ಮರ್ಯಾದಾ ಹತ್ಯೆ ಮತ್ತು ಕಲುಷಿತ ಮನುಷ್ಯತ್ವ

✍️*ಧನ್ಯಾ ಬಾಳೆಕಜೆ*
ಕರ್ನಾಟಕದಲ್ಲಿ ಕಳೆದೊಂದು ವಾರದಿಂದೀಚೆಗೆ ನಡೆದ ಎರಡು ಪ್ರತ್ಯೇಕ ಘಟನೆಗಳು ಬಹುಶಃ ಮನುಷ್ಯತ್ವದ ಅಂತರಂಗ ಎಷ್ಟು ಕಲುಷಿತಗೊಂಡಿದೆ ಎಂಬುದನ್ನು ತೆರೆದಿಟ್ಟಿದೆ. ಒಂದೆಡೆ ಸಮಾಜಕ್ಕೆ ಹೆದರಿ ಮರ್ಯಾದಾ ಹತ್ಯೆ ನಡೆದರೆ, ಇನ್ನೊಂದೆಡೆ ನೂರ್ಕಾಲ ಸುಖವಾಗಿ ಬಾಳಿ ಎಂದು ಹಿರಿಯರ ಆಶೀರ್ವಾದ ಪಡೆದುಕೊಂಡು ಎರಡು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಪರಸ್ಪರ ಅನುಮಾನ-ಅವಮಾನಕ್ಕೊಳಗಾಗಿ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ.
ಮಾನ್ಯ ಎಂಬ ಯುವತಿ ಕೆಳಜಾತಿಯ ಯುವಕನನ್ನು ವರಿಸಿದಕ್ಕಾಗಿ ತಂದೆಯಿಂದಲೇ ಕ್ರೂರವಾಗಿ ಹತ್ಯೆಗೀಡಾಗಿದ್ದಾಳೆ. ಅದೂ ಗರ್ಭಿಣಿಯಾಗಿದ್ದಾಗ. ಕುಟುಂಬದ ಮರ್ಯಾದೆಯನ್ನು ಹಾಳು ಮಾಡಿ ಮಾನ್ಯ ಮದುವೆಯಾಗಿದ್ದಾಳೆ ಎಂಬುದೇ ತಂದೆಯ ಸಿಟ್ಟು ಮತ್ತು ಈ ದುಡುಕಿನ ನಿರ್ಧಾರಕ್ಕೆ ಕಾರಣವಾಗಿದೆ. ಇಲ್ಲಿ ಅವರಿವರು ಆಡಿಕೊಳ್ಳುತ್ತಾರೆಂದು ಮಗಳನ್ನೇ ಮುಗಿಸಿದ್ದಾನೆ ಹೆತ್ತ ತಂದೆ. ಆದರೆ ಈಗ ಆಡಿಕೊಂಡವರು ನೆಮ್ಮದಿಯಾಗಿದ್ದಾರೆ ಮತ್ತು ಮಗಳನ್ನು ಕೊಂದದ್ದಕ್ಕಾಗಿ ತಂದೆ ಜೈಲಿನಲ್ಲಿ ದಿನಗಳೆಯುವಂತಾಗಿದೆ.
ಮೊದಲಾಗಿ ತಂದೆಯ ದೃಷ್ಟಿಯಿಂದ ಯೋಚಿಸೋಣ. ಚಿಕ್ಕಿಂದಿನಿಂದ ಬೇಕಾದ್ದನ್ನೆಲ್ಲಾ ಕೊಡಿಸಿ ಮಕ್ಕಳಿಗೆ ಏನೊಂದೂ ಕೊರತೆಯಾಗದಂತೆ ನೋಡಿಕೊಳ್ಳುವ ಹೆತ್ತವರಿಗೆ ಅದೇ ಮಕ್ಕಳು ವಯಸ್ಸಿಗೆ ಬಂದಾಗ ಕನಸುಗಳಿರುವುದು ಸಹಜ. ಮಕ್ಕಳ ಮದುವೆಯನ್ನು ಕಣ್ತುಂಬಿಕೊಳ್ಳುವ ಆಸೆ ಪ್ರತೀ ತಂದೆ ತಾಯಿಗೂ ಸಹಜ. ಆದರೆ ವಯಸ್ಸಿಗೆ ಬಂದಂತೆ ಹೆತ್ತವರನ್ನೇ ಧಿಕ್ಕರಿಸಿ ನಿನ್ನೆ ಮೊನ್ನೆ ಸಿಕ್ಕಿದ ಪ್ರೀತಿಯ ಹಿಂದೆ ಹೋಗುವುದರಿಂದ ಜೀವನಪೂರ್ತಿ ಪ್ರೀತಿ ಧಾರೆ ಎರೆಯುವ ಹೆತ್ತವರಿಗೆ ಅದೆಷ್ಟು ನೋವು ಕೊಡಬಹುದೆಂದು ಮಕ್ಕಳು ಯೋಚಿಸುವುದಿಲ್ಲ, ಅದು ಅರಿವಾಗುವ ಹೊತ್ತಿಗೆ ಕಾಲ ಮಿಂಚಿರುತ್ತದೆ. ಅಂತಹ ಮಕ್ಕಳಿಗೆ ಅರಿಕೆ ಮಾಡುವುದು ಅಸಾಧ್ಯವಾದಾಗ ತಂದೆಯಾದವನು ಏನು ತಾನೆ ಮಾಡಲು ಸಾಧ್ಯ? ಹಾಗಂತ ಆ ತಂದೆ ಹಿಡಿದ ದಾರಿ ಮಾತ್ರ ನಿಕೃಷ್ಟ. ಕೊಲ್ಲುವ ಬದಲು ಅವಳಷ್ಟಕ್ಕೆ ಬದುಕಲಿ ಎಂದು ಬಿಟ್ಟು ಬಿಡಬಹುದಿತ್ತು. ಆದರೆ ಆಕೆಯ ಜೀವ ತೆಗೆದ ತಂದೆ ತನ್ನ ಜೀವನವನ್ನೂ ಜೈಲಿನಲ್ಲಿ ಕಳೆಯುವ ಹಾಗೆ ಮಾಡಿಕೊಂಡ.
ಇಲ್ಲಿ ಆಗಿರುವುದು ʼಮರ್ಯಾದೆ ಹತ್ಯೆʼ ಅಂದರೆ ಮರ್ಯಾದೆಗಂಜಿ ನಡೆದ ಹತ್ಯೆ. ಮರ್ಯಾದೆ ಎಂಬುದು ಪ್ರತಿ ಮನುಷ್ಯನಿಗೂ ಮುಖ್ಯ. ಅದಕ್ಕೆ ಚ್ಯುತಿ ಬಂದಾಗ ಆಗುವ ಅನಾಹುತಗಳಿಗೆ ಇದೊಂದು ಉದಾಹರಣೆ. ಇಲ್ಲಿ ಮರ್ಯಾದೆಗೆ ಚ್ಯುತಿ ಬರುವುದು ಆಡಿಕೊಳ್ಳುವವರಿಂದಾಗಿ. ಬಹುಶಃ ಸಮಾಜದಲ್ಲಿ ನಡೆಯುವ ದುರಂತಗಳಿಗೆಲ್ಲಾ ಆಡಿಕೊಳ್ಳುವವರ ಬಾಯಿಯೇ ಮೂಲ ಕಾರಣ ಅಲ್ಲವೇ. ಮದುವೆಯಾಗಲಿಲ್ಲವೆಂದೋ, ಮದುವೆಯಾದರೂ ಮಕ್ಕಳಾಗಲಿಲ್ಲವೆಂದೋ, ವಯಸ್ಸಿನ ಬಗ್ಗೆ, ದಪ್ಪ ಇದ್ದರೂ, ಸಣ್ಣಕ್ಕಿದ್ದರೂ…ಆಡಿಕೊಳ್ಳುವುದು ಕೆಲವರ ಮಾನಸಿಕ ಅಸ್ವಸ್ಥತೆ, ಅದೊಂದು ಚಟ. ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳು ಇದನ್ನೇ ಮರ್ಯಾದೆಗೆ ಧಕ್ಕೆ ಎಂದು ಮಾಡಬಾರದ ಕೃತ್ಯಗಳನ್ನು ಎಸಗಿ ತಮ್ಮ ಜೀವನವನ್ನು ಕೈಯಾರೆ ಹಾಳು ಮಾಡಿಕೊಳ್ಳುತ್ತಾರೆ. ಬಹುಶಃ ಹುಬ್ಬಳ್ಳಿಯ ಈ ಘಟನೆಯೂ ಇದೇ ಕಾರಣಕ್ಕೆ ನಡೆದು ಹೋಗಿದೆ.
ಹುಬ್ಬಳ್ಳಿಯ ಮಾನ್ಯ ಘಟನೆಯ ಬೆನ್ನಲ್ಲೇ ಬೆಂಗಳೂರಿನಲ್ಲಿ ಗಾನವಿ ಎಂಬ ಯುವತಿ ಕೂಡಾ ಸಾವಿನ ದಾರಿ ಹಿಡಿದಿದ್ದಾಳೆ. ಇದೀಗ ಆಕೆಯ ಪತಿಯೂ. ಎರಡು ತಿಂಗಳ ಹಿಂದಷ್ಟೇ ಹಿರಿಯರ ಆಶೀರ್ವಾದದೊಂದಿಗೆ ಮದುವೆಯಾದ ಜೋಡಿ ಯಾವುದೋ ಕಾರಣಕ್ಕೆ ಇನ್ನಿಲ್ಲವಾಗಿದ್ದಾರೆ. ಈ ಆತ್ಮಹತ್ಯೆಗೆ ಸ್ಪಷ್ಟ ಕಾರಣ ಗೊತ್ತಿಲ್ಲ. ಯುವತಿ ಮನೆಯವರು ಆರೋಪಿಸುವಂತೆ ವರದಕ್ಷಿಣೆ ಕಿರುಕುಳ, ಹಿಂಸೆ ತಾಳಲಾರದೆ, ಮರ್ಯಾದೆಗಂಜಿ ಗಂಡನನ್ನು ತ್ಯಜಿಸಿ ಬರಲಾರದೆ ಗಾನವಿ ಸಾವಿನ ದಾರಿ ಹಿಡಿದಿದ್ದಾಳೆ. ದಾಂಪತ್ಯ ಕಲಹದಿಂದ ಪರಸ್ಪರ ಮನಸ್ತಾಪ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಇನ್ನೊಂದು ಕಡೆ ಹೇಳಲಾಗುತ್ತಿದೆ. ಈ ನಡುವೆ ಗಾನವಿ ಸಾವಿನ ಬೆನ್ನಲ್ಲೇ ಅವಮಾನ ತಾಳಲಾರದೆ ಆಕೆಯ ಪತಿಯೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಒಟ್ಟಿನಲ್ಲಿ ಕುಳಿತು ಸರಿ ಮಾಡಬಹುದಾಗಿದ್ದ ಮನಸ್ತಾಪವೊಂದು ಎರಡು ಜೀವಗಳನ್ನೇ ತೆಗೆದಿದೆ ಎಂಬುದು ಸ್ಪಷ್ಟ.
ಇಲ್ಲೂ ಅಷ್ಟೇ. ಇಬ್ಬರಿಗೂ ಹಲವು ಆಯ್ಕೆಗಳಿದ್ದವು. ಪರಸ್ಪರ ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಬಹುದಿತ್ತು. ಅದಾಗದಿದ್ದರೆ ಹಿರಿಯರ ಸಮ್ಮುಖದಲ್ಲಿ ಸಮಸ್ಯೆ ನಿವಾರಿಸಿಕೊಳ್ಳಬಹುದಿತ್ತು. ಅದೂ ಆಗಿಲ್ಲವೆಂದರೆ ಕೊನೆಯದಾಗಿ ವಿಚ್ಚೇದನ ಪಡೆದು ಬೇರೆಬೇರೆಯಾಗಬಹುದಿತ್ತು. ಆದರೆ ಇದೆಲ್ಲದಕ್ಕೂ ʼಮರ್ಯಾದೆʼ ಅಡ್ಡಿಯಾಗಿತ್ತು. ಮೃತಳ ತಾಯಿಯೇ ಹೇಳಿದಂತೆ ಸಮಸ್ಯೆಗಳ ಬಗ್ಗೆ ಮಾತನಾಡಿದರೆ ಮರ್ಯಾದೆ ಹೋಗುತ್ತದೆ ಎಂದು ಆಕೆ ಹೇಳಿದ್ದಳು ಎನ್ನುತ್ತಾರೆ. ಅಂದ ಮೇಲೆ ಈ ಸಾವೂ ಮರ್ಯಾದೆಗಂಜಿ ಅನ್ಯಾಯವಾಗಿ ಘಟಿಸಿ ಹೋಗಿದೆ. ಖಂಡಿತಾ ಆಕೆ ಬದುಕಿರುತ್ತಿದ್ದರೆ ಮತ್ತು ಸಮಸ್ಯೆಗಳಿಂದ ಹೊರಬರಲು ವಿಚ್ಚೇದನದ ದಾರಿ ಹಿಡಿದಿದ್ದರೆ ಈ ವಿಷಪೂರಿತ ಸಮಾಜ ಆಕೆಯನ್ನು ನೆಮ್ಮದಿಯಾಗಿ ಬದುಕಲು ಬಿಡುತ್ತಿತ್ತೇ? ಚುಚ್ಚು ಮಾತುಗಳಿಂದ ಮುಕ್ತವಾಗಿರಿಸುತ್ತಿತ್ತೇ? ಇದಕ್ಕೆ ಉತ್ತರ ಖಂಡಿತಾ ʼಇಲ್ಲʼವೆಂದೇ ಹೇಳಬಹುದಲ್ಲವೇ? ಆ ಮೂಲಕ ಇದೊಂದು ಆತ್ಮಹತ್ಯೆಯಾದರೂ ಮರ್ಯಾದೆಗಂಜಿ ನಡೆದ ಆತ್ಮʼಹತ್ಯೆʼ ಎನ್ನಬಹುದು. ಮರ್ಯಾದೆ ಕಳೆಯುವ ಸಮಾಜವೇ ಈ ಹತ್ಯೆಗೆ ಹೊಣೆಯಲ್ಲವೇ? ಹೆಣ್ಣು ಮಕ್ಕಳನ್ನು ನೆಮ್ಮದಿಯಾಗಿ ಬದುಕಲು ಈ ಸಮಾಜ ಬಿಡುವುದಿಲ್ಲ ಎಂಬುದು ನಗ್ನಸತ್ಯ.
ಮರ್ಯಾದೆ ಎಂದರೆ ಕೊಲ್ಲುವುದಲ್ಲ, ಮಾನಸಿಕವಾಗಿ ಸಾಯಿಸುವುದೂ ಅಲ್ಲ. ಮಾನವೀಯತೆ, ಪರಸ್ಪರ ಗೌರವ, ಸ್ವತಂತ್ರ ಬದುಕಿನ ಹಕ್ಕನ್ನು ಒಪ್ಪಿಕೊಳ್ಳುವುದು. ಒಪ್ಪಿಕೊಳ್ಳಲಾಗದಿದ್ದರೆ ಮೌನವಾಗಿದ್ದು ಬಿಡುವುದು. ಈ ಎರಡೂ ಘಟನೆಗಳು ಕೇವಲ ಎರಡು ಕುಟುಂಬಗಳ ದುರಂತವಷ್ಟೇ ಅಲ್ಲ, ನಮ್ಮ ಸಮಾಜದ ವೈಫಲ್ಯ. ಮನೆಯೊಂದರ ಮನಸ್ಸುಗಳು ಮುರಿದಿವೆ ಎಂದರೆ ಅದನ್ನು ಆಡಿಕೊಂಡು ತಿರುಗಾಡುವುದು ಮನುಷ್ಯತ್ವವಲ್ಲ. ಕಂಡವರ ಮನೆಯ ಸಮಸ್ಯೆಯನ್ನು ತಮ್ಮ ಬಾಯಿಗೆ ಆಹಾರವಾಗಿಸಿಕೊಂಡು ತಿರುಗಾಡುವುದು ಮನುಷ್ಯ ಎನಿಸಿಕೊಂಡವನ ಕಸುಬು ಆಗಬಾರದು. ಒಬ್ಬ ವ್ಯಕ್ತಿ ನೋವಲ್ಲಿದ್ದರೆ ಮತ್ತೆ ಮತ್ತೆ ಅದನ್ನು ನೆನಪಿಸಿ ಅವನನ್ನು ನೋಯಿಸುವುದು ಮನುಷ್ಯ ಎನಿಸಿಕೊಂಡ ಪ್ರಾಣಿಗಳು ಮಾಡುವ ದುಷ್ಟತನ. ಇನ್ನೊಬ್ಬರ ಬಗ್ಗೆ ಆಡಿಕೊಂಡು ತಿರುಗಾಡುವುದರ ಬದಲು ಆ ಮನೆಯ ಕಷ್ಟದಲ್ಲಿ ಭಾಗಿಯಾಗಿ ಸಮಸ್ಯೆಗಳನ್ನು ಸರಿಪಡಿಸಲು ಸಾಧ್ಯವಾ ಎಂದು ಯೋಚಿಸಬೇಕು, ಅದಾಗದಿದ್ದರೆ ಸುಮ್ಮನೆ ಕುಳಿತುಕೊಳ್ಳಿ.
ಅಷ್ಟಕ್ಕೂ ಸದಾ ಇನ್ನೊಬ್ಬರು ಏನನ್ನುತ್ತಾರೋ ಎಂದು ಎಷ್ಟೂಂತ ಮರ್ಯಾದೆಗಂಜಿ ಬದುಕುತ್ತೀರ? ಮರ್ಯಾದೆಗೆ ಹೆದರುತ್ತಲೇ ಇದ್ದರೆ ಈ ಸಮಾಜದಲ್ಲಿರುವ ನಿಕೃಷ್ಟ ಮನಸ್ಥಿತಿಗಳು ನಮ್ಮನ್ನು ಮರ್ಯಾದೆಯ ಹೆಸರಿನಲ್ಲಿ ಮಾನಸಿಕವಾಗಿ ಸಾಯಿಸುತ್ತಲೇ ಇರುತ್ತದೆ ಮತ್ತು ನಾವು ಜೀವನದುದ್ದಕ್ಕೂ ಮಾನಸಿಕವಾಗಿ ಸಾಯುತ್ತಲೇ ಜೀವನ ಸಾಗಿಸಬೇಕು. ಧೈರ್ಯದಿಂದ ಬದುಕಿದರೆ ಬದುಕೂ ನಿರಾತಂಕ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

.

Leave a Comment

Your email address will not be published. Required fields are marked *

error: Content is protected !!
Scroll to Top