ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ದ. ಕ. ಜಿಲ್ಲೆ-02, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ದ.ಕ ಜಿಲ್ಲೆ ಇದರ ವತಿಯಿಂದ ಗಾಂಧಿಸ್ಮೃತಿ, ಜನಜಾಗೃತಿ ಜಾಥಾ ಮತ್ತು ಸಮಾವೇಶ ಅ.3 ರಂದು ಸುಳ್ಯದ ಅಮರಶ್ರೀಭಾಗ್ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಲಿದೆ ಎಂದು ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ .ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಬೃಹತ್ ಜನಜಾಗೃತಿ ಸಮಾವೇಶ ನಡೆಯಲಿದೆ.
ಅದಕ್ಕೀಂತ ಮುನ್ನ ಸುಳ್ಯ ಜ್ಯೋತಿ ವೃತ್ತದಿಂದ ಅಮರಶ್ರೀ ಭಾಗ್ ತನಕ ಬೃಹತ್ ಜನಜಾಗೃತಿ ಜಾಥಾ ನಡೆಯಲಿದೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸುವರು. ಶ್ರೀ ಮಹಾಲಕ್ಷ್ಮಿ ಕ್ಷೇತ್ರ ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚಿನ ಧರ್ಮಗುರು ಫಾ. ವಿಕ್ಟರ್ ಡಿಸೋಜ ಶುಭ ಸಂದೇಶ ನೀಡಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎಲ್.ಹೆಚ್.ಮಂಜುನಾಥ್ ಆಶಯ ಭಾಷಣ ಮಾಡಲಿದ್ದಾರೆ. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧಗಯ ರಾಜಣ್ಣಮೂ. ಕೊರವಿ ಸಾಧಕರನ್ನು ಸನ್ಮಾನಿಸುವರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಶಂಕರಪ್ಪ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಕೆ.ವಿ ರೇಣುಕಾ ಪ್ರಸಾದ್, ಹುಬ್ಬಳ್ಳಿಯ ನೆಹರು ಆರ್ಟ್ಸ್ ಸೈನ್ಸ್ ಕಾಮರ್ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊಫೆಸರ್ ಯೂಸುಫ್ ಪೈಚಾರು, ಮುಂಬೈಯ ಉದ್ಯಮಿ ಆರ್ ಬಿ ಹೆಬ್ಬಳ್ಳಿ, ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ. ಹೆಚ್. ಸುಧಾಕರ ಭಾಗವಹಿಸಲಿದ್ದಾರೆ. ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಎನ್.ಎ.ರಾಮಚಂದ್ರ, ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಲೋಕನಾಥ್ ಅಮೆಚೂರು,ಸುಳ್ಯ ಕೇಂದ್ರ ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಉಡುಪಿ ಕರಾವಳಿ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ, ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಯಸ್, ಉಪಸ್ಥಿತಿರಿರುವರು ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದ.ಕ.ಜಿಲ್ಲೆ 02ರ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ ಧರ್ಮಾಧಿಕಾರಿಯವರ ಕಲ್ಪನೆಯಲ್ಲಿ ದುಶ್ಚಟ ಮುಕ್ತ ಸಮಾಜದ ನಿರ್ಮಾಣಕ್ಕೆ ಪಣತೊಟ್ಟು ಗಾಂಧೀಜಿಯವರ ಕನಸ್ಸಿಗೆ ಪೂರಕವಾಗಿ ವ್ಯಸನ ಮುಕ್ತ ಸಮಾಜದ ಜಾಗೃತಿಗಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮುಖಾಂತರ ಮದ್ಯವರ್ಜನ ಶಿಬಿರಗಳನ್ನು ನಡೆಸಿ ಸುಮಾರು 1.5 ಲಕ್ಷ ವ್ಯಸನಿಗಳ ಮನಪರಿವರ್ತನೆ ಮಾಡಲಾಗಿದೆ. 1723 ಮದ್ಯವರ್ಜನ ಶಿಬಿರ ನಡೆಸಲಾಗಿದೆ. ರಾಜ್ಯಾದ್ಯಂತ 108 ಕಾರ್ಯಕ್ರಮ ಆಯೋಜನೆಗೆ ಪೂರ್ವ ತಯಾರಿ ಮಾಡಲಾಗಿದೆ. ಅ.3 ರಂದು ನಡೆಯುವ ಸಮಾವೇಶದಲ್ಲಿ ಜಿಲ್ಲೆಯ 6 ತಾಲೂಕಿನ ಸದಸ್ಯರು ಪಾಲ್ಗೊಳ್ಳಲಿದ್ದಾರೆ.ಸಮಾವೇಶದ ಜಾಥಾವು ಬೆಳಗ್ಗೆ ಗಂಟೆ 9.30 ರಿಂದ ಸುಳ್ಯದ ಜ್ಯೋತಿ ವೃತ್ತದಿಂದ ಪ್ರಾರಂಭಗೊಂಡು ಪ್ರಧಾನ ರಸ್ತೆಯ ಮೂಲಕ ಸಭಾಭವನದ ತನಕ ಸಾಗಿ ಬರಲಿದೆ. ಜಾಥಾದಲ್ಲಿ ತಾಲೂಕಿನ ಭಜನಾ ತಂಡಗಳು, ನವಜೀವನ ಸಮಿತಿಯ ಸದಸ್ಯರು ಹಾಗೂ ಜಿಲ್ಲೆಯ ಎಲ್ಲಾ ತಾಲೂಕಿನ ಜನಜಾಗೃತಿ ಸಮಿತಿಯ ಸದಸ್ಯರು ಹಾಗೂ ಯೋಜನೆಯ ಸಂಘದ ಸದಸ್ಯರು ಒಟ್ಟು ಸೇರಿ ಸುಮಾರು 5-7 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದರು.
ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಲೋಕನಾಥ್ ಅಮೆಚೂರ್ ಮಾತನಾಡಿ ‘ವ್ಯಸನ ಮುಕ್ತ ರನ್ನು ಗುರುತಿಸಿ ಜಾಗೃತಿ ಅಣ್ಣ, ಜಾಗೃತಿ ಮಿತ್ರ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕ ಆಪದ್ಭಾಂದವರಿಗೆ ಶೌರ್ಯ ಶ್ರೇಷ್ಠ ಸಾಧಕ ಪ್ರಶಸ್ತಿ ನೀಡಲಾಗುವುದು. ನವಜೀವನ ಸಾಧಕ ಪ್ರಶಸ್ತಿಯನ್ನು ವಿತರಣೆಯನ್ನು ಧರ್ಮಾಧಿಕಾರಿಯವರು ನೆರವೇರಿಸಲಿದ್ದಾರೆ ಎಂದು ಹೇಳಿದರು.
ಜನಜಾಗೃತಿ ವೇದಿಕೆಯ ಮಾಜಿ ಜಿಲ್ಲಾಧ್ಯಕ್ಷ ಎನ್.ಎ. ರಾಮಚಂದ್ರ ಮಾತನಾಡಿ ಅಡಿಕೆ ಬೆಳೆಗಾರರ ಹಳದಿ ರೋಗ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸಭಾ ಸದಸ್ಯರಾಗಿರುವ ಡಾ.ವೀರೇಂದ್ರ ಹೆಗ್ಗಡೆಯವರಿಗೆ ಸಮಾವೇಶದಲ್ಲಿ ಮನವಿ ನೀಡಲಾಗುವುದು ಎಂದರು.
ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾಗೇಶ್ ಪಿ ಮಾತನಾಡಿ ಕಾರ್ಯಕ್ರಮದ ಯಶಸ್ವಿಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿ ಕೊಳ್ಳಲಾಗಿದೆ. ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದ್ದು ವಲಯ ಮಟ್ಟದಲ್ಲಿ ಜವಬ್ದಾರಿ ವಹಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಜನಜಾಗೃತಿ ವೇದಿಕೆಯ ಸದಸ್ಯ ಪದ್ಮನಾಭ ಶೆಟ್ಟಿ ,ಬೂಡು ರಾಧಾಕೃಷ್ಣ ರೈ ಉಪಸ್ಥಿತರಿದ್ದರು.