ಪುತ್ತೂರು: ಯುವತಿಯೋರ್ವಳು ಹೆರಿಗೆ ಸಂದರ್ಭದಲ್ಲಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ಜೂ. 20ರ ರಾತ್ರಿ ನಡೆದಿದೆ.ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ಗ್ರಾಮದ ಮುರ ಕಾಲೋನಿ ನಿವಾಸಿ, ಬಾಲಕೃಷ್ಣ ಗೌಡ ಎಂಬವರ ಪತ್ನಿ, ಹಿರೇಬಂಡಾಡಿ ಗ್ರಾಮದ ಆಶಾ ಕಾರ್ಯಕರ್ತೆ ಭವ್ಯ (28) ಮೃತಳು. ಇದೀಗ ಅವರ ಹಸುಗೂಸು ಮೂರು ದಿನದ ಬಳಿಕ ಗುರುವಾರ ಮುಂಜಾನೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.ಭವ್ಯರವರು ತನ್ನ 3ನೇ ಹೆರಿಗೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಮಂಗಳವಾರ ರಾತ್ರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಹೆರಿಗೆಯಾಗುತ್ತಲೇ ರಕ್ತಸ್ರಾವ ಉಂಟಾಗಿದ್ದು, ಕೂಡಲೇ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆತರಲಾಯಿತು.ಆದರೆ ಅವರು ದಾರಿ ಮಧ್ಯದಲ್ಲಿಯೇ ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು. ಜನಿಸಿದ ಮಗುವನ್ನು ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮುಂಜಾನೆ ಮಗುವೂ ಮೃತಪಟ್ಟಿದೆ ಎನ್ನಲಾಗಿದೆ. ಭವ್ಯ ಅವರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.