ಕಡಬ : ತಂದೆ ತಾಯಿ ದುಡಿದ ಹಣದಲ್ಲಿ ಮಕ್ಕಳು ಶಿಕ್ಷಣ ಪಡೆಯುವುದು ಸಾಮಾನ್ಯ. ಆದರೆ ಇಲ್ಲೊಬ್ಬಳು ಯುವತಿ ಸ್ವಾವಲಂಬನೆಯ ಕನಸಿನೊಂದಿಗೆ ನರ್ಸಿಂಗ್ ಶಿಕ್ಷಣದ ಜತೆಗೆ ಜೇನು ಕೃಷಿಯಲ್ಲಿ ತೊಡಗಿಕೊಂಡು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.ಕಡಬ ತಾಲೂಕಿನ ರಂಜಿಲಾಡಿ ಗ್ರಾಮದ ಎಳುವಾಳೆ ದಿ| ಚಂದ್ರಶೇಖರ ಗೌಡ ಹಾಗೂ ಪ್ರೇಮಾ ದಂಪತಿಯ ಪುತ್ರಿ ದೀಕ್ಷಿತಾ ಜೇನು ಕೃಷಿಯಲ್ಲಿ ಖುಷಿಯನ್ನು ಕಂಡಿರುವ ಯುವತಿ. ಪುತ್ತೂರಿನ ಸಂಸ್ಥೆಯೊಂದರಲ್ಲಿ ದೀಕ್ಷಿತಾ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಪದವಿ ತರಗತಿಯಲ್ಲಿದ್ದಾಗ ಕೊರೊನಾ ಹಿನ್ನೆಲೆಯಲ್ಲಿ ಕಾಲೇಜಿಗೆ ಸಾಕಷ್ಟು ರಜೆ ಸಿಕ್ಕಿದ ಸಂದರ್ಭ ಅವರು ಆಡು ಸಾಕಣೆ ಮೂಲಕ ಸ್ವಾವಲಂಬನೆಗೆ ಮುನ್ನುಡಿ ಬರೆದಿದ್ದರು. ರೆಂಜಿಲಾಡಿ ಅರಣ್ಯದಂಚಿನ ಪ್ರದೇಶ ವಾಗಿರುವುದರಿಂದ ಕಾಡುಪ್ರಾಣಿಗಳ ಉಪಟಳವೂ ಹೆಚ್ಚಿರುವ ಹಿನ್ನಲೆಯಲ್ಲಿ ಆಡುಗಳನ್ನು ಮೇಯಲು ಬಿಡುವುದೇ ದೊಡ್ಡ ಸಮಸ್ಯೆಯಾಗಿ ಕಾಡಿತು. ಕೊನೆಗೆ ಅನಿವಾರ್ಯವಾಗಿ ಆಡು ಸಾಕಣೆಯನ್ನು ನಿಲ್ಲಿಸಿದರು.ಆಡುಗಳನ್ನು ಮಾರಾಟ ಮಾಡಿದ ಹಣದಲ್ಲಿ ಏನಾದರೂ ಮಾಡಬೇಕೆಂದು ಯೋಚಿಸಿದ ದೀಕ್ಷಿತಾ ಜೇನು ಕೃಷಿಯ ಬಗ್ಗೆ ಆಸಕ್ತಿ ತೋರಿದರು. ಮೊದಲಿಗೆ ಜೇನಿನ ಎರಡು ಕುಟುಂಬ (ಪೆಟ್ಟಿಗೆ) ಖರೀದಿಸಿದರು. ತಜ್ಞರಿಂದ, ಜೇನು ಕೃಷಿಕರಿಂದ ಪ್ರಾತ್ಯಕ್ಷಿಕೆ, ತರಬೇತಿ ಪಡೆದು ಕೃಷಿಯನ್ನು ವಿಸ್ತರಿಸಿದರು.ಪ್ರಸ್ತುತ 10 ಜೇನು ಪೆಟ್ಟಿಗೆಗಳಲ್ಲಿ ಜೇನು ಸಾಕಾಣೆ ಮಾಡುತ್ತಿದ್ದಾರೆ.ಜೇನು ತುಪ್ಪವನ್ನು ‘ಅಮೃತಾ ಶುದ್ಧ ಜೇನು ತುಪ್ಪ’ ಎಂಬ ಹೆಸರಿನಲ್ಲಿ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ.ಜೇನು ಕುಟುಂಬ ವಿಂಗಡನೆ ಮಾಡುವ ವೇಳೆ ಇನ್ನೂ ಹೆಚ್ಚಿನ ಪೆಟ್ಟಿಗೆಗಳಲ್ಲಿ ಜೇನು ಕುಟುಂಬ ಕೂರಿಸಿ ಜೇನು ಕುಟುಂಬ ಸಾಕಾಣೆ ಮಾಡಲು ಆಲೋಚಿಸಿದ್ದಾರೆ.ಆರಂಭದಲ್ಲಿ ಆಡು ಸಾಕುತ್ತಿದ್ದಾಗ, ಪ್ರಸ್ತುತ ಜೇನು ಸಾಕಣೆ ಸಂದರ್ಭದಲ್ಲೂ ತಾಯಿ, ಅಣ್ಣ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಜೇನು ಕೃಷಿ ಬಗ್ಗೆ ಕಾಲೇಜಿನ ಸ್ನೇಹಿತರೂ ಅವರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.ಮೊದಲಿಗೆ ಆಡು ಸಾಕಣೆ ಆರಂಭಿಸಿದೆ. ಪ್ರಸ್ತುತ ಜೇನು ಕೃಷಿ ಮಾಡುತ್ತಿದ್ದೇನೆ. ಆದಾಯ ಬರುತ್ತಿದ್ದು, ನನ್ನ ಶೈಕ್ಷಣಿಕ ಖರ್ಚಿಗೆ ಪ್ರಯೋಜನವಾಗುತ್ತಿದೆ.ಮನೆಮಂದಿ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ದೀಕ್ಷಿತಾ ಹೇಳುತ್ತಾರೆ.