ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲದಲ್ಲಿ ಮಾರ್ಚ್ ೫, ೬ ಮತ್ತು ೭ರಂದು ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಶ್ರದ್ದಾ ಭಕ್ತಿಯಿಂದ ನಡೆಯಲಿದೆ.
ಕಾರ್ಯಕ್ರಮ ಯಶಸ್ಸಿಗಾಗಿ ಸಿದ್ಧತೆಗಳು ಪೂರ್ಣಗೊಂಡಿದ್ದು ಪರಿಸರ ಕೇಸರಿ ಬಂಟಿಂಗ್ಸ್ ತೋರಣ ಬ್ಯಾನರ್ ಗಳಿಂದ ಕಂಗೊಳಿಸುತ್ತಿದೆ.
ಮಾ.೫ರಂದು ಬೆಳಗ್ಗೆ ಸುಳ್ಯ ಮತ್ತು ಅಜ್ಜಾವರದಿಂದ ಏಕಕಾಲಕ್ಕೆ ಹಸಿರುವಾಣಿ ಮೆರವಣಿಗೆ ನಡೆಯಲಿದೆ. ಸುಳ್ಯದಿಂದ ಬೆಳಗ್ಗೆ ಚೆನ್ನಕೇಶವ ದೇವಸ್ಥಾನದಲ್ಲಿ ಪೂಜೆ ನಡೆದು ಬಳಿಕ ವಾಹನ ಮೆರವಣಿಗೆಯ ಮೂಲಕ ವಿವೇಕಾನಂದ ಸರ್ಕಲ್ ಬಳಿಯಿಂದಾಗಿ ಹಸಿರುವಾಣಿ ಮೆರವಣಿಗೆ ನಡೆಯಲಿದೆ. ಅಜ್ಜಾವರ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಪೂಜೆಯ ಬಳಿಕ ಅಲ್ಲಿಂದ ಹಸಿರುವಾಣಿ ವಾಹನ ಮೆರವಣಿಗೆ ಆರಂಭಗೊಳ್ಳುವುದು. ಎರಡೂ ಕಡೆಯಿಂದಲೂ ಏಕಕಾಲದಲ್ಲಿ ಮೆರವಣಿಗೆ ಮೇನಾಲಕ್ಕೆ ಬಂದು ಅಲ್ಲಿಂದ ಕಾಲ್ನಡಿಗೆಯ ಮೂಲಕ ದೈವಸ್ಥಾನಕ್ಕೆ ಹಸಿರುವಾಣಿ ಕೊಂಡೊಯ್ಯಲಾಗುವುದು.
ಮಹೋತ್ಸವ ನಡೆಯುವ ಜಾಗದ ಸುತ್ತ ಅಡಿಕೆ ಮರದ ಬೇಲಿಯ ರೀತಿಯಲ್ಲಿ ಮಾಡಲಾಗಿ, ಮೇಲೆ ಬಣ್ಣ ಬಣ್ಣದ ಬಂಟಿಂಗ್ಸ್‌ಗಳಿಂದ ಶೃಂಗಾರ ಮಾಡಲಾಗಿದೆ. ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಸಾರ್ವಜನಿಕರು ಕುಳಿತುಕೊಂಡು ಮಹೋತ್ಸವ ವೀಕ್ಷಿಸಲು ಒಂದು ಬದಿ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಗಣ್ಯರು, ಅತಿಥಿಗಳಿಗೂ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸಿದ್ಧತೆಗಳಿಗಾಗಿ ಕಳೆದ ಒಂದೂವರೆ ತಿಂಗಳಿಂದ ಊರಿನ ಹಾಗೂ ಪರವೂರಿನ ಸಂಘ ಸಂಸ್ಥೆಗಳ ಪದಾಧಿಕಾರಿ ಶ್ರಮ ಸೇವೆಯಲ್ಲಿ
ಶೃಂಗಾರಗೊಂಡ ಊರು ದೈವಂಕಟ್ಟು ಮಹೋತ್ಸವ ನಡೆಯುವ ಸಲುವಾಗಿ ಅಜ್ಜಾವರ ಗ್ರಾಮವೇ ಸಿದ್ಧಗೊಂಡಿದೆ. ಸುಳ್ಯ ನಗರದ ವಿವೇಕಾನಂದ ಸರ್ಕಲ್ ಬಳಿಯಲ್ಲಿ ಮಹಾದ್ವಾರವನ್ನು ಮಾಡಲಾಗಿದೆ. ಅಲ್ಲಿಂದ ಮುಂದಕ್ಕೆ ಕರಿಯಮೂಲೆ, ಕಾಟಿಪಳ್ಳ, ಮೇನಾಲದಲ್ಲಿ ದ್ವಾರಗಳನ್ನು ಮಾಡಲಾಗಿದ್ದರೆ, ಅಜ್ಜಾವರ ಭಾಗವಾಗಿ ಬರುವವರನ್ನು ಸ್ವಾಗತಿಸಲು ಅಜ್ಜಾವರ ಪಂಚಾಯತ್ ಬಳಿ, ಮೇದಿನಡ್ಕದಲ್ಲಿ ಅಲ್ಲಲ್ಲಿ ದ್ವಾರಗಳನ್ನು ಮಾಡಲಾಗಿದೆ. ದಾರಿಯುದ್ಧಕ್ಕೂ ಕೇಸರಿ ಬಂಟಿಂಗ್ಸ್‌ಗಳು ಹಾಗೂ ಪ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಅಲ್ಲಲ್ಲಿ ವಿದ್ಯುತ್ ದೀಪಾಲಂಕಾರವನ್ನೂ ಮಾಡಲಾಗಿದೆ.
ಮಹೋತ್ಸವಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸುವುದರಿಂದ ೧೦ ಕಡೆಯಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಸುಳ್ಯದಿಂದ ಬರುವವರು ಮೇನಾಲ ಶಾಲಾ ಮೈದಾನದಲ್ಲಿ, ಅಂಬೇಡ್ಕರ್ ಸಭಾಭವನದ ಪಕ್ಕದಲ್ಲಿ ಶ್ರೀಕೃಷ್ಣ ಭಜನಾ ಮಂದಿರದ ಪಕ್ಕದಲ್ಲಿ ಅಂಬೇಡ್ಕರ್ ಭವನದ ಪಕ್ಕದ ಖಾಲಿ ಜಾಗದಲ್ಲಿ ಮೇನಾಲ ಕಾಲನಿ ಪಕ್ಕದಲ್ಲಿರುವ ಜಾಗದಲ್ಲಿ ಹೀಗೆ ಅಲ್ಲಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದರೆ, ಕೇರಳದಿಂದ ಅಜ್ಜಾವರ ಮೂಲಕ ಮೇನಾಲಕ್ಕೆ ಬರುವವರು ಮೇದಿನಡ್ಕ ದ್ವಾರದ ಮೂಲಕ ಹೋಗಿ ಅಲ್ಲಿ ವಾಹನ ಪಾರ್ಕಿಂಗ್ ಮಾಡಿಯೂ ಮಹೋತ್ಸವ ನಡೆಯುವ ಜಾಗಕ್ಕೆ ಬರಬಹುದು. ಗಣ್ಯರಿಗೆ ಮಹೋತ್ಸವ ನಡೆಯುವ ಜಾಗಕ್ಕೆ ಹೋಗುವ ಮುಖ್ಯ ರಸ್ತೆಯ ಬದಿಯಲ್ಲಿರುವ ಖಾಲಿ ಜಾಗವನ್ನು ಮೀಸಲಿಡಲಾಗಿದೆ. ದ್ವಿಚಕ್ರ ಸವಾರರು ಹಾಗೂ ಇತರ ವಾಹನದಾರರಿಗೆ ಪ್ರತ್ಯ ಪ್ರತ್ಯೇಕ ಜಾಗವನ್ನು ಮಾಡಲಾಗಿದೆ. ಮೂರು ದಿನವೂ ಬೆಳಗ್ಗೆ ಸಂಜೆ ಉಪಹಾರದ ವ್ಯವಸ್ಥೆ ಇದ್ದರೆ, ಉಳಿದಂತೆ ನಿರಂತರ ಅನ್ನದಾನ ನಡೆಯುತ್ತದೆ.