ಅ.31ಕ್ಕೆ ಅರಂತೋಡು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಸರಸ್ವತಿ ಅಡ್ತಲೆ ಸೇವಾ ನಿವೃತ್ತಿ

ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಕ್ರಿಯಾಶೀಲಾ ದೈಹಿಕ ಶಿಕ್ಷಣ ಶಿಕ್ಷಕಿ, ದ.ಕ. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಸರಸ್ವತಿ ಅಡ್ತಲೆ ಅವರು ತಮ್ಮ ಸುದೀರ್ಘ 39 ವರ್ಷ ನಾಲ್ಕು ತಿಂಗಳ ಶಿಕ್ಷಕ ವೃತ್ತಿ ಜೀವನದಿಂದ ಅ.31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಜಾಲ್ಲೂರು ಗ್ರಾಮದ ಕುತ್ಯಾಳ ದಿ. ಕೂಸಪ್ಪ ಗೌಡ ಹಾಗೂ ದಿ. ಶಾಂತಮ್ಮ ದಂಪತಿಯ ಪುತ್ರಿಯಾದ ಸರಸ್ವತಿ ಅವರು ತಮ್ಮ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಜಾಲ್ಲೂರು ಗ್ರಾಮದ ಬೊಳುಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪ್ರಾಥಮಿಕ ಶಿಕ್ಷಣವನ್ನು ಸುಳ್ಯದ ಸ.ಮಾ. ಹಿ.ಪ್ರಾ. ಶಾಲೆಯಲ್ಲಿ ಅಧ್ಯಾಯನ ಮಾಡಿದರು.
ಬಳಿಕ ಕುಶಾಲನಗರದ ಶ್ರೀ ಸತ್ಯಸಾಯಿ ಕಾಲೇಜಿನಲ್ಲಿ ಸಿ.ಪಿ.ಎಡ್ (ದೈಹಿಕ ಶಿಕ್ಷಣ) ತರಬೇತಿ ಪಡೆದು, 1985ರಲ್ಲಿ ಮಿತ್ತಡ್ಕ ಮರ್ಕಂಜ ಸ.ಹಿ.ಪ್ರಾ.ಶಾಲೆಯಲ್ಲಿ ತಮ್ಮ ಶಿಕ್ಷಕ ವೃತ್ತಿ ಜೀವನ ಆರಂಭಿಸಿದರು.
ಈ ಮದ್ಯೆ 1985ರಲ್ಲಿ ಆರಂತೋಡಿನ ಅಡ್ತಲೆ ಶಾಲೆಯಲ್ಲಿ ಶಿಕ್ಷಕರಾಗಿದ್ದ ಚಿದಾನಂದ ಮಾಸ್ತ‌ರ್ ಅವರನ್ನು ವಿವಾಹವಾದರು.
1985ರಿಂದ 1990ರವರೆಗೆ ಮಿತ್ತಡ್ಕ ಮರ್ಕಂಜ ಸ.ಹಿ.ಪ್ರಾ.ಶಾಲೆಯಲ್ಲಿ ಸೇವೆ ಸಲ್ಲಿಸಿ, 1990ರಲ್ಲಿ ಅರಂತೋಡಿನ ಸ.ಮಾ.ಹಿ.ಪ್ರಾ.ಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ವರ್ಗಾವಣೆಗೊಂಡರು. ಅರ೦ತೋಡು ಶಾಲೆಯಲ್ಲಿ ಸುಮಾರು 12 ವರ್ಷಗಳ ಅವಧಿ ಮುಖ್ಯೋಪಾಧ್ಯಾಯರಾಗಿಯೂ ಸೇವೆ ಸಲ್ಲಿಸಿದ ಸರಸ್ವತಿ ಅವರು ಶಾಲೆಗೆ ಎಸ್.ಎಸ್.ಎ. ಅನುದಾನದಿಂದ 8ನೇ ತರಗತಿ ಕೊಠಡಿ, ನಲಿಕಲಿ ಕೊಠಡಿ, ಮುಖ್ಯ ಶಿಕ್ಷಕರ ಕೊಠಡಿ, ಹಳೆಯ ಶಾಲೆಯ ಸಂಪೂರ್ಣ ರಿಪೇರಿ, ಶೌಚಾಲಯಗಳ ನಿರ್ಮಾಣ, ಅಕ್ಷರ ದಾಸೋಹ ಕೊಠಡಿ, ಶಾಲಾ ಶತಮಾನೋತ್ಸವದ ಜವಾಬ್ದಾರಿ ಹೊತ್ತು ವಿವಿಧ ಸಮಿತಿಗಳ ರಚನೆ, ದಾನಿಗಳ ನೆರವಿನಿಂದ 22 ಲಕ್ಷ ಧನಸಂಗ್ರಹ, ಧತ್ತಿನಿಧಿ ಸಂಗ್ರಹ ಮಾಡಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಿದರು.
