ಜೀವನವೆಂಬುದು ಕಷ್ಟ ಸುಖಗಳ ಸಮ್ಮೀಲನ . ಜೀವನದಲ್ಲಿ ಕಷ್ಟವೇ ಇದ್ದರೆ ಆ ಜೀವನಕ್ಕೆ ಅರ್ಥವೇ ಇರದು.ಜೀವನ ಪೂರ್ತಿ ಸುಖವೇ ಇದ್ದರೆ ಅದು ಜೀವನ ಆಗುವುದಿಲ್ಲ. ಕಷ್ಟ ಸುಖ ಸಮ್ಮಿಶ್ರವಾಗಿದ್ದರೆ ಮಾತ್ರ ಆ ಜೀವನ ಹೆಚ್ಚು ಅರ್ಥ ಗರ್ಭಿತವಾಗಿರುತ್ತದೆ.
ಇಲ್ಲಿ ಒಬ್ಬರಿಗೆ ಒಂದೊಂದು ಚಿಂತೆ .ತಾಯಿಗೆ ಈ ತಿಂಗಳು ಪೂರ್ತಿ ಮನೆ ಹೇಗೆ ನಡೆಸುವವುದೆಂದು ಚಿಂತೆ ಎಂದಾದರೆ ,ತಂದೆಗೆ ವ್ಯವಹಾರದಲ್ಲಿ ಲಾಭ ನಷ್ಟದ ಚಿಂತೆ.ಇವರುಗಳ ಮಧ್ಯದಲ್ಲಿ ಮಕ್ಕಳದ್ದು ಇನ್ನೊಂದು ನಮೂನೆಯ ಚಿಂತೆ . ಬೆಳಗ್ಗೆ ಎದ್ದ ತಕ್ಷಣ ಶಾಲೆ ಅಥವಾ ಕಾಲೇಜುಗೆ ಹೋಗಬೇಕಲ್ಲ ಎಂಬ ಚಿಂತೆ. ಶಾಲೆ ಯಾದರೂ ಪರವಾಗಿಲ್ಲ ಆದರೆ ಕಾಲೇಜು ಅಂತೂ ಬಹಳ ದೊಡ್ಡ ಕಷ್ಟವೆನಿಸುವುದಿದೆ. ಕಾಲೇಜಿಗೆ ಹೋಗುವ ಯುವಕ ಯುವತಿಯರ ಗೋಳು ಕೇಳುವವರು ಯಾರು ಇಲ್ಲವೆ ಎಂದೆನಿಸುತ್ತದೆ. ಮನೆಯಿಂದ ಹೊರಡುವಾಗ ಅಮ್ಮನ ಬೈಗುಳ ಒಂದೆಡೆಯಾದರೆ ಕಾಲೇಜಿಗೆ ತಡವಾದರೆ ಉಪನ್ಯಾಸಕರ ಬೈಗಳು ಇನ್ನೊಂದೆಡೆ .ಈ ಇಬ್ಬರ ಮಧ್ಯದಲ್ಲಿ ಬಸ್ ಕಂಡಕ್ಟರ್ ಗಳದ್ದು ಇನ್ನೊಂದು ನಮೂನೆಯ ಡೊಂಬರಾಟ.ಅವರ ಕಥೆ ಕೇಳುವುದೇ ಬೇಡ. ಶಾಲೆ ಅಥವಾ ಕಾಲೇಜಿನ ವಿದ್ಯಾರ್ಥಿಗಳೆಂದರೆ ಅವರಿಗೆ ಲೆಕ್ಕವೇ ಇಲ್ಲ ಎನ್ನುವ ರೀತಿಯಲ್ಲಿ ಆಡುತ್ತಾರೆ. ಅವರ ಮುಂದೆ ಹೋಗಿ ಹಿಂದೆ ಬನ್ನಿ ಎಂಬ ಮಾತಿನಲ್ಲಿ ನಾವು ತಲುಪಬೇಕಾದ ಸ್ಥಳ ಬಂದದ್ದೇ ತಿಳಿಯುವುದಿಲ್ಲ .ಒಮ್ಮೊಮ್ಮೆ ಅನಿಸುವುದು ಮನೆಯಲ್ಲಿ ಅಪ್ಪ ಅಮ್ಮ ಕೂಡ ಇಷ್ಟೊಂದು ಬೈಯುತ್ತಿಲ್ಲ ಆದರೆ ಇವರು ಯಾರು ನಮಗೆ ಇಷ್ಟೊಂದು ಬೈಯುತ್ತಾರೆಂಬ ಆಲೋಚನೆ ಬಂದು ಬಿಡುತ್ತದೆ.ಗುರುತು ಪರಿಚಯ ಇಲ್ಲದ ಕಂಡಕ್ಟರ್ ಗಳು ಬೈಯುವುದೇನು ಇದೆ ,ಆದರೆ ಕೆಲವು ಬಾರಿ ನಮ್ಮ ಗ್ರಹಚಾರಕ್ಕೆ ಪ್ರಯಾಣಿಕರಲ್ಲಿಯೂ ಕಿರಿಕ್ ಮಾಡುವ ಆಸಾಮಿಗಳಿದ್ದಾರೆ. ಮನೆಯವರ ಮತ್ತು ಉಪನ್ಯಾಸಕರ ಬೈಗುಳದಿಂದ ಉಪಯೋಗವಿದೆ ಸರಿ. ಆದರೆ ಕಂಡಕ್ಟರ್ ಗಳು ಬೈಯುವುದು ಯಾವುದಕ್ಕೆ ಉಪಯೋಗವಾಗುತ್ತದೆ ಎಂದು ಮಾತ್ರ ನನಗೆ ತಿಳಿದಿಲ್ಲ
ಅದೇನೆ ಆದರೂ ಕೆಲವೊಮ್ಮೆ ಅನಿಸುವುದು ಇದೆ ಈ ಎಲ್ಲಾ ಬೈಗುಳಗಳು ನಮ್ಮನ್ನು ಜೀವನದಲ್ಲಿ ಸದೃಢವಾಗಿ ನಿಲ್ಲಲು ಸಹಕಾರಿ ಆಗುತ್ತದೆಯೆಂದು ಇಂತಹ ಚಿಕ್ಕಪುಟ್ಟ ಘಟನೆಗಳು ನಮ್ಮ ಜೀವನದ ನಡೆತೆಯ ಬದಲಾವಣೆಗೆ ಕಾರಣ ಆಗಬಹುದು .ನಮಗೆ ಒಂದು ರೀತಿಯ ಆತ್ಮವಿಶ್ವಾಸವನ್ನು ನೀಡಬಹುದು.
ಕಲಿಕೆಯನ್ನು ಮುಗಿಸಿ ಈ ಸಮಾಜಕ್ಕೆ ಕಾಲಿಟ್ಟಾಗ ವ್ರತ್ತಿ ಜೀವನದ ಹೊಸದೊಂದು ಲೋಕ ತೆರೆದುಕೊಳ್ಳುತ್ತದೆ.ಒಂದಷ್ಟು ಮಾತು ಬೈಗುಳದಿಂದ ಮುಕ್ತಿ ದೊರೆಯಬಹುದೆಂಬ ಆಶಾಭಾವನೆ ಇದೆ.
✍️ *ಶ್ರೀರಕ್ಷಾ* ಹಿರೇಬಂಡಾಡಿ
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು, ಪುತ್ತೂರು