ಬೆಳ್ತಂಗಡಿ : ಮನೆಯಿಂದ ಕಂಪ್ಯೂಟರ್ ಕ್ಲಾಸ್ ಗೆಂದು ತೆರಳಿದ ಮುಸ್ಲಿಂ ಯುವತಿ ಹಿಂದೂ ಯುವಕನನ್ನು ವಿವಾಹವಾಗಿ ಠಾಣೆಗೆ ಹಾಜರಾದ ಘಟನೆ ಧರ್ಮಸ್ಥಳದಿಂದ ವರದಿಯಾಗಿದೆ.
ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಬೂದನ ಗೌಡ ಅವರ ಮಗ ಕೃಷಿಕ ಹರೀಶ್ ಗೌಡ (24 ವರ್ಷ) ಹಾಗೂ ಮೂಡಬಿದ್ರೆಯ ನೆಲ್ಲಿಕಾರಿನ ಯುವತಿ ಸುಹಾನ (19) ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಯುವ ಜೋಡಿಯಾಗಿದೆ. ಹಿಂದೂ ಸಂಪ್ರದಾಯದಂತೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕುನ್ನೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ಜ 8ರಂದು ವಿವಾಹ ನಡೆದಿದೆ.
ಈ ವಿವಾಹಕ್ಕೆ ವರನ ಮನೆಯವರ ಒಪ್ಪಿಗೆ ಇದ್ದು .ಹರೀಶ್ ಮನೆಯವರು ವಿವಾಹ ಕಾರ್ಯಕ್ರಮದಲ್ಲಿ ಸಂತೋಷದಲ್ಲಿ ಪಾಲ್ಗೊಂಡಿದ್ದರು. ವಧು ವರರು ದೇವಸ್ಥಾನದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡು ಮಾಂಗಲ್ಯಧಾರಣೆ ಮಾಡಿರುವುದಾಗಿ ತಿಳಿದು ಬಂದಿದೆ.
ಯುವತಿಯ ಮನೆಯವರು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ನವದಂಪತಿಗಳು ಮದುವೆಯಾಗಿ ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ ಹೇಳಿಕೆ ನೀಡಿದ್ದಾರೆ.