ಅಂತರಂಗದ ಭಾವ
ವಿರಹದುರಿಯ ಬಂಧನದಿ ಸಿಲುಕಿ
ಮಿಡಿಯುತಿತ್ತು
ಬೇಗೆಯ ಸೀಳಲು
ಎದೆಯ ಕತ್ತಲನಳಿಸಲು
ನಿನಗಾಗಿ ತುಡಿಯುತಿತ್ತು .
ಹುಡುಕುತಿತ್ತು ಮನ
ದೀಪ ಹಚ್ಚುವ ಕೈಗಳ
ಮುಡಿ ಹರಡಿ ಮುನಿಸಿದೆ
ಅಮಾವಾಸ್ಯೆ ಕಡುಗತ್ತಲು
ಎದೆ ಸೀಳಿ ಬಗೆದರು
ಸ್ಫುರಣ ಕಾಣಲೊಲ್ಲವು.
ಎತ್ತ ಸಾಗುತ್ತಿದೆ ನನ್ನ ಭವಿಷ್ಯ?
ಹಸುರು ಸೀರೆ ಮಾಸುತ್ತಿದೆ
ನಾರುವ ವಾಸನೆ
ಮುಗಿಲ ಮುಟ್ಟುತ್ತಿದೆ
ಒಮ್ಮೆ ನೀ ಬಂದು
ಬೆಳಕ ಸ್ಫುರಿಸು
ಎಲ್ಲಿ ಮರೆಯಾದೆ
ವರ್ಷದ ಬೆಳಕ ಹೊತ್ತು ?
ನೀ ಬರುವೆ ಎಂದು
ಅಂಗಳಲಿ ಚಿತ್ತಾರ
ಕನಸ ನೇಯುತ್ತಾ
ದೀಪದ ಸಾಲು ದಾರಿ ಕಾಯುತ್ತಾ
ಜೀರುಂಡೆ ಪದವಾಡುತಿಹುದು.
ನೀ ಬಂದು ನವರಾಗ ನುಡಿಸು
ವಿರಹದುರಿಯ ಮನವ
ಹದಗೊಳಿಸಿ ಹಸನಾಗಿಸು
ಕೊಳ್ಳಿ ಇಡುವ ಕೈಗೆ
ದೀಪ ಹಚ್ಚುವ ಪಾಠ ಕಲಿಸು
ಬಡಿಸುವೆ ನಿನಗಾಗ ಸಿಹಿ ಔತಣ...
*ವಿಮಲಾರುಣ ಪಡ್ಡoಬೈಲ್*