ಸುಳ್ಯದ ಇಂದಿರಾ ಕ್ಯಾಂಟೀನ್ ನಲ್ಲಿ ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾಜಿ ಪ್ರಧಾನಿ ಉಕ್ಕಿನಮಹಿಳೆ ದಿl ಇಂದಿರಾ ಗಾಂಧೀಯವರ 107ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ, ಸಹಕಾರಿ ಧುರೀಣ ಪಿ ಸಿ ಜಯರಾಮ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಇಂದಿರಾ ಗಾಂಧೀಜಿಯವರು ಮಾಜಿ ಪ್ರಧಾನಿಯಾಗಿ ದೇಶದ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆಗೆ ಕ್ರಾಂತಿಕಾರಿ ಯೋಜನೆಗಳನ್ನು ತಂದವರು. ಇಂದಿರಾ ಗಾಂಧಿಯವರ ಹೆಸರನ್ನು ಸ್ಮರಣೆ ಮಾಡಬೇಕಿರುವುದು ದೇಶದ ಪ್ರಜೆಗಳಾದ ನಮ್ಮ ಕರ್ತವ್ಯ, ರಾಜ್ಯಸರಕಾರ ಇಂದಿರಾ ಕ್ಯಾಂಟೀನ್ ತೆರೆಯುವ ಮೂಲಕ ಬಡಜನತೆ ಹಸಿವಿನಿಂದ ಇರಬಾರದು ಎಂಬ ಉದ್ದೇಶವನ್ನು ಕಾರ್ಯಗತ ಗೊಳಿಸಿದ್ದಾರೆ. ಆ ಮೂಲಕ ಸಾಮಾಜಿಕ ಬದ್ಧತೆಯನ್ನು ಎತ್ತಿ ಹಿಡಿಯಲಾಗಿದೆ. ವಿದ್ಯಾರ್ಥಿಗಳು, ಮತ್ತು ನಾಗರಿಕರು ಇಂದಿರಾ ಗಾಂಧಿಯವರನ್ನು ಅರಿತುಕೊಂಡು ಸ್ಮರಿಸಿಕೊಳ್ಳಬೇಕಿದೆ ಎಂದು ಹೇಳಿದರು. ನಗರ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಎಂ ವೆಂಕಪ್ಪ ಗೌಡ ಮಾತನಾಡಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ದೇಶವನ್ನು ಅಭಿವೃದ್ಧಿಯತ್ತ ಕೊಂಡೋಯ್ಯುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಇಂದಿರಾ ಗಾಂಧಿಯವರು ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡುವ ಮೂಲಕ ಬಡವರಿಗೆ ಬ್ಯಾಂಕಿನಲ್ಲಿ ವ್ಯವಹಾರ ನಡೆಸುವಂತೆ ಮಾಡಿದ್ದಾರೆ. ಉಳುವವನೆ ಹೊಲದೊಡೆಯ ಯೋಜನೆಯ ಮೂಲಕ ಲಕ್ಷಾಂತರ ಬಡವರನ್ನು ಜಮೀನುಧಾರಾರಾಗಿ ಮಾಡಿದ್ದಾರೆ. ಇಂದಿನ ಯುವ ಜನತೆಗೆ ಇಂದಿರಾ ಗಾಂಧಿಯವರ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.
ಚೊಕ್ಕಾಡಿ ವಿದ್ಯಾಸಂಸ್ಥೆಗಳ ಸಂಚಾಲಕ ರಾಧಾಕೃಷ್ಣ ಬೊಳ್ಳೂರು ಮಾತನಾಡಿ ದಿ. ಇಂದಿರಾ ಗಾಂಧೀಯವರು ಸಮ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟವರು, ದೇಶದ ಏಳಿಗೆಗೆ ಕೃಷಿಗೆ ಒತ್ತು ಕೊಟ್ಟು , ಬ್ರಹತ್ ಕೈಗಾರಿಕೆಗಳನ್ನು ಸ್ಥಾಪೀಸುವ ಮೂಲಕ ಮತ್ತು ದೇಶದ ರಕ್ಷಣಗೆ ಅಣ್ವಸ್ತ್ರ ಗಳ ಪರೀಕ್ಷೆ ಧೈರ್ಯದಿಂದ ನಡೆಸಿ ಸೈ ಎನಿಸಿಕೊಂಡವರು. ಬಾಂಗ್ಲಾ ವಿಮೋಚನೆಯನ್ನು ಮಾಡಿ ನೆರೆ ರಾಷ್ಟ್ರಕ್ಕೆ ಸ್ವಾತಂತ್ರ್ಯ ಕೊಟ್ಟವರು ಎಂದು ಸ್ಮರಿಸಿದರು. ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ಸದಸ್ಯ ಭವಾನಿಶಂಕರ್ ಕಲ್ಮಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಟ್ರಸ್ಟ್ ಕಾರ್ಯಧ್ಯಕ್ಷ ಗೋಕುಲ್ ದಾಸ್ ಸುಳ್ಯ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಶ್ರೀಮತಿ ಗೀತಾ ಕೋಲ್ಚಾರ್, ಸತ್ಯಕುಮಾರ್ ಆಡಿಂಜಾ, ಡೇವಿಡ್ ಧೀರಾ ಕ್ರಾಸ್ತ, ರಾಜು ಪಂಡಿತ್, ನಂದರಾಜ್ ಸಂಕೇಶ್, ಧನುಷ್ ಕುಕ್ಕೇಟಿ, ಶಹೀದ್ ಪಾರೆ, ಮಹೇಶ್ ಬೆಳ್ಳಾರ್ಕರ್, ಕೇಶವ ಮೊರಂಗಲ್ಲು, ಮಧುಸೂಧನ ಬೂಡು, ಮಂಜುನಾಥ್ ಮಡ್ತಿಲ, ಜುಬೆರ್ ಅರಂತೋಡು, ಚಂದ್ರಶೇಖರ ಕೋಲ್ಚಾರ್, ವಿದ್ಯಾರ್ಥಿಗಳು ಮತ್ತು ಗ್ರಾಹಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇಂದಿರಾ ಕ್ಯಾಂಟೀನ್ ನ ಗ್ರಾಹಕರಿಗೆ ಎಲ್ಲರಿಗೂ ಉಚಿತವಾಗಿ ಮಧ್ಯಾಹ್ನದ ಭೋಜನ ನೀಡಲಾಯಿತು.