ಸುಳ್ಯ: ಅಜ್ಜಾವರ ಗ್ರಾಮ ಪಂಚಾಯತ್ನ ನೂತನ ಅಧ್ಯಕ್ಷರಾಗಿ ದೇವಕಿ ಕಾಟಿಪಳ್ಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಜ್ಜಾವರ ಗ್ರಾ.ಪಂ. ಅಧ್ಯಕ್ಷರಾಗಿದ್ದ ಬೇಬಿ ಅವರು ರಾಜಿನಾಮೆ ನೀಡಿದ ಹಿನ್ನಲೆಯಲ್ಲಿ ತೆರವಾದ ಸ್ಥಾನಕ್ಕೆ ನ.7 ರಂದು ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು. ಅಜ್ಜಾವರ ಗ್ರಾ.ಪಂ. ನ ಅಧ್ಯಕ್ಷತೆ ಎಸ್ಸಿ ಮಹಿಳೆಗೆ ಮೀಸಲಾಗಿತ್ತು. ಕಳೆದ ಬಾರಿ ಅಧ್ಯಕ್ಷತೆ ಆಯ್ಕೆ ಸಂದರ್ಭ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಬೇಬಿ ಮತ್ತು ದೇವಕಿ ಆಕಾಂಕ್ಷಿಗಳಾಗಿದ್ದರು. ಬಳಿಕ ಮಾತುಕತೆ ನಡೆದು ಒಂದೂಕಾಲು ವರ್ಷದಂತೆ ಇಬ್ಬರಿಗೂ ಅಧ್ಯಕ್ಷತೆ ಹಂಚಿಕೊಡಲು ಪಕ್ಷ ನಾಯಕರು ನಿರ್ಧರಿಸಿದರು. ಅದರಂತೆ ಮೊದಲ ಅವಧಿಗೆ ಅಡ್ಡಂಗಾಯ ವಾರ್ಡ್ ಸದಸ್ಯೆ ಬೇಬಿ ಅಧ್ಯಕ್ಷರಾದರು. ಬೇಬಿಯವರ ಅಧ್ಯಕ್ಷತೆ ಒಂದೂಕಾಲು ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಅವರು ರಾಜೀನಾಮೆ ನೀಡಿದ್ದರು. ಇದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು.ಕಾಂಗ್ರೆಸ್ ಬೆಂಬಲಿತ ಸದಸ್ಯೆ ದೇವಕಿಯವರು ಅಧ್ಯಕ್ಷತೆಗೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಅವರು ಅವಿರೋಧವಾಗಿ ಆಯ್ಕೆಯಾದರು.