ನೆರೆ ಮನೆಯ ಕೋಳಿ ಮುಂಜಾನೆ 3 ಗಂಟೆಗೆ ಕೂಗಿ ತಮ್ಮ ನಿದ್ರೆಗೆ ಭಂಗ ತರುತ್ತಿದೆ ಎಂದು ಅದರ ವಿರುದ್ಧ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಕೇರಳದ ಪಥನಾಂತಿಟ್ಟ ಪ್ರದೇಶದ ಪಲ್ಲಿಕಲ್ ನಲ್ಲಿ ನಡೆದಿದೆ.
ದೂರು ದಾಖಲಾದ ಬೆನ್ನಲ್ಲೇ ಆ ಊರಿನಲ್ಲಿ ಗಲಾಟೆ ಭುಗಿಲೆದ್ದಿದೆ. ರಾಧಾಕೃಷ್ಣ ಕುರುಪ್ ಎಂಬ ವೃದ್ಧನಿಗೆ ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಬೆಳಗಿನ ಜಾವದಲ್ಲಿ ಇನ್ನೇನು ನಿದ್ರೆ ಹತ್ತುತ್ತಿದೆ ಎನ್ನುವಾಗ ದಿನವೂ ಬೆಳಗಿನ ಜಾವವೇ ಕೂಗಿ ತನ್ನ ಶಾಂತಿಯುತ ನಿದ್ರೆಗೆ ಭಂಗ ತರುತ್ತಿರುವ ಕೋಳಿಯ ಬಗ್ಗೆ ದೂರು ದಾಖಲಿಸಿದ್ದಾರೆ.
ಪ್ರತಿನಿತ್ಯ ಮುಂಜಾನೆ 3 ಗಂಟೆಗೆ ಕುರುಪ್ ಅವರ ನೆರೆಯವರ ಕೋಳಿ ನಿರಂತರವಾಗಿ ಕೂಗಲು ಪ್ರಾರಂಭಿಸುತ್ತದೆ. ಅದು ಅವರ ನಿದ್ರೆಗೆ ತೊಂದರೆ ಮಾಡುತ್ತಿದೆ ಮತ್ತು ಶಾಂತಿಯುತ ಜೀವನವನ್ನು ಅಡ್ಡಿಪಡಿಸುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರಾಧಾಕೃಷ್ಣ ಕುರುಪ್ ಅವರಿಗೆ ಸಾಕಾಗಿತ್ತು. ತನ್ನ ನೆರೆಮನೆಯ ಅನಿಲ್ ಕುಮಾರ್ ಎಂಬುವವರ ಕೋಳಿ ತನ್ನ ನಿದ್ರೆಗೆ ಭಂಗ ತರುತ್ತಿದೆ ಎಂದು ಆರೋಪಿಸಿದ್ದಾರೆ.
ಅಧಿಕಾರಿಗಳು ಈ ದೂರನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಆರಂಭಿಸಿದರು. ಅಧಿಕಾರಿಗಳು ಆ ಸ್ಥಳವನ್ನು ಪರಿಶೀಲಿಸಿದಾಗ ನೆರೆಹೊರೆಯವರು ತಮ್ಮ ಕೋಳಿಗಳನ್ನು ತಮ್ಮ ಮನೆಯ ಮೇಲಿನ ಮಹಡಿಯಲ್ಲಿ ಇಟ್ಟುಕೊಂಡಿರುವುದು ಕಂಡುಬಂದಿದೆ. ರಾಧಾಕೃಷ್ಣ ಕುರುಪ್ ಅವರಿಗೆ ಕೋಳಿಯ ಕೂಗುವಿಕೆಯಿಂದ ನಿಜಕ್ಕೂ ತೊಂದರೆಯಾಗುತ್ತಿತ್ತು ಎಂದು ತನಿಖೆ ಮೂಲಕ ತಿಳಿದುಬಂದಿದೆ. ವಿವಾದವನ್ನು ಬಗೆಹರಿಸಲು ಕೋಳಿ ಶೆಡ್ ಅನ್ನು ಮೇಲಿನ ಮಹಡಿಯಿಂದ ಮನೆಯ ಅಂಗಳದ ಪಕ್ಕಕ್ಕೆ ಸ್ಥಳಾಂತರಿಸುವಂತೆ ಅಧಿಕಾರಿಗಳು ರಾಧಾಕೃಷ್ಣ ಅವರ ನೆರೆಹೊರೆಯವರಿಗೆ ಸೂಚನೆ ನೀಡಿದ್ದಾರೆ.