ಜಿಪಂ, ತಾಪಂ ಚುನಾವಣೆ ನಡೆದಿಲ್ಲ. ಮೀಸಲಾತಿ ಅಂತಿಮ ಪಟ್ಟಿ ಕೈಸೇರುತ್ತಿದ್ದಂತೆ ವೇಳಾಪಟ್ಟಿ ಪ್ರಕಟಿಸಲಾಗುವುದು. ಏಪ್ರಿಲ್ ಅಥವಾ ಮೇನಲ್ಲಿ ಚುನಾವಣೆ ನಿಗದಿ ಮಾಡುತ್ತೇವೆ ಎಂದು ರಾಜ್ಯ ಚುನಾವಣೆ ಆಯುಕ್ತ ಜಿ.ಎಸ್.ಸಂಗ್ರೇಶಿ ಹೇಳಿದರು. ಬೆಳಗಾವಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅವರು ಮಾತನಾಡಿ, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವ ಪ್ರಯತ್ನ ಮಾಡುತ್ತೇವೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಜತೆ ಸಭೆ ಮಾಡಿದ್ದೇವೆ. ಸಂಬಂಧಪಟ್ಟ ರಾಜಕೀಯ ಪಕ್ಷಗಳ ಜತೆಗೆ ಸಭೆ ಮಾಡಿದ ಬಳಿಕ ತೀರ್ಮಾನ ಮಾಡುತ್ತೇವೆ ಎಂದರು. ಇತ್ತೀಚೆಗೆ ಚುನಾವಣೆಗಳ ಫಲಿತಾಂಶದ ನಂತರ ಇವಿಎಂ ಕಾರ್ಯನಿರ್ವಹಣೆ ಬಗ್ಗೆ ಹಲವು ಪಕ್ಷಗಳು ಆಕ್ಷೇಪ ಎತ್ತಿದ್ದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಪರೀಕ್ಷೆಗೆ ಒಳಪಟ್ಟಿದೆ ಎಂದರು. ಪ್ರಸ್ತುತ ಚುನಾವಣೆಗಳು ಬಹಳ ಕಲುಷಿತವಾಗಿದ್ದು, ಹಣ, ಹೆಂಡದ ಮೇಲೆ ಚುನಾವಣೆ ನಡೆಯಬಾರದು. ಮತದಾರರು ಹಣ ಪಡೆದುಕೊಂಡು ಮತ ಚಲಾಯಿಸುವುದು ನಿಲ್ಲಬೇಕು. ಆ ನಿಟ್ಟಿನಲ್ಲಿ ನಿರಂತರ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.