ಪುತ್ತೂರು : ವಿಪತ್ತು ಸಂದರ್ಭದಲ್ಲಿ ಮೊಬೈಲ್ ಮೂಲಕ ಎಚ್ಚರಿಕೆ ಸಂದೇಶವನ್ನು ನೀಡುವ ಬಗ್ಗೆ ಪ್ರಾಯೋಗಿಕ ಪರೀಕ್ಷೆ ಅ.11ರಂದು ದೇಶಾದ್ಯಂತ ನಡೆದಿದೆ. ಆದರೆ ಇದು ಪುತ್ತೂರಿನ ಕಾಲೇಜೊಂದರ ಹಲವು ವಿದ್ಯಾರ್ಥಿಗಳ ಪಾಲಿಗೆ ಮಾತ್ರ ಆಪತ್ತಾಗಿ ಪರಿಣಮಿಸಿತು.ತರಗತಿಯೊಳಗೆ ಮೊಬೈಲ್ ಕೊಂಡೊಯ್ಯಲು ಕಾಲೇಜಿನಲ್ಲಿ ಅನುಮತಿ ಇಲ್ಲ.ಆದರೂ ಎಷ್ಟೋ ವಿದ್ಯಾರ್ಥಿಗಳು ಸೈಲೆಂಟ್ ಮೋಡ್‌ನಲ್ಲಿ ಇರಿಸಿ ಉಪನ್ಯಾಸಕರ ಗಮನಕ್ಕೆ ಬಾರದಂತೆ ಮೊಬೈಲ್ ಕೊಂಡೊಯ್ಯುತ್ತಿದ್ದರು. ಸೆ. 11.45ರ ಸುಮಾರಿಗೆ ಧ್ವನಿ ಮತ್ತು ಕಂಪನದೊಂದಿಗೆ ಮೊಬೈಲ್‌ಗಳಿಗೆ ಎಚ್ಚರಿಕೆ ಸಂದೇಶ ಬರಲಾರಂಭಿಸಿದ್ದು, ಸೈಲೆಂಟ್ ಮೋಡ್‌ನಲ್ಲಿರುವ ಮೊಬೈಲ್ ಗಳೂ ಸದ್ದು ಮಾಡಿದವು. ಉಪನ್ಯಾಸಕರಿಗೆ ಯಾರೆಲ್ಲ ತರಗತಿಯೊಳಗೆ ಮೊಬೈಲ್ ಬಳಸುತ್ತಿದ್ದಾರೆ ಅನ್ನುವ ಸಂಗತಿ ತಿಳಿಯಿತು. ಉಪನ್ಯಾಸಕರು ಮೊಬೈಲನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆದು ಎಚ್ಚರಿಕೆ ನೀಡಿದರು.