ಮನೆಗಳಲ್ಲಿ ಸಾಕುವಂತಹ ದನ, ನಾಯಿ, ಮೇಕೆ, ಕುರಿ, ಬೆಕ್ಕು, ಹಂದಿ ಮೊದಲಾದ ಪ್ರಾಣಿಗಳನ್ನು ‘ಸಾಕು ಪ್ರಾಣಿಗಳು’ ಎಂದು ಕರೆಯುತ್ತೇವೆ.
ನಮ್ಮ ರಕ್ಷಣೆಗಾಗಿ ಹಾಗೂ ವ್ಯವಹಾರದ ಉದ್ದೇಶದಿಂದ ನಾವು ಇವುಗಳನ್ನು ಸಾಕುತ್ತೇವೆ. ಕೇವಲ ನಾಗರೀಕರ ನಡುವೆ ಮಾತ್ರವಲ್ಲದೆ ಸಾಕುಪ್ರಾಣಿಗಳಲ್ಲಿಯೂ ಲಿಂಗ ತಾರತಮ್ಯ ಮಾಡುವ ಏಕೈಕ ಜೀವಿ ಎಂದರೆ ಅದುವೇ ಮಾನವ. ಇತ್ತೀಚಿನಿಂದ ಅದು ಹೆಚ್ಚುತ್ತಲೇ ಹೋಗುತ್ತಿದೆ.
ಭಾರತೀಯರಾದ ನಾವು ಹಸುವನ್ನು ‘ಗೋಮಾತೆ’ ಎಂದು ಪೂಜಿಸುತ್ತೇವೆ. ಹಸುವೊಂದು ಹೆಣ್ಣು ಕರುವಿಗೆ ಜನ್ಮ ನೀಡಿದರೆ ಎಲ್ಲಿಲ್ಲದ ಸಂಭ್ರಮ. ಆದರೆ ಅದು ಗಂಡು ಕರುವಿಗೆ ಜನ್ಮವನ್ನಿತ್ತರೆ ಅದನ್ನು ಹೇಗಾದರೂ ಇಲ್ಲಿಂದ ಅಟ್ಟಿಸಬೇಕೆಂದು ಕೆಲವೊಂದಷ್ಟು ಜನ ಯೋಚಿಸುತ್ತಾರೆ . ಪ್ರತಿಯೊಂದು ದನ – ಕರುವಿನ ದೇಹದಲ್ಲಿ ಮುಕ್ಕೋಟಿ ದೇವತೆಗಳು ಇರುತ್ತಾರೆ ಎಂದು ನಾವು ನಂಬುತ್ತೇವೆ. ಹಸುವಾದರೆ ಹಾಲು ನೀಡುತ್ತದೆ. ಅದರಿಂದ ನಾವು ಆದಾಯಗಳಿಸಬಹುದು . ಆದರೆ ಈ ಎತ್ತಿನಿಂದ ಏನೂ ಪ್ರಯೋಜನವಿಲ್ಲ ಎಂಬ ಕೆಟ್ಟ ಯೋಚನೆಯೊಳಹೊಕ್ಕು ಮನುಷ್ಯನು ಅದನ್ನು ರಸ್ತೆ ಬದಿಯಲ್ಲೋ ಅಥವಾ ಊರಾಚೆಗೋ ಬಿಟ್ಟು ಬರುತ್ತಾನೆ.
ಹೀಗೊಂದು ಕಥೆ ಇದೆ, ಕೈಲಾಸದಲ್ಲಿ ದೇವಾನು – ದೇವತೆಗಳು ಪ್ರಾಣಿಗಳನ್ನು ಭೂಲೋಕದಲ್ಲಿ ಸೃಷ್ಟಿ ಮಾಡಿ ಎಲ್ಲಾ ಜೀವಿಗಳಿಗೂ ಒಂದೊಂದು ಹೆಸರನ್ನು ಇಟ್ಟರು. ಕೊನೆಯದಾಗಿ ಒಂದು ಪ್ರಾಣಿ ಉಳಿದಿತ್ತು . ಆ ಪ್ರಾಣಿಗೆ ಏನೆಂದು ಹೆಸರಿಡುವುದು ಎಂದು ಯೋಚಿಸುತ್ತಿದ್ದರು. ಕೊನೆಗೆ ಶ್ರೀಮನ್ನಾರಾಯಣ ಮತ್ತು ಜಗದೊಡೆಯನಾದ ಈಶ್ವರ ಇಬ್ಬರ ಹೆಸರಿನ ಮೊದಲ ಅಕ್ಷರವನ್ನು ಒಟ್ಟಿಗೆ ಸೇರಿಸಿ ಆ ಪ್ರಾಣಿಗೆ ‘ನಾಈ’ಎಂಬ ಹೆಸರು ಬಂದಿತೆಂದು ನನ್ನ ಅಮ್ಮ ಹೇಳಿದರು. ಆದರೆ ನಾಯಿಯನ್ನು ನಾವು ಯಾವ ರೀತಿಯಾಗಿ ಸಾಕುತ್ತಿದ್ದೇವೆ? ಜನ ನಾಯಿಯಲ್ಲೂ ಬೇಧ ಭಾವ ಮಾಡುತ್ತಾರೆ. ಗಂಡು ನಾಯಿಯನ್ನು ಸಾಕುತ್ತಾರೆ. ಆದರೆ ಹೆಣ್ಣು ನಾಯಿಯನ್ನು ದೂರ ತಳ್ಳುತ್ತಾರೆ. ಅದೇ ಹೆಣ್ಣು ನಾಯಿ ಜನ್ಮವನ್ನಿಟ್ಟಲ್ಲವೇ ಗಂಡು ನಾಯಿ ಹುಟ್ಟುವುದು? ಜನರಿಗೆ ಮಂಕು ಬುದ್ಧಿ ಕವಿದಿದೆ. ಹೆಣ್ಣು ನಾಯಿ ಇದ್ದರೆ ಅದು ಮರಿ ಇಡುತ್ತವೆ ಎಂದು ಯೋಚಿಸುವ ಜನರು, ಅದು ಮರಿ ಇಡದೇ ಹೋದಲ್ಲಿ ಗಂಡು ಮರಿಗಳಾದರೂ ಹೇಗೆ ಹುಟ್ಟುತ್ತವೆ ಎಂದು ಯೋಚಿಸುವುದೇ ಇಲ್ಲವೇನೋ ಎಂದನಿಸುತ್ತದೆ.ಅದೆಷ್ಟೋ ನಾಯಿ ಮರಿಗಳು ರಸ್ತೆ ಬದಿಯಲ್ಲಿ ಆಹಾರ ಹುಡುಕುತ್ತಾ ಹೋಗುತ್ತಿರುತ್ತವೆ. ನಾಯಿಗಳನ್ನು ಒಳಗೊಂಡಂತೆ ಅದೆಷ್ಟೋ ಪ್ರಾಣಿಗಳು ವಾಹನಗಳ ಅಡಿಗೆ ಸಿಲುಕಿ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿವೆ.
ಹೆತ್ತ ತಾಯಿಗೆ ತನ್ನ ಮಗುವನ್ನು ಕಸಿದು ಕೊಂಡರೆ ಅವಳಿಗೆ ಕರುಳು ಕಿವುಚಿದಂತಾಗುತ್ತದೆ. ಅದೇ ರೀತಿಯಲ್ಲಿ ಯಾವ ಪಾಪವನ್ನು ಮಾಡದ ಮೂಕ ಪ್ರಾಣಿಗಳಿಗೆ ತನ್ನ ಮರಿಗಳನ್ನು ಕಳೆದುಕೊಂಡರೆ ಹೇಗಾಗಬಹುದಲ್ಲವೇ? ಮನುಷ್ಯ ತನ್ನ ನೋವನ್ನು ಇನ್ನೊಬ್ಬರ ಬಳಿ ತೋಡಿಕೊಳ್ಳುತ್ತಾನೆ. ಆದರೆ ಪ್ರಾಣಿಗಳು ತನ್ನ ನೋವು, ಸಂಕಷ್ಟಗಳನ್ನು ಹೇಳುವುದಾದರು ಯಾರಲ್ಲಿ? ಒಬ್ಬ ವ್ಯಕ್ತಿಯ ಜೀವಕ್ಕೆ ನಾವು ಅದೆಷ್ಟು ಬೆಲೆ ಕಟ್ಟುತ್ತೇವೆ ಅಲ್ಲವೇ? ಅದೇ ಸಾಕು ಪ್ರಾಣಿಗಳ ಜೀವಕ್ಕೆ ಬೆಲೆ ಇಲ್ಲವೇ? ಮಾನವನಿಗೆ ಮನುಷ್ಯತ್ವ ಎಂಬುದಿಲ್ಲವೇ? ಎಲ್ಲವನ್ನು ಅರಿತ ಮಾನವನು ಈ ಸಾಕುಪ್ರಾಣಿಗಳ ನೋವು, ತೊಂದರೆಗಳು ಅವನಿಗೆ ತಿಳಿದಿಲ್ಲವೇ? ಅಥವಾ ತಿಳಿದೂ ತಿಳಿಯದವರಂತೆ ನಟಿಸುತ್ತಿದ್ದಾನೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನಮಗೆ ನಾವೇ ಕಂಡು ಕೊಳ್ಳಬೇಕು ವಿನಃ ಇನ್ನೊಬ್ಬರ ಬಳಿಯಿಂದಲ್ಲ.
ಯಾರೇ ಆದರೂ ಸರಿ ನಿಮಗೆ ಸಾಕು ಪ್ರಾಣಿಗಳನ್ನು ಸಾಕಲು ಸಾಧ್ಯವಾಗದಿದ್ದರೆ ಬೇರೆ ಯಾರಾದರೂ ಸಾಕುವವರಿದ್ದರೆ ಅವರಿಗೆ ನೀಡಿ ಅಥವಾ ಪ್ರಾಣಿಗಳನ್ನು ಸಾಕುವ ಶಾಲೆಗಳಿಗೆ ನೀಡಿ. ಅದನ್ನು ಬಿಟ್ಟು ದಯವಿಟ್ಟು ಎಲ್ಲೆಂದರಲ್ಲಿ ಬಿಟ್ಟು ಬರಬೇಡಿ
✍️ ಕೃತಿಕಾ. ಕಣಿಯಾರು
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ( ಸ್ವಾಯತ್ತ) ಮಹಾವಿದ್ಯಾಲಯ, ಪುತ್ತೂರು
o