ರಾಜ್ಯ ಸರಕಾರದ ವಿರುದ್ಧ ವ್ಯಾಪಕ ಖಂಡನೆ
500 ಕೋಟಿಗೂ ಅಧಿಕ ಬೇನಾಮಿ ಆಸ್ತಿ ಸಂಪಾದಿಸಿದ ಆರೋಪ ಹೊತ್ತಿರುವ ಬೆಂಗಳೂರಿನ ಕೆಆರ್ ಪುರ ತಹಶೀಲ್ದಾರ್ ಗೆ ಅಜಿತ್ ಕುಮಾರ್ ರೈ ಅವರನ್ನು ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ಗ್ರೇಡ್ -2 ತಹಶೀಲ್ದಾರ್ ಹುದ್ದೆಗೆ ಸರ್ಕಾರ ನೇಮಕ ಮಾಡಿದ್ದು, ಸರ್ಕಾರದ ಈ ನಡೆಗೆ ಆಕ್ರೋಶ ವ್ಯಕ್ತವಾಗಿದೆ.ಆದಾಯಕ್ಕಿಂತ ಭಾರಿ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಅಜಿತ್ ರೈ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ. ಸಿರವಾರದಲ್ಲಿ ಗ್ರೇಡ್ 2 ತಹಶೀಲ್ದಾರ್ ಆಗಿದ್ದ ಪರಶುರಾಮ 500 ರೂಪಾಯಿ ಲಂಚ ಸ್ವೀಕಾರ ಆರೋಪದಡಿ ಲೋಕಾಯುಕ್ತ ದಾಳಿಗೆ ಸಿಲುಕಿ ಸೇವೆಯಿಂದ ಅಮಾನತುಗೊಂಡಿದ್ದಾರೆ.ಅವರ ಸ್ಥಾನಕ್ಕೆ ಅಜಿತ್ ರೈ ಅವರಿಗೆ ಹಿಂಬಡ್ತಿ ನೀಡಿ ಸರ್ಕಾರ ವರ್ಗಾವಣೆ ಮಾಡಿದೆ. ಹಿಂದುಳಿದ ರಾಯಚೂರು ಜಿಲ್ಲೆಯ ಸಿರಿವಾರಕ್ಕೆ ಭ್ರಷ್ಟಾಚಾರ ಆರೋಪ ಹೊತ್ತಿರುವ ಅಜಿತ್ ರೈ ಅವರನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ. ಅವರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಭಾರೀ ಒತ್ತಾಯ ಕೇಳಿ ಬರುತ್ತಿದೆ.