ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಜನ್ಮ ದಿನ, ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು ಮಾತನಾಡಿ ಪಂಡಿತ್ ನೆಹರೂರವರು ಭಾರತದ ಮೊದಲ ಪ್ರಧಾನಿಯಾಗಿ ಆಧುನಿಕ ಭಾರತದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನೆಹರೂರವರು ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ಭವ್ಯ ಭಾರತಕ್ಕೆ ಮುನ್ನುಡಿ ಬರೆದವರು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ್ ಮಾತನಾಡಿ ನೆಹರೂ ರವರ ದೂರದೃಷ್ಟಿಯ ಆಡಳಿತದಿಂದ ಇಂದು ನಾವು ತಂತ್ರಜ್ಞಾನ, ವಿಜ್ಞಾನ ದಲ್ಲಿ ಮಹತ್ತರ ಅಭಿವೃದ್ಧಿ ಕಂಡಿದ್ದೇವೆ. ಇಡೀ ನೆಹರೂ ಕುಟುಂಬವೇ ದೇಶಕ್ಕಾಗಿ ಮುಡುಪಾಗಿಟ್ಟವರು ಎಂದು ಹೇಳಿದರು. ಎ ಪಿ ಎಂ ಸಿ ಮಾಜಿ ಅಧ್ಯಕ್ಷ ಪರಶುರಾಮ ಚಿಲ್ತಡ್ಕ ಮಾತನಾಡಿ ನೆಹರೂ ರವರು ಭಾರತದ ಅಭಿವೃದ್ಧಿ ಮತ್ತು ಏಳಿಗೆಯ ಕನಸನ್ನು ಮಕ್ಕಳಲ್ಲಿ ಕಂಡವರು. ಅದಕ್ಕಾಗಿಯೇ ತನ್ನ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲು ಹೇಳಿದರು ಎಂದು ಅಭಿಪ್ರಾಯಪಟ್ಟರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ಕೋಲ್ಚಾರ್ ಶುಭಹಾರೈಸಿದರು. ಬ್ಲಾಕ್ ಉಪಾಧ್ಯಕ್ಷ ಗೋಕುಲ್ ದಾಸ್ ಮಾತನಾಡಿ ನೆಹರೂ ಜನ್ಮ ದಿನ ಮಕ್ಕಳ ದಿನಾಚರಣೆಯನ್ನು ಕಾಂಗ್ರೆಸ್ ನಾಯಕರು ಗ್ರಾಮೀಣ ಮಟ್ಟದಲ್ಲಿ ಆಚರಿಸುವ ಮೂಲಕ ನೆಹರೂ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾ ಕೆಡಿಪಿ ಸದಸ್ಯೆ ಶ್ರೀಮತಿ ಸುಜಯ ಕೃಷ್ಣ, ಕೆಪಿಸಿಸಿ ಕಾರ್ಮಿಕ ಘಟಕ ಕಾರ್ಯದರ್ಶಿ ಸುರೇಶ್ ಕಂದಡ್ಕ, ನಗರಪಂಚಾಯತ್ ನಾಮ ನಿರ್ದೇಶಿತ ಸದಸ್ಯ ರಾಜು ಪಂಡಿತ್, ಅನಿಲ್ ರೈ ಪುಡ್ಕಜೆ, ಚಂದ್ರಶೇಖರ ನಾಯ್ಕ ಕಂದಡ್ಕ, ಧರ್ಮಪಾಲ ಕೊಯಿಂಗಾಜೆ ಮಹೇಶ್ ಬೆಳ್ಳಾರ್ಕರ್, ಕೇಶವ ಮೊರಂಗಲ್ಲು, ಚಂದ್ರನ್ ಕೂಟೆಲು, ಜುಬೆರ್ ಅರಂತೋಡು, ಯಶೋಧರ ಬಿ ಸಿ, ಮಂಜುನಾಥ ಮಡ್ತಿಲ, ಗಂಗಾಧರ್ ಮೇನಾಲ ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕ ಉಪಾಧ್ಯಕ್ಷ ಭವಾನಿಶಂಕರ್ ಕಲ್ಮಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಯುವ ಕಾಂಗ್ರೆಸ್ ಮುಖಂಡ ಚೇತನ್ ಕಜೆಗದ್ದೆ ವಂದಿಸಿದರು.