ಕಡಬ: ಕಡಬ ತಾಲೂಕಿನ ಕೋಡಿಂಬಾಳ ಸಮೀಪದ ಪುಳಿಕುಕ್ಕು ಮುರಚೆಡವು ಬಳಿ ಚಲಿಸುತ್ತಿದ್ದ ಸ್ಕೂಟಿಯ ಮೇಲೆ ದೂಪದ ಮರ ಬಿದ್ದು ಎಡಮಂಗಲ ಗ್ರಾಮದ ದೇವಸ್ಯ ನಿವಾಸಿ ಸೀತಾರಾಮ ಗೌಡ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದು ಎರಡು ದಿನ ಕಳೆದರೂ ಅವರು ಸ್ಕೂಟಿಯಲ್ಲಿ ಕೊಂಡೊಯ್ಯುತ್ತಿದ್ದ ಕೋಳಿ ಮಾತ್ರ ಘಟನೆ ನಡೆದ ಸ್ಥಳದಲ್ಲಿಯೇ ಇದೆ.
ಸೀತಾರಾಮ ಅವರು ದೀಪಾವಳಿ ಪ್ರಯುಕ್ತ ಎಡಮಂಗಲದ ತನ್ನ ಮನೆಯಲ್ಲಿ ನಡೆಯಲಿದ್ದ ದೈವದ ಹರಕೆಗಾಗಿ ಕೋಡಿಂಬಾಳದಿಂದ ಕೋಳಿ ತೆಗೆದುಕೊಂಡು ಸ್ಕೂಟಿಯಲ್ಲಿ ಎಡಮಂಗಲದತ್ತ ಹೋಗುತ್ತಿದ್ದ ವೇಳೆ ನ. 2 ರಂದು ಬೆಳಗ್ಗೆ ರಸ್ತೆ ಪಕ್ಕದ ದೂಪದ ಮರ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದರು.
ಘಟನೆಯ ವೇಳೆ ಅವರು ಸ್ಕೂಟಿಯಲ್ಲಿ ಕೊಂಡೊಯ್ಯುತ್ತಿದ್ದ ಕೋಳಿ ಹಗ್ಗದಿಂದ ಕಾಲುಗಳನ್ನು ಕಟ್ಟಿದ್ದರಿಂದ ಮೃತದೇಹದ ಬಳಿಯೇ ಬಿದ್ದಿತ್ತು. ಬಳಿಕ ಸ್ಥಳದಲ್ಲಿದ್ದವರು ಕೋಳಿಯ ಕಾಲಿಗೆ ಕಟ್ಟಲಾಗಿದ್ದ ಹಗ್ಗವನ್ನು ಬಿಚ್ಚಿ ಬಿಟ್ಟಿದ್ದರು. ಆಗ ಹತ್ತಿರದ ಕಾಡಿನೊಳಗೆ ಹೋಗಿದ್ದ ಕೋಳಿ ಘಟನಾ ಸ್ಥಳದಲ್ಲಿ ಜಮಾಯಿಸಿದ್ದ ಜನರು ಚದುರಿದ ಬಳಿಕ ಮರಬಿದ್ದು ನಜ್ಜುಗುಜ್ಜಾಗಿದ್ದ ಸೀತಾರಾಮ ಅವರ ಸ್ಕೂಟಿಯ ಮೇಲೆ ಬಂದು ಕುಳಿತಿತ್ತು. ಜನರು ಹತ್ತಿರ ಬಂದಾಗ ಪಕ್ಕದ ಮರದ ರೆಂಬೆಯ ಮೇಲೆ ಆಶ್ರಯ ಪಡೆಯುತ್ತಿದ್ದ ಕೋಳಿ 2 ದಿನ ಕಳೆದರೂ ಘಟನ ಸ್ಥಳ ಬಿಟ್ಟು ಹೋಗದಿರುವುದು ಜನರ ಅಚ್ಚರಿಗೆ ಕಾರಣವಾಗಿದೆ.