ಸುಳ್ಯ : ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಪ್ರವಾದಿ ಮಹಮ್ಮದ್ ಮುಸ್ತಾಫ (ಸ.ಅ)ರವರ ಜನ್ಮ ದಿನಾಚರಣೆಯ ಅಂಗವಾಗಿ ಸೆ ೨೦ ರಂದು ಸುಳ್ಯದಲ್ಲಿ ಬೃಹತ್ ಮಿಲಾದ್ ಕಾಲ್ನಡಿಗೆ ಜಾಥಾ ಹಾಗೂ ಪ್ರವಾದಿ ಸಂದೇಶ ಭಾಷಣ ಕಾರ್ಯಕ್ರಮ ನಡೆಯಲಿದೆ ಎಂದು ತಾಲೂಕು ಮಿಲಾದ್ ಸಮಿತಿ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಿಲಾದ್ ಸಮಿತಿಯ ಅಧ್ಯಕ್ಷ ಶರೀಫ್ ಕಂಠಿ ಸೆ.20ನೇ ಶುಕ್ರವಾರ ಸಂಜೆ ೪.೦0 ಗಂಟೆಗೆ ಮೊಗರ್ಪಣೆ ಮಸೀದಿ ವಠಾರದಿಂದ ಕಾಲ್ನಡಿಗೆ ಜಾಥಾ ಪ್ರಾರಂಭಗೊಂಡು ಗಾಂಧಿನಗರ ಪೆಟ್ರೋಲ್ ಪಂಪ್ ಮುಭಾಗದಲ್ಲಿ ಜಾಥಾ ಸಮಾಪ್ತಿಗೊಳ್ಳಲಿದೆ. ಜಾಥಾದಲ್ಲಿ ಜಿಲ್ಲಾ ಹಾಗೂ ತಾಲೂಕಿನ ಪ್ರಖ್ಯಾತ ದಫ್ ತಂಡ ಮತ್ತು ಸೌಟ್ ತಂಡಗಳು ಭಾಗವಹಿಸಲಿದ್ದು,ಆಕರ್ಷಕ ಪ್ರದರ್ಶನಗಳೊಂದಿಗೆ ಸುಳ್ಯದ ಮುಖ್ಯ ರಸ್ತೆಗಳಲ್ಲಿ ಸಾಗಿ ಬರಲಿದೆ.
ನಂತರ ಗಾಂಧಿನಗರ ಪೆಟ್ರೋಲ್ ಪಂಪ್ ಬಳಿ ಪ್ರವಾದಿ ಸಂದೇಶ ಸಾರ್ವಜನಿಕ ಸಭೆ ನಡೆಯಲಿದೆ ಎಂದರು. ಸಭಾ ಕಾರ್ಯಕ್ರಮದ ದುಆ ಮತ್ತು ಉದ್ಘಾಟನೆಯನ್ನು ಸಯ್ಯದ್ ಕುಂಞಕೋಯ ತಂಜಳ್ ಸಅದಿ ಸುಳ್ಯ ಇವರು ನೆರವೇರಿಸಲಿದ್ದಾರೆ.
ಮುಖ್ಯ ಪ್ರಭಾಷಣಕಾರರಾಗಿ ಅಂತರರಾಷ್ಟ್ರೀಯ ವಾಗ್ನಿ ಕೇರಳ ರಾಜ್ಯದ ಕುರುವಾರಕುಂಡ್ ಸಮನ್ವಯ ಗಿರಿ ಅಧೀನ ಮಠದ ಶ್ರೀ ಶ್ರೀಮಥ್ ಸ್ವಾಮಿ ಆತ್ಮಾದಾಸ್ ಯಾಮಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಇವರು ಕರ್ನಾಟಕ ರಾಜ್ಯಕ್ಕೆ ಪ್ರಥಮ ಭಾರಿ ಆಗಮಿಸುತ್ತಿದ್ದು, ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಹೊಂದಿರುತ್ತಾರೆ. ಅಲ್ಲದೆ ಮುಸ್ಲಿಮ್ ಧಾರ್ಮಿಕ ಪಂಡಿತರಾದ ಎಂ.ಎಸ್.ಎಂ. ಅಬ್ದುಲ್ ರಶೀದ್ ಝನಿ ಖಾಮಿಲ್ ಸಖಾಫಿ ಎಂ.ಎ. ಪಿ.ಹೆಚ್.ಡಿ. ಮತ್ತು ಮೌಲಾನಾ ಅಝೀಝ್ ಧಾರಿಮಿ ಚೊಕ್ಕಬೆಟ್ಟು ಹಾಗೂ ಸುಹೈಲ್ ಧಾರಿಮಿ ನಾಪೋಕ್ಲು ಹಾಗೂ ಇನ್ನಿತರ ಧಾರ್ಮಿಕ, ರಾಜಕೀಯ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ.
ವೇದಿಕೆಯಲ್ಲಿ ಪ್ರಖ್ಯಾತ ತಂಡಗಳ ದಫ್ ಪ್ರದರ್ಶನ ನಡೆಯಲಿದ್ದು ಕಾರ್ಯಕ್ರಮಕ್ಕೆ ಜಾತಿ ಮತ ಭೇದವಿಲ್ಲದೆ ಸರ್ವರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡುವಂತೆ ಅವರು ಕೇಳಿಕೊಂಡರು.
ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶವನ್ನು ಕಲ್ಪಿಸಲಾಗುತ್ತಿದ್ದು ಮಹಿಳೆಯರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸಂಚಾಲಕರುಗಳಾದ ಉಮ್ಮರ್ ಕೆ ಎಸ್ ಹಾಗೂ ಅಬ್ದುಲ್ ಕಲಾಂ ಸುಳ್ಯ ಕಾರ್ಯಕ್ರಮದ ವಿವರಣೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷರುಗಳಾದ ಸಿದ್ದೀಕ್ ಕೊಕ್ಕೋ,ಎನ್ ಎ ಜುನೈದ್, ಅಬ್ದುಲ್ ರಶೀದ್ ಜಟ್ಟಿಪಳ್ಳ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಝೀಝ್ ಸಂಗಮ್, ಜೊತೆ ಕಾರ್ಯದರ್ಶಿಗಳಾದ ಕಲಂದರ್ ಎಲಿಮಲೆ, ಮುನಾಫರ್, ಉನೈಸ್ ಪೆರಾಜೆ ಹಾಗೂ ನವಾಜ್ ಪಂಡಿತ್, ಇಟ್ಬಾಲ್ ಸುಣ್ಣಮೂಲೆ ಇತರರು ಉಪಸ್ಥಿತರಿದ್ದರು.