ಯಾವ ಮೋಡಿಯ ಮಾಡಿದಳು
ತನ್ನ ಚೆಲುವಿನ ಮೊಗದಲಿ
ಮಿನುಗು ತಾರೆಗಳ
ಕಣ್ಣೊಳಗಡಗಿಸಿ
ತುಟಿಯಲಿ ಬಿರಿದ
ಮುಗುಳ್ನಗೆಯು
ಮುತ್ತಾ ಚೆಲ್ಲುತ್ತಾ
ಸೂರೆ ಮಾಡಿಹಳು
ಸದ್ದು ಮಾಡದೆ ನನ್ನೆದೆಯ..
ಅವಳ ತನುವಿನ ಕಾಂತಿಯ ಹೊಳಹು
ಬಳಕುವ ನಡು ನವಿಲನಾಚಿಸಿತು
ಕುಡಿ ನೋಟದ ನಯನ
ಹೂ ಬಾಣವಾಗಿ
ಮನದ ಕಡು ಕತ್ತಲೆಯ ಸೀಳಿ
ಒಲವ ಒಸಗೆಯಲಿ
ಬದುಕಿನ ಕನಸಿಗೆ ಸ್ಫುರಣವಾಗಿಹಳು
ಎದೆ ಗೂಡ ಹದಗೊಳಿಸಿ
ಬಯಕೆ ಬೀಜವ ಬಿತ್ತಿ
ಸೊಂಪಾಗಿ ಅರಳಿದ ಹೂ
ಮುಡಿಯ ಸಿಂಗರಿಸಿ
ನಳ ನಳಿಸುವ ಮೊಗದಲಿ
ಮಿಂಚಿದ ಮುಗುಳ್ನಗು
ಸೂರ್ಯನ ಹೊಂಗಿರಣವ ಬೆಚ್ಚಿಸಿ
ಎನ್ನ ಹೃದಯವ ನೆಚ್ಚಿಸಿ
ನನ್ನೆದೆಯ ತಂತಿಗೆ ಸ್ವರವಾದಳು….
ವಿಮಲಾರುಣ ಪಡ್ಡoಬೈಲ್