ಮಡಿಕೇರಿ : ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ‘ಅರೆಭಾಷೆ ‘ಅಧ್ಯಯನ ಪೀಠ’ವು ಈಗಾಗಲೇ ಆರಂಭವಾಗಿದ್ದು, ಅರೆಭಾಷೆಯ ಹಲವು ಚಟುವಟಿಕೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸರ್ಕಾರ 5 ಕೋಟಿ ರೂ ಬಿಡುಗಡೆ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು ಒತ್ತಾಯಿಸಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕುಶಾಲನಗರ, ಆಲೂರು ಸಿದ್ದಾಪುರ, ಸುಂಟಿಕೊಪ್ಪ, ಗುಡ್ಡೆಹೊಸೂರು, ನಂಜರಾಯಪಟ್ಟಣ, ಚೆಟ್ಟಳ್ಳಿ, ಪಿರಿಯಾಪಟ್ಟಣ, ಸೋಮವಾರಪೇಟೆ ಹಾಗೂ ಯಡವಾರೆ ಗೌಡ ಸಮಾಜಗಳ ಸಹಕಾರದಲ್ಲಿ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಭಾನುವಾರ ನಡೆದ ‘ಅರೆಭಾಷೆ ಗಡಿನಾಡ ಉತ್ಸವ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅರೆಭಾಷೆಯು ಸ್ವತಂತ್ರ ಭಾಷೆಯಾಗಿದ್ದು, ತನ್ನದೇ ಆದ ಆಸ್ಮಿತೆ ಹೊಂದಿದೆ. ಆದ್ದರಿಂದ ಅರೆಭಾಷೆ ಮಾತನಾಡುವವರ ನಿಖರ ಜನಸಂಖ್ಯೆ ಹಾಗೂ ಸ್ಥಳನಾಮಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತಾಗಬೇಕು ಎಂದು ಡಾ.ಪುರುಷೋತ್ತಮ ಬಿಳಿಮಲೆ ಅವರು ಸಲಹೆ ಮಾಡಿದರು.
ಅರೆಭಾಷೆ, ಕೊಡವ ಸೇರಿದಂತೆ ಹಲವು ಸಣ್ಣ ಸಣ್ಣ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ನುಡಿದರು.
ಸಂವಿಧಾನದ 8 ನೇ ಪರಿಚ್ಛೇದದಲ್ಲಿ 22 ಭಾಷೆಗಳಿದ್ದು, ಅದರಲ್ಲಿ 18 ಭಾಷೆಗಳು ಉತ್ತರ ಭಾರತದ್ದಾಗಿವೆ. ದಕ್ಷಿಣ ಭಾರತದಲ್ಲಿಯೂ ಕನ್ನಡ, ತಮಿಳು, ತೆಲುಗು, ಮಲೆಯಾಳ, ಕೊಂಕಣಿ, ತುಳು, ಕೊಡವ, ಅರೆಭಾಷೆ ಜೊತೆಗೆ ