ಸರಿಯಾದ ಹೆಣ್ಣೊದಗಿ ಗಂಡು ಸುಖವಾಗಿರಲಿ..

ಮದುವೆಯಾಗಲು ಗಂಡು ಮಕ್ಕಳಿಗೆ ಹೆಣ್ಣೇ ಸಿಗುತ್ತಿಲ್ಲ ಎಂಬುದು ಕಳೆದ ಕೆಲ ವರ್ಷಗಳಿಂದ ಗಂಡು ಮಕ್ಕಳ ಕೂಗು. ಬಹುಶಃ ಕೆ.ಎಸ್.‌ ನರಸಿಂಹ ಸ್ವಾಮಿಯವರು ಈಗಿರುತ್ತಿದ್ದರೆ ಹೀಗೊಂದು ಕವನ ಬರೆಯುತ್ತಿದ್ದರೇನೋ..
ಕೆ.ಎಸ್.ನರಸಿಂಹಸ್ವಾಮಿಯವರ ʼಮೈಸೂರು ಮಲ್ಲಿಗೆʼ ಕವನ ಸಂಕಲನದಲ್ಲಿ ʼಶಾನುಭೋಗರ ಮಗಳು ರತ್ನದಂತಹ ಹುಡುಗಿ..ʼಎಂಬ ಹಾಡೊಂದಿದೆ. ಈ ಹಾಡಿನಲ್ಲಿ ರತ್ನದಂತಹ ಹುಡುಗಿಯಾದ ಆಕೆಗೆ ʼಗಂಡು ಸಿಕ್ಕುವುದೊಂದು ಕಷ್ಟವಲ್ಲ; ಸರಿಯಾದ ಗಂಡೊದಗಿ ಹೆಣ್ಣು ಸುಖವಾಗಿರಲಿ, ತಡವಾದರೇನಂತೆ? ನಷ್ಟವಿಲ್ಲʼ ಎಂಬ ಸಾಲೊಂದಿದೆ. ಹೊನ್ನೂರಿನ ಕೇರಿ ಮಾತ್ರವಲ್ಲ ಇಡೀ ಊರಿಗೇ ಚೆಲುವೆಯಾದ ಶಾನುಭೋಗರ ಮಗಳು ಸೀತಾದೇವಿಯ ರೂಪ, ಗುಣಕ್ಕೆ ಮಾರು ಹೋಗಿ ಸಾಕಷ್ಟು ಮಂದಿ ಗಂಡುಗಳು ಆಕೆಯನ್ನು ನೋಡಲು ಬಂದರೂ ವಿವಿಧ ಕಾರಣಗಳಿಗಾಗಿ ಅವರನ್ನು ಮದುವೆಯಾಗಲು ಆಕೆ ನಿರಾಕರಿಸುತ್ತಾಳೆ. ಆಕೆಯ ನಿರಾಕರಣೆಯ ಕಾರಣವನ್ನು ನಿರೂಪಿಸುವ ಕವಿಗಳು ಕೊನೆಗೆ ʼಸರಿಯಾದ ಗಂಡೊದಗಿ ಹೆಣ್ಣು ಸುಖವಾಗಿರಲಿ ತಡವಾದರೇನಂತೆ ನಷ್ಟವಿಲ್ಲʼ ಎಂಬ ಸಾಲಿನೊಂದಿಗೆ ಕವಿತೆಯನ್ನು ಕೊನೆಗೊಳಿಸುತ್ತಾರೆ. ಬಹುಶಃ ಈ ಭಾವಗೀತೆಯನ್ನು ಇಂದಿನ ಕಾಲಕ್ಕೆ ಅನ್ವಯಿಸಬಹುದೇನೋ.
ಮದುವೆಯಾಗಲು ಹೆಣ್ಣೇ ಸಿಗುತ್ತಿಲ್ಲವೆಂಬುದು ಇಂದಿನ ಹಲವು ಗಂಡು ಮಕ್ಕಳ ಗೋಳು. ಮದುವೆ ದಿನವೇ ಗಂಡಿನ ಮುಖ ನೋಡುವ ಅನಿವಾರ್ಯತೆ ಅಜ್ಜಿಯಂದಿರದ್ದಾಗಿತ್ತು. ಮನೆಯವರು ತೋರಿಸಿದ ಗಂಡಿಗೇ ಕೊರಳೊಡ್ಡಬೇಕಾದ ಕಾಲಘಟ್ಟದಲ್ಲಿ ಅವರಿದ್ದರು. ಆದರೆ ಈಗ ಕಾಲ ಬದಲಾಗಿದೆ. ತನ್ನಿಷ್ಟವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಹೆಣ್ಣು ಮಕ್ಕಳಿಗಿದೆ. ಮದುವೆಯಾಗುವ ಗಂಡಿನ ಆಯ್ಕೆಯಲ್ಲಿಯೂ.
ಮದುವೆಯಾಗುವ ಗಂಡು ಪೇಟೆಯಲ್ಲಿರಬೇಕು, ಉತ್ತಮ ಕೆಲಸದಲ್ಲಿರಬೇಕು ಎಂದು ಹೆಣ್ಣು ಮಕ್ಕಳ ವಾದವಾದರೆ, ಅತ್ತ ಗಂಡು ಮಕ್ಕಳಿಗೆ ಕೆಲಸ, ರೂಪ ಏನೂ ಬೇಡ ಒಂದು ಹೆಣ್ಣು ಸಿಕ್ಕರೆ ಸಾಕಪ್ಪ ಎಂಬಂತಾಗಿದೆ. ಇದು ಎಲ್ಲಿವರೆಗೆ ಎಂದರೆ ಪೌರೋಹಿತ್ಯ, ಕೃಷಿ, ಊರಿನಲ್ಲೇ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಗಂಡು ಮಕ್ಕಳಿಗೆ ಮದುವೆ ಎಂಬುದು ಕನಸೇ ಆಗಿದೆ ಎನ್ನುವಷ್ಟು. ಬದಲಾಗಿರುವ ಹೆಣ್ಣು ಮಕ್ಕಳ ಆಂತರ್ಯದ ಅಗತ್ಯತೆಗಳು ಇದಕ್ಕೆ ಕಾರಣವೆಂದರೆ ತಪ್ಪಾಗದು.
ಮೊನ್ನೆ ಒಬ್ಬರು ಮಾತನಾಡಲು ಸಿಕ್ಕಿದರು. ಯಾವ ಜಾತಿಯಾದರೂ ಪರವಾಗಿಲ್ಲ ಒಂದು ಹುಡುಗಿ ಇದ್ದರೆ ಹೇಳಿ ಎಂದರು. ಜಾಸ್ತಿ ಓದಿರುವುದು ಬೇಡ, ಕೆಲಸ ಅಗತ್ಯವಿಲ್ಲ. ಮನೆ ನಡೆಸಿಕೊಂಡು ಹೋಗಲು ಶಕ್ತವಾಗಿದ್ದ ಸಾಕೆಂದರು. ಹೀಗೇ ಮಾತನಾಡುತ್ತಾ, ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗಿಯದ್ದೊಂದು ಪ್ರೊಪೋಸಲ್‌ ಬಂದಿತ್ತು, ಅವಳು ನಮ್ಮ ಸಂಬಂಧಿಗೆ ಗೊತ್ತಿರುವವಳೇ. ಪ್ರತಿದಿನ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗುವಾಗ ಲಿಪ್‌ಸ್ಟಿಕ್‌ ಇಲ್ಲದೆ ಹೋಗಲಾಗುವುದಿಲ್ಲ ಅಂತೆ.‌ ಅವಳ ತಿಂಗಳ ಸಂಬಳ ಅವಳ ಮೇಕಪ್‌ಗೇ ಸಾಕಾಗದುʼ ಎಂದರು. ಹುಡುಗಿ ದಿನಾ ಲಿಪ್‌ಸ್ಟಿಕ್ ಹಾಕಿದರೆ ಇವರಿಗೆಲ್ಲಾ ಏನು ತೊಂದರೆ? ಪ್ರತಿ ದಿನ ಮೇಕಪ್‌ ಮಾಡಿಕೊಂಡು ಹೋದರೂ ಕಡಿಮೆ ಅಂದರೂ ಒಮ್ಮೆ ಖರೀದಿಸಿದ ಮೇಕಪ್‌ ಕಿಟ್‌ ಕನಿಷ್ಟ ಆರು ತಿಂಗಳಿಗೆ ಸಾಕಾಗುತ್ತದೆ. ಅಂತಹದರಲ್ಲಿ ಅವಳ ತಿಂಗಳ ಸಂಬಳ ಅವಳ ಮೇಕಪ್‌ಗೇ ಸಾಕಾಗದು ಎಂದು ತೀರ್ಪು ನೀಡಿ ಬಿಡುವ ಅಧಿಕಾರ ಇವರಿಗೆ ನೀಡಿದವರಾರು? ಎಂದು ಕೇಳ ಬೇಕೆನಿಸಿತು.
ಹೆಣ್ಣು ಮೇಕಪ್‌ ಮಾಡಿದರೆ ತಪ್ಪು, ಹೇರ್‌ಸ್ಟೈಲ್‌ ಮಾಡಿದರೆ ತಪ್ಪು, ಚಂದದ ಬಟ್ಟೆ ಹಾಕಿದರೆ ಅವಳ ಸಂಬಳವೆಲ್ಲಾ ಅವಳ ಬಟ್ಟೆ, ಮೇಕಪ್‌ಗೇ ಸಾಕಾಗದು ಎಂದೇ ಖ್ಯಾತೆ ತೆಗೆಯುವ ಕೆಲವರಿಗೆ ಹೆಣ್ಣು ಸಿಗದಿದ್ದರೇ ಒಳ್ಳೆಯದು ಎಂದು ಮನಸ್ಸಲ್ಲೇ ಅಂದು ಕೊಳ್ಳುತ್ತೇನೆ. ಬಹುಶಃ ಹೆಣ್ಣು ಮಕ್ಕಳನ್ನು ನಮ್ಮ ಅಜ್ಜಿಯಂದಿರ, ಅವರ ಅಜ್ಜಿಯಂದಿರ…ಕಾಲಘಟ್ಟದಿಂದಲೇ ಹೀಗೆಯೇ ಬೆಳೆಸಿ, ಹೆಣ್ಣೆಂದರೆ ಹೀಗೇ ಇರಬೇಕೇಂಬ ಚೌಕಟ್ಟಿನೊಳಗೆ ಕೂಡಿ ಹಾಕಿ ಬೆಳೆಸಿದ ಪರಿಣಾಮವೇ ಇದು. ನಾವೀಗ 21ನೇ ಶತಮಾನದಲ್ಲಿದ್ದೇವೆ. ಜಗತ್ತು ಸಾಕಷ್ಟು ಮುಂದುವರಿದಿದೆ, ಜಗತ್ತಿನೊಂದಿಗೆ ನಾವೂ ಮುಂದುವರಿದಿದ್ದೇವೆ. ಪಾಶ್ಚಿಮಾತ್ಯ ಅಂಧಾನುಕರಣೆ ತಪ್ಪೇ ಆದರೂ, ಬದಲಾಗಿರುವ ಸಮಾಜದಲ್ಲಿ ಹಳೆಯ ಕಾಲದ್ದೇ ಬೇಕೆಂದು ಪಟ್ಟು ಹಿಡಿದು ಕುಳಿತರೆ ನಮ್ಮಷ್ಟು ದಡ್ಡರು ಬೇರಾರಿಲ್ಲ. ʼಹೆಣ್ಣೆಂದರೆ ಹೀಗೇ ಇರಬೇಕುʼ ಎಂಬ ಚೌಕಟ್ಟಿನಲ್ಲಿ ಕೂಡಿ ಹಾಕಲು ಹೊರಟರೆ ಆಕೆ ಪಂಜರದೊಳಗಿನ ಗಿಳಿ ನಾನಲ್ಲ ಎಂಬುದನ್ನು ತನ್ನಲ್ಲಿನ ಬದಲಾವಣೆಗಳ ಮೂಲಕ ಜಗತ್ತಿಗೆ ಸಾರಿ ಹೇಳುವ ಕಾಲವಿದು.
ಹೆಣ್ಣು ಭ್ರೂಣ ಹತ್ಯೆ ವ್ಯಾಪಕವಾಗಿ ನಡೆಯುತ್ತಿದ್ದದರಿಂದ ಅದಕ್ಕೆ ಕಡಿವಾಣ ಹಾಕಲು ಕಾನೂನೇ ಜಾರಿಗೊಳಿಸಬೇಕಾಗಿ ಬಂತು. ಜನ್ಮ ಕೊಟ್ಟ ತಾಯಿ ಹೆಣ್ಣು, ಮದುವೆಯಾಗಲು ಹೆಣ್ಣು ಬೇಕು. ಆದರೆ ಮಗಳಾಗಿ ಹೆಣ್ಣು ಬೇಡವೆಂದರೆ ಮುಂದೊಂದು ದಿನ ಗಂಡ್ಮಕ್ಕಳಿಗೆ ಮದುವೆಯಾಗಲು ಹೆಣ್ಣೇ ಸಿಗದು ಎಂಬ ಯೋಚನೆ ಅಂದು ಮನುಷ್ಯರಿಗೆ ಬರಲೇ ಇಲ್ಲವಲ್ಲ? ಅದರ ಪರಿಣಾಮ ಇಂದು ಅನುಭವಿಸುತ್ತಿರುವುದು. ಹೆಣ್ಣು ಮಕ್ಕಳಿಗೆ ಜಾಸ್ತಿ ಓದಿಸಿದ್ದೇ ಗಂಡು ಮಕ್ಕಳಿಗೆ ಹೆಣ್ಣು ಸಿಗದೇ ಇರಲು ಕಾರಣ ಎಂದು ಹಳ್ಳಿ ಭಾಗದ ಕೆಲವರು ಹೇಳುವುದನ್ನು ಕೇಳಿದ್ದೇನೆ. ಇಂತಹವರ ಮಾತುಗಳನ್ನು ಕೇಳಿದಾಗ ಒಳಗೊಳಗೇ ಸಿಟ್ಟು ಉಮ್ಮಳಿಸಿ ಬರುವುದಿದೆ. ಅವರರ್ಥದಲ್ಲಿ ಓದಿಸುವುದು ಮಹಾಪಾಪ, ಇದರಿಂದ ಹೆಣ್ಣು ಮಕ್ಕಳು ಪೇಟೆಯ ದಾರಿ ಹುಡುಕುತ್ತಿದ್ದಾರೆ ಎಂದು.
ಕೋವಿಡ್‌ ನಂತರದ ದಿನಗಳಲ್ಲಿ ಐಟಿ ಬಿಟಿ ಕಂಪೆನಿಗಳ ಉದ್ಯೋಗ ಬಿಟ್ಟು ಊರಿಗೆ ಬಂದು ಕೃಷಿ ಕಾಯಕದಲ್ಲಿ ತೊಡಗಿರುವ ಅದೆಷ್ಟೋ ಎಂಜಿನಿಯರಿಂಗ್‌, ಎಂಬಿಎ ಪದವೀಧರರನ್ನು ನೋಡಿದ್ದೇವೆ. ಪಟ್ಟಣದ ಬದುಕಿನ ಯಾತನೆಗಿಂತ ಕೃಷಿ ಎಷ್ಟೋ ಖುಷಿ ಕೊಡುತ್ತದೆ ಎಂದು ಕೃಷಿಯತ್ತ ಮುಖ ಮಾಡಿ ಲಕ್ಷ ಲಕ್ಷ ಸಂಪಾದಿಸಿದವರು ಆಗೊಮ್ಮೆ ಈಗೊಮ್ಮೆ ಸುದ್ದಿಯಾಗುತ್ತಿದ್ದಾರೆ. ಆದರೆ ಕೃಷಿಯನ್ನೇ ಬದುಕಾಗಿಸಿಕೊಂಡ ಗಂಡು ಮಕ್ಕಳತ್ತ ಹೆಣ್ಣು ಮಕ್ಕಳು ತಿರುಗಿಯೂ ನೋಡುತ್ತಿಲ್ಲ ಎಂಬುದು ವಿಪರ್ಯಾಸ. ಬಹುಶಃ ಕೃಷಿಯಲ್ಲಿ ತೊಡಗಿರುವ, ಊರಲ್ಲೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿರುವ ಬಹಳಷ್ಟು ಗಂಡು ಮಕ್ಕಳ ನೋವಿದು. ಹಳ್ಳಿ ಬದುಕಿಗಿಂತ ಪೇಟೆ ಬದುಕು ಹೆಣ್ಣು ಮಕ್ಕಳಿಗೆ ಇಷ್ಟವಾಗುತ್ತಿದೆ ನಿಜ. ಯಾಕೆಂದರೆ ಬದಲಾಗಿರುವ ಸಾಮಾಜಿಕ ವ್ಯವಸ್ಥೆ. ಗಂಡು ನೋಡಲು ಎಷ್ಟೇ ರೂಪವಂತನಾಗಿದ್ದರೂ, ಎಕರೆಗಟ್ಟಲೆ ಆಸ್ತಿಪಾಸ್ತಿ ಇದ್ದರೂ, ಆತ ಮನೆಯಲ್ಲೇ ಇದ್ದಾನೆ ಎಂಬುದೇ ಹೆಣ್ಣು ಮಕ್ಕಳಿಗೆ ಮದುವೆ ತಿರಸ್ಕರಿಸಲು ಕಾರಣವಾಗುತ್ತಿದೆ.
ಹಿಂದಿನ ಕಾಲದಲ್ಲಿ ಗಂಡಿನ ಮನೆಯವರು ಹೆಣ್ಣು ನೋಡಲು ಹೋಗುವಾಗ ನಿನಗೆ ಅಡುಗೆ ಮಾಡಲು ಬರುತ್ತದೆಯೋ, ಬಟ್ಟೆ ಒಗೆಯಲು ಬರುತ್ತದೆಯೋ, ಹಾಡಲು ಬರುತ್ತದೆಯೋ ಎಂದು ಇಂಟರ್‌ವ್ಯೂನಲ್ಲಿ ಪ್ರಶ್ನೆ ಕೇಳಿದಂತೆ ಕೇಳುತ್ತಿದ್ದರಂತೆ. ಆಗೆಲ್ಲ ಮುಂದೊಂದು ದಿನ ನಮಗೂ ಇಂತಹ ಪ್ರಶ್ನೆಗಳು ತೂರಿ ಬರುವ ಕಾಲ ಬರುತ್ತದೆ ಎಂಬುದನ್ನು ಅವರು ಕನಸಿನಲ್ಲಿಯೂ ಯೋಚಿಸಿರಲಿಕ್ಕಿಲ್ಲ ಅಲ್ಲವೇ? ಇದನ್ನೆಲ್ಲ ಇಲ್ಲಿ ಯಾಕೆ ಹೇಳುತ್ತಿದ್ದೇನೆಂದರೆ ಹೆಣ್ಣು ಮಕ್ಕಳನ್ನು ಪರಿಧಿಯೊಳಗೇ ಬದುಕಬೇಕೆಂಬುದನ್ನು ರೂಢಿಸಿಕೊಂಡ ಪರಿಣಾಮ ಈಗಿನ ಕಾಲಘಟ್ಟದಲ್ಲಿ ಅವರುಗಳೂ ಅನುಭವಿಸುತ್ತಿದ್ದಾರೆಂಬುದನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನವಷ್ಟೇ.
ಪ್ರತಿ ಮನುಷ್ಯನಿಗೂ ತಾನು ಹೀಗೆಯೇ ಇರಬೇಕೆಂಬ ಆಸೆಗಳಿರುತ್ತವೆ. ಆ ಆಸೆ ಹೆಣ್ಣು ಮಕ್ಕಳಿಗೂ ಇರುತ್ತದೆ. ಆದರೆ ಮದುವೆ ವಿಚಾರಕ್ಕೆ ಬಂದಾಗ ಆಸ್ತಿ, ಅಂತಸ್ತು, ಹಣ, ಒಡವೆ, ರೂಪವೇ ಮುಖ್ಯ ಎಂದು ನೋಡುವವರೆಲ್ಲರೂ ಮದುವೆ ಎಂದರೆ ಹೆಣ್ಣು ಮತ್ತು ಗಂಡು ನಡುವಿನ ಕೂಡಿ ಬಾಳುವ ಒಲವಿನ ಸೇತುವೆ ಎಂದು ಅರಿಯುವ ದಿನಗಳು ಬರಲಿ. ʼಕೊಡಲು, ಕೊಳಲು ಒಲವು ಬಿಟ್ಟು ಬೇರೆ ಉಂಟೇ ಬಾಳಲಿʼ ಎಂಬ ಕವಿವಾಣಿಯಂತೆ ಬದುಕುವ ದಿನಗಳು ಬರಲಿ. ಆ ಮೂಲಕ ಗಂಡು ಮಕ್ಕಳ ಬದುಕು ಹಸನಾಗಲಿ. ರತ್ನದಂತಹ ಗಂಡುಗಳಿಗೆ ʼಸರಿಯಾದ ಹೆಣ್ಣೊದಗಿ, ಗಂಡು ಸುಖವಾಗಿರಲಿʼ ಎಂದಷ್ಟೇ ಹಾರೈಸಬಹುದೇನೋ.
✍️ಧನ್ಯಾ ಬಾಳೆಕಜೆ

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top