ತಮ್ಮ ಶಿಕ್ಷಕ ವೃತ್ತಿ ಜೀವನದ ಜೊತೆಗೆ ಹತ್ತು ವರ್ಷಗಳ ಕಾಲ ಸುಳ್ಯ ತಾಲೂಕು ಶಿಕ್ಷಕರ ಸಂಘದ ಖಜಾಂಜಿಯಾಗಿ ಹಾಗೂ ಐದು ವರ್ಷಗಳ ಕಾಲ ದ.ಕ. ಜಿಲ್ಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 2002- 03ರಲ್ಲಿ ಸುಳ್ಯ ತಾಲೂಕು ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, 2018-19ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.
ಇವರ ಪತಿ ಚಿದಾನಂದ ಮಾಸ್ತರ್ ಅವರು ನಿವೃತ್ತರಾಗಿದ್ದು, ಕೃಷಿಕರಾಗಿದ್ದಾರೆ. ಹಿರಿಯ ಪುತ್ರಿ ಸಚಿತ್ರ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ಪತಿ ಅರುಣ್ ದೊಡ್ಡಮನೆ ಹಾಗೂ ಮಕ್ಕಳೊಂದಿಗೆ ಜರ್ಮನಿಯಲ್ಲಿ ನೆಲೆಸಿದ್ದಾರೆ. ಕಿರಿಯ ಪುತ್ರಿ ಸೌಮ್ಯ ಕೂಡಾ ಇಂಜಿನಿಯರಿಂಗ್ ಪದವೀಧರೆ ಆಗಿದ್ದು, ಪತಿ ತೇಜಕುಮಾ‌ರ್ ಕೊರಂಬಡ್ಕ ಹಾಗೂ ಮಗುವಿನೊಂದಿಗೆ ದುಬೈನಲ್ಲಿ ನೆಲೆಸಿದ್ದಾರೆ. ಪುತ್ರ ಡಾ. ನಿತಿನ್ ವೈದ್ಯ ರಾಗಿದ್ದು, ಸಂಪಾಜೆಯಲ್ಲಿ ಸಂಹಿತ ಕ್ಲಿನಿಕ್ ನಡೆಸುತ್ತಿದ್ದಾರೆ. ಸರಸ್ವತಿ ಅವರಿಂದ ತರಬೇತಿ ಪಡೆದ ಹಲವಾರು ಮಂದಿ ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಶಸ್ತಿಗಳನ್ನು ಪಡೆದಿದ್ದಾರೆ.ಸಾವಿರಾರು ಶಿಷ್ಯರನ್ನು‌ ಹೊಂದಿರುವ ಸರಸ್ವತಿ ಮೇಡಮ್ ಶಿಷ್ಯರ ಅಚ್ಚುಮೆಚ್ಚಿನ ‌ಶಿಕ್ಷಕಿಯಾಗಿದ್ದಾರೆ.ಅ.29 ರಂದು ಅರಂತೋಡು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಸರಸ್ವತಿಯವರಿಗೆ ಸಾರ್ವಜನಿಕ ಬೀಳ್ಕೋಡುಗೆ ಕಾರ್ಯಕ್ರಮ ನಡೆಯಲಿದೆ.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top