“ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸೇಡಿನ ರಾಜಕೀಯ, ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳುವ ಆಡಳಿತ ವ್ಯವಸ್ಥೆ, ಮೂಲಭೂತ ಸೌಲಭ್ಯಗಳಿಂದ ನಿರಂತರವಾಗಿ ವಂಚಿತರಾಗಿ ಅದರಿಂದ ಬೇಸತ್ತಿರುವ ಸುಳ್ಯ ಕ್ಷೇತ್ರದ ಮತದಾರರು ಈ ಸಲ ಹೊಸ ರಾಜಕೀಯ ಪರ್ಯಾಯವನ್ನು ಬೆಂಬಲಿಸಲಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನರವರು ಸುಶಿಕ್ಷಿತ, ಸಮರ್ಥ ಅಭ್ಯರ್ಥಿ. ಅವರಿಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿದೆ, ಅದನ್ನು ಪರಿಹರಿಸುವ ಚಿಂತನೆ ಮತ್ತು ಯೋಜನೆಯಿದೆ, ಅದನ್ನು ಸರ್ಕಾರಿ ಆಡಳಿತದ ಮಟ್ಟದಲ್ಲಿ ಸಮರ್ಥವಾಗಿ ಮಂಡಿಸಿ ಅನುಷ್ಠಾನಗೊಳಿಸುವ ಸಾಮರ್ಥ್ಯವಿದೆ. ಈ ಬಾರಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶ್ರೀಮತಿ ಸುಮನ ಬೆಳ್ಳಾರ್ಕರ್ ರವರ ವಿಜಯ ಶತಸಿದ್ಧ, ಆ ಮೂಲಕ ಕ್ಷೇತ್ರದ ಅಭಿವೃದ್ಧಿ ಪರ್ವಕ್ಕೆ ನಾಂದಿಯಾಗಲಿದೆ” ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಶ್ರೀ ಅಶೋಕ್ ಎಡಮಲೆ ಹೇಳಿದರು.
ಗುತ್ತಿಗಾರಿನಲ್ಲಿ ನಡೆದ ಆಮ್ ಆದ್ಮಿ ಪಕ್ಷದ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪಕ್ಷದ ಅಭ್ಯರ್ಥಿ ಶ್ರೀಮತಿ ಸುಮನ ಬೆಳ್ಳಾರ್ಕರ್ ಮಾತನಾಡಿ, “ಕ್ಷೇತ್ರದ ಯಾವುದೇ ಅಭಿವೃದ್ಧಿ ಕಾಣದೆ 25 ವರ್ಷಗಳ ಹಿಂದಕ್ಕೆ ಸರಿದಿದೆ. ಮೂಲಭೂತ ನೌಕಾರ್ಯಗಳು ಅಭಿವುದ್ಧಿ ಕಾಣದೆ ಜನ ಸಾಮಾನ್ಯರು ಕಷ್ಟ ಅನುಭವಿಸುತ್ತಾ ಇದ್ದಾರೆ. ಶಿಕ್ಷಣ, ಆರೋಗ್ಯದ ಕಡೆ ಗಮನವೇ ಇಲ್ಲದೆ ಹಲವಾರು ಸರ್ಕಾರಿ ಶಾಲೆ ಕಾಲೇಜು ಕಟ್ಟಡಗಳು ಶಿಥಿಲ ಹೊಂದಿದೆ, ಅಧ್ಯಾಪಕರು ಉಪನ್ಯಾಸಕರ ಕೊರತೆ ಇದೆ. ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳ ಮತ್ತು ಸರಿಯಾದ ಟೆಸ್ಟ್, ಚಿಕಿತ್ಸೆ ಕೊರತೆಯಿಂದಾಗಿ ಜನಸಾಮಾನ್ಯರು ಸಾವಿರಾರು ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಪಡೆಯು ಸ್ಥಿತಿ ಇದೆ. ಹಲವು ದಶಕಗಳಿಂದ ಮನೆಯ ಭೂ ಆಧಾರ ಇಲ್ಲದೆ ಜನ ಕಂಗೆಟ್ಟಿದ್ದಾರೆ. ಒಟ್ಟಿನಲ್ಲಿ ಸಮಸ್ಯೆಯ ಆಗರವಾಗಿರುವ ಕ್ಷೇತ್ರಕ್ಕೆ ಸಮರ್ಥ ಜನಪ್ರಯಿನಿಧಿಯ ಅಗತ್ಯವಿದೆ. ಅದನ್ನು ಪೂರೈಸಲು ನನ್ನಿಂದ ಸಾಧ್ಯ, ಆದ್ದರಿಂದ ನನಗೆ ಮತ ನೀಡಿ ಗೆಲ್ಲಿಸಬೇಕು” ಎಂದು ವಿನಂತಿಸಿದರು. ಸಭೆಯಲ್ಲಿ ಆಪ್ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಪುಚ್ಚಪ್ಪಾಡಿ, ದೀಪಕ್ ಶೆನೈ ಪಿ ಹಳೆಗೇಟು, ಗಣೇಶ್ ಪ್ರಸಾದ್ ಕಂದಡ್ಕ, ಮುಖಂಡರಾದ ರಾಮಕೃಷ್ಣ ಬೀರಮಂಗಳ, ಗುರುಪ್ರಸಾದ್ ಮೇರ್ಕಜೆ, ರಶೀದ್ ಜಟ್ಟಿಪ್ಪಲ್ಲ, ಕಲಂದರ್ ಎಲಿಮಲೆ, ಮುಂತಾದವರು ಭಾಗವಹಿಸಿದ್ದರು.