ಅಡ್ಕಾರ್ : ಹಿಂದುತ್ವವೇ ನನಗೆ ಮೂಲ ಹಿಂದುತ್ವಕ್ಕಾಗಿ, ಹಿಂದೂ ಸಮಾಜದ ಉಳಿವಿಗಾಗಿ ಯಾವ ತ್ಯಾಗಕ್ಕೂ ನಾನು ಸಿದ್ಧ ಎಂದು ಪುತ್ತೂರಿನ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.ಸುಳ್ಯದ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಅಂಗವಾಗಿ ಕಾರ್ತಿಕೇಯ ಸಭಾಭವನದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.
ಹಿಂದೂ ಸಮಾಜವನ್ನು ಉಳಿಸುವುದು:
ದೊಡ್ಡ ಸವಾಲು. ಧಾರ್ಮಿಕ ಕಾರ್ಯಕ್ರಮದ ಮೂಲಕ ಹಿಂದೂ ಶಕ್ತಿ ಒಗ್ಗೂಡಿಸಲು ಸಾಧ್ಯ. ಆ ಮೂಲಕ ಹಿಂದೂ ಸಮಾಜಕ್ಕೆ ಶಕ್ತಿ ತುಂಬಬೇಕು ಎಂದು ಅವರು ಹೇಳಿದರು.ಭಾರತ ವಿಶ್ವ ವಂಧ್ಯ ಆಗಬೇಕು. ನಮ್ಮ ಸಂಸ್ಕೃತಿಯನ್ನು ಪೋಷಿಸುವಂತಾಗಬೇಕು. ಅದಕ್ಕಾಗಿ ಯುವಶಕ್ತಿ ಒಂದಾಗಿ ದೇಶ ಕಟ್ಟುವ ಕೆಲಸ ಆಗಬೇಕು. ಧರ್ಮವನ್ನು, ಸಂಘಟನೆಯನ್ನು ಉಳಿಸಲು ಹೋರಾಟ ಮಾಡಿದವರು ನಮಗೆ ಆದರ್ಶ ಆಗಬೇಕು ಎಂದ ಅವರು ಪಕ್ಷದಲ್ಲಿ, ಸಂಘಟನೆಯಲ್ಲಿ ಸರ್ವಾಧಿಕಾರಿ ಧೋರಣೆ ತೊಲಗಬೇಕು. ಸಾಮಾನ್ಯ ಕಾರ್ಯಕರ್ತನಿಗೆ ಗೌರವ ಸಿಗಬೇಕು ಎಂದರು. ಸಾಮಾನ್ಯ ಕಾರ್ಯಕರ್ತನಿಗೆ ಅನ್ಯಾಯ ಆದಾಗ ಅದರ ವಿರುದ್ಧ ಹೋರಾಟದ ಭಾಗವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕಾಗಿ ಬಂತು. ಆ ಸಂದರ್ಭದಲ್ಲಿ ಸುಳ್ಯದ ಯುವಕರು ಶಕ್ತಿ ತುಂಬಿದ್ದಾರೆ ಎಂದರು.
ಹಠ ಬಿಡದಿದ್ದರೆ ಪಕ್ಷಗಳಿಗೆ ಉಳಿಗಾಲ ಇಲ್ಲ- ಎನ್.ಎ ರಾಮಚಂದ್ರ:
ಯುವಕರಿಗೆ ಅವಕಾಶ ನೀಡದಿದ್ದರೆ, ಹಠ ಬಿಡದಿದ್ದರೆ ಯಾವುದೇ ಪಕ್ಷ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದು ಮುಖ್ಯ ಅತಿಥಿಯಾಗಿದ್ದ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ಹೇಳಿದರು. ಅರುಣ್ ಕುಮಾರ್ ಪುತ್ತಿಲರಂತವರು ಎದ್ದು ನಿಂತರೆ ಯಾವುದೇ ಪಕ್ಷ ಉಳಿಯಲು ಸಾಧ್ಯವಿಲ್ಲ. ಆದುದರಿಂದ ಅರುಣ್ ಪುತ್ತಿಲ ಅಂತವರಿಗೆ ತಮ್ಮ ಹಠವನ್ನು ಬಿಟ್ಟು ಪಕ್ಷಗಳು ಅವಕಾಶ ನೀಡಬೇಕು. ಎಂದರು. ಅವಕಾಶ ನೀಡುತ್ತಿದ್ದರೆ ಪುತ್ತಿಲ ಇಂದು ಶಾಸಕರಾಗಿ ಇರುತ್ತಿದ್ದರು. ನೀವು ಮುಂದುವರಿಯಿರಿ ನಿಮ್ಮ ಹಿಂದೆ ನಾವೆಲ್ಲರೂ ಇದ್ದೇವೆ ಎಂದು ಅವರು ಹೇಳಿದರು. ನಾನು ರಾಜಕೀಯ ಸ್ವಲ್ಪ ಕಡಿಮೆ ಮಾಡಿದ್ದೇನೆ. ರಾಜಕೀಯದ ಜೊತೆ ವಿರೋಧದಿಂದ ಅಲ್ಲ. ಆದರೆ ನಾವು ನೇರ ಮಾತನಾಡುವ ಕಾರಣ ಕೆಲವರು ನಮ್ಮನ್ನು ವಿರೋಧಿಸುತ್ತಾರೆ ಎಂದರು. ಆದರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಸುಳ್ಯದಲ್ಲಿ ಶಾಸಕರನ್ನು ಗೆಲ್ಲಿಸಿದ್ದೇವೆ ಎಂದರು.
ಭಗವಾನ್ ಕನ್‌ಸ್ಟ್ರಕ್ಷನ್‌ನ ಮಾಲಕ ಕೆ.ಎಸ್.ಗೋಪಾಲಕೃಷ್ಣ ಬೋರ್ಕರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮಂಡೆಕೋಲು ಶ್ರೀ ಮಹಾವಿಷ್ಣು ದೇವಸ್ಥಾನದ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಕೃಷಿಕರಾದ ಹರೀಶ್ ರಾವ್ ಹೆಬ್ಬಾರ್ ಮುಖ್ಯ ಅತಿಥಿಗಳಾಗಿದ್ದರು.ಸಮಾರಂಭದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರನ್ನು ಸನ್ಮಾನಿಸಲಾಯಿತು.ದಿನೇಶ್. ಕೆ ಅಡ್ಕಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮೀಶ ಅಡ್ಕಾರ್ ಪ್ರಾರ್ಥನೆ ಹಾಡಿದರು. ರವಿ ಪದವು ವಂದಿಸಿದರು. ವಿಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.
ಸತ್ಯನಾರಾಯಣ ಪೂಜೆ:
ಸಮಾರಂಭಕ್ಕೆ ಮುನ್ನ
ಸಾರ್ವಜನಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಸಾವಿರಾರು ಮಂದಿ ಭಾಗವಹಿಸಿದ್ದರು.