗೂ ಇವೆ. ಇಂತಿಪ್ಪ ಸಮಾಜದಲ್ಲಿ ಎಐ ಬಳಸಿಕೊಂಡು ಮಾಡುತ್ತಿರುವ ಫೋಟೋ ಎಡಿಟಿಂಗ್‌ಗಳು ಭವಿಷ್ಯಕ್ಕೆ ಕುತ್ತಾಗಲಿದೆ ಅನಿಸುತ್ತಿಲ್ಲವೇ? ದ್ವೇಷ, ಅಸಹನೆ, ಸಿಟ್ಟು ತೀರಿಸಲು ಇಂತಹ ಫೋಟೋ ಎಡಿಟಿಂಗ್ ತಂತ್ರಜ್ಞಾನ ಬಳಕೆಯಾಗುವ ಅಪಾಯವಿದೆ.
ಫೋಟೋ ಎಡಿಟಿಂಗ್ ಅಪ್ಲಿಕೇಶನ್‌ಗಳು ಹೊಸತಲ್ಲ. ಈಗಾಗಲೇ ಅಸಲಿ ಫೋಟೋ, ವೀಡಿಯೋಗಳನ್ನಿಟ್ಟುಕೊಂಡು ಬ್ಲ್ಯಾಕ್‌ಮೇಲ್‌ನಿಂದಾಗಿ ಜೀವ ಕಳೆದುಕೊಂಡ ಹಲವು ಉದಾಹರಣೆಗಳು ನಮ್ಮಲ್ಲಿವೆ. ಅವುಗಳ ಸಾಲಿಗೆ ಎಐ ಹೊಸ ಸೇರ್ಪಡೆ. ಇಲ್ಲದ ಫೋಟೋ, ವೀಡಿಯೋಗಳನ್ನು ಎಐ ಬಳಸಿಕೊಂಡು ಸೃಷ್ಟಿಸಿ ಬ್ಲ್ಯಾಕ್‌ಮೇಲ್ ಮಾಡಿ ಇನ್ನೆಷ್ಟು ಜೀವಗಳು ಹೋಗುವುದಕ್ಕೆ ಈ ತಂತ್ರಜ್ಞಾನ ಕಾರಣವಾಗಬಹುದೋ ಎಂಬುದನ್ನು ನೆನೆದರೇ ಭಯವಾಗುತ್ತದೆ. ಮೊದಲೇ ಮರ್ಯಾದೆಗಂಜುವ ಸಮಾಜದಲ್ಲಿ ಇಂತಹ ತಂತ್ರಜ್ಞಾನಗಳ ಬಳಕೆ ಖಂಡಿತವಾಗಿಯೂ ಇನ್ನಷ್ಟು ಅಸಹನೀಯ ವಾತಾವರಣದ ಸೃಷ್ಟಿಗೆ ಕಾರಣವಾಗಬಲ್ಲುದು ಎಂಬುದಂತೂ ಸತ್ಯ. ಯಾರದ್ದೋ ಫೋಟೋವನ್ನು ಇನ್ಯಾರದ್ದೋ ಫೋಟೋದೊಂದಿಗೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ಅನಾಗರಿಕ ಸಂಸ್ಕೃತಿಗೆ ಈಗಿಂದೀಗಲೇ ಅಂತ್ಯ ಹಾಡಬೇಕಾದ ಅನಿವಾರ್ಯತೆ ಇದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳ ವಿಚಾರದಲ್ಲಿ ದೊಡ್ಡ ಅನಾಹುತವನ್ನೇ ಈ ಎಐ ಸೃಷ್ಟಿಸಬಹುದು.
ಎಐ ಫೋಟೋ ಎಡಿಟಿಂಗ್ ಎಂಬ ಮಾರಕ ಕಾಯಿಲೆಗೆ ಬಲಿಯಾಗದಿರಿ!


















