ಅರಂತೋಡು, ಅ.19 : ಅರಂತೋಡು ಗ್ರಾಮ ಪ೦ಚಾಯತ್ ವ್ಯಾಪ್ತಿಯ ಬಲ್ನಾಡ್ ಹೊಳೆಯ ಅರಮನೆಗಯ ಎಂಬಲ್ಲಿ ಶಿಥಿಲಗೊಂಡ ಸೇತುವೆ ಸಹಿತ ಮೂವರು ಹೊಳೆಗೆ ಬಿದ್ದು ಗಾಯಗೊಂಡಿದ್ದು ಈ ಹೊಳೆಗೆ ಶಾಶ್ವತ ಸೇತುವೆ ನಿರ್ಮಿಸಿ ಕೊಡಬೇಕೆಂದು ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿಗಳಿಗೆ ಸುಳ್ಯ ತಹಶೀಲ್ದಾರ ಮುಖಾಂತರ ಮನವಿ ಸಲ್ಲಿಸಲಾಗಿದೆ.
ಅರಂತೋಡು ಗ್ರಾಮದ ಅರಮನೆಗಯ ಎಂಬಲ್ಲಿ ‘ಹಲವು ವರ್ಷಗಳಿಂದ ಇದ್ದಂತ ತೂಗುಸೇತುವೆ ಈ ಮೊದಲು 30 ವರುಷಗಳಿಂದ ಸಂಬಂಧಪಟ್ಟ ಶಾಸಕರಿಗೆ ಮತ್ತು ಸಂಬಂಧಪಟ್ಟ ಎಲ್ಲಾ ಅಧಿಕಾರಿ ವರ್ಗದವರಿಗೂ ಶಾಶ್ವತವಾಗಿ ಇಲ್ಲಿಗೆ ಹೊಸ ಸೇತುವೆ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದ್ದೆವು. ಆದರೆ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಯಾವುದೇ ರೀತಿಯಲ್ಲಿ ಇದುವರೆಗೆ ಸ್ಪಂದಿಸಿಲ್ಲ. ತೂಗುಸೇತುವೆಯ ರಿಪೇರಿಯನ್ನು ಕೂಡ ಗ್ರಾಮ ಪಂಚಾಯತ್‌ನವರು ಮಾಡಿಕೊಟ್ಟಿರುವುದಿಲ್ಲ. ಇಲ್ಲಿ ಸುಮಾರು 60 ದಲಿತ ಕುಟುಂಬಗಳು ವಾಸವಾಗಿರುತ್ತಾರೆ. ಶಾಲಾ ಮಕ್ಕಳೂ ಶಾಲೆಗೆ ಇದೇ ಸೇತುವೆಯಲ್ಲಿ ನಿರಂತರ ಓಡಾಡಬೇಕಾಗುತ್ತದೆ. ಆದರೆ ಇದೆಲ್ಲ ಗೊತ್ತಿದ್ದರೂ ಶಾಸಕರಾಗಲಿ, ಅಧಿಕಾರಿಗಳಾಗಲೀ ಯಾವುದೇ ಕ್ರಮ ಇದುವರೆಗೆ ಕೈಗೊಂಡಿಲ್ಲ. ಅ.17ರಂದು ತೂಗುಸೇತುವೆಯ ಮೇಲೆ ತೇಜಕುಮಾರ್ ಅರಮನೆಗಯ, ಕುಸುಮಾಧರ ಉಳುವಾರು, ಚಂದ್ರಶೇಖರ ಕೊಂಪುಳಿ ಇವರು ಮೂರು ಜನ ನಡೆದುಕೊಂಡು ಬರುತ್ತಿರುವ ಸಂದರ್ಭದಲ್ಲಿ ತೂಗುಸೇತುವೆಯ ರೋಪ್ ಕಟ್ಟಾಗಿ ಕೆಳಗಡೆ ಬಿದ್ದರು.
ಕುಸುಮಾಧರ ಎಂಬವರಿಗೆ ಗಂಭೀರವಾಗಿ ಏಟಾಗಿ ಇನ್ನಿಬ್ಬರಿಗೆ ಅಲ್ಪ ಸ್ವಲ್ಪ ಏಟಾಗಿರುತ್ತದೆ ನಂತರ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಇದಕ್ಕೆಲ್ಲಾ ನೇರ ಹೊಣೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷವಾಗಿರುತ್ತದೆ.
ಆದುದರಿಂದ ಈ ತೂಗುಸೇತುವೆಯಲ್ಲಿ ದಿನನಿತ್ಯ ಶಾಲಾ ಮಕ್ಕಳು, ಕೂಲಿ ಕಾರ್ಮಿಕರು ಬೇರೆ ರಸ್ತೆ ಇಲ್ಲದೆ ಇದೆ ತೂಗುಸೇತುವೆಯಲ್ಲಿ ಓಡಾಡಬೇಕಾಗುತ್ತದೆ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಸ್ಪಂದಿಸಿ ಈ ತೂಗುಸೇತುವೆಯನ್ನು ತಾತ್ಕಾಲಿಕವಾಗಿ ರಿಪೇರಿ ಮಾಡಿ ಕೊಡಬೇಕಾಗಿಯೂ ಮತ್ತು ಕೂಡಲೇ ಶಾಶ್ವತವಾಗಿ ಹೊಸ ಸೇತುವೆ ನಿರ್ಮಿಸಿಕೊಡಬೇಕೆಂದು” ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಕೇಳಿಕೊಳ್ಳುತ್ತಿದ್ದೇವೆ. ಒಂದು ವೇಳೆ ರಿಪೇರಿ ಮಾಡದೇ ಇದ್ದಲ್ಲಿ ಸುಳ್ಯ ತಾಲೂಕು ಕಚೇರಿಯ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಎ.ಸಿ,ತಾಲೂಕು ಪಂಚಾಯತ್ ಇ.ಒ ಸಮಾಜ ಕಲ್ಯಾಣ ಅಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಮುಖಂಡರಾದ ಸುಂದರ ಪಾಟಾಜೆ,ತೇಜಕುಮಾರ್ ಅರಮನೆಗಯ ಉಪಸ್ಥಿತರಿದ್ದರು.