ನಾಪತ್ತೆಯಾಗಿದ್ದ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ದಿ| ಶಾಂತಪ್ಪ ಗೌಡ ಅವರ ಪುತ್ರ ಸಂದೀಪ್ ಗೌಡ (29) ಅವರ ಮೃತದೇಹ ನೆಟ್ಟಣ ರೈಲು ನಿಲ್ದಾಣದಿಂದ ಸಮೀಪ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಸೋಮವಾರ ಸಂಜೆ ಪತ್ತೆಯಾಗಿದೆ.
ಆತನನ್ನು ಅವನ ಮಿತ್ರ ನೆಟ್ಟಣ ನಿವಾಸಿ ಪ್ರತೀಕ್ ಎಂಬಾತನು ನೆಟ್ಟಣ ರೈಲು ನಿಲ್ದಾಣದ ಬಳಿಯ ಗುಡ್ಡದಲ್ಲಿ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆಗೈದು ಶವವನ್ನು ಕಾಡಿನೊಳಗೆ ಕೊಂಡೊಯ್ದು ಸುಟ್ಟುಹಾಕಲು ಯತ್ನಿಸಿರುವುದು ತನಿಖೆಯಿಂದ ತಿಳಿದು ಬಂದಿದೆ.
ಸಂದೀಪ್ ಮರ್ದಾಳದಲ್ಲಿ ವಿನಯ ಎಂಬವರೊಂದಿಗೆ ಶಾಮಿಯಾನ ಹಾಕುವ ಕೆಲಸ ಮಾಡುತ್ತಿದ್ದು, ನ. 27 ರಂದು ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೋದವನು ನಾಪತ್ತೆಯಾಗಿದ್ದ. ಆತ ಕೆಲಸ ಮುಗಿಸಿ ಪ್ರತೀಕ್ ಜತೆಗೆ ಕಾರಿನಲ್ಲಿ ಹೋಗಿರುವುದಾಗಿ ತಾಯಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತೀಕ್ ಹಾಗೂ ಇನ್ನೋರ್ವನನ್ನು ಪೊಲೀಸರು ನ. 1ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.ಇದರಿಂದ ಕೊಲೆಯ ರಹಸ್ಯ ಬಯಲಾಯಿತು.
ಆರೋಪಿಯನ್ನು ನಮ್ಮ ವಶಕ್ಕೆ ನೀಡಿ ಎಂದು ಸ್ಥಳೀಯರು ಪೊಲೀಸ್ ವಾಹನವನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಕೊಲೆಗೈದು ಮೃತದೇಹವನ್ನು ಕಾಡಿಗೆ ಸಾಗಿಸಲು ಒಬ್ಬನೇ ವ್ಯಕ್ತಿಗೆ ಸಾಧ್ಯವಿಲ್ಲ. ಕೃತ್ಯದಲ್ಲಿ ಇನ್ನೂ ಹಲವು ಮಂದಿ ಭಾಗಿಯಾಗಿರುವ ಸಾಧ್ಯತೆಗಳಿದ್ದು, ಎಲ್ಲರನ್ನೂ ಕೂಡಲೇ ಬಂಧಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ನಾಪತ್ತೆಯಾಗಿದ್ದ ಸಂದೀಪ್ ಗೌಡನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ
