ಕೊಡಿಯಾಲ :ಬೆಳ್ಳಾರೆ ಸಮೀಪದ ಕೊಡಿಯಾಲ ಗ್ರಾಮದ ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಲರ್ಪೆ ಜಯಭಾರತಿ (56) ಅವರು ಮನೆಯಲ್ಲಿ ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಮಹಿಳೆಯ ಬಾವ ಶಂಕರ ಅವರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ.
ಗಂಭೀರ ಗಾಯಗೊಂಡಿರುವ ಮಹಿಳೆಯನ್ನು ಸಂಬಂಧಿಕರು ಸುಳ್ಯದ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಕಿ ಹಚ್ಚಿರುವ ವ್ಯಕ್ತಿಗೂ ಗಾಯವಾಗಿದ್ದು, ಆತನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ. ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ ಕೃತ್ಯ ಎಸಗಿರುವ ಬಗ್ಗೆ ವಿಚಾರ ಬೆಳಕಿಗೆ ಬಂದಿದೆ.
ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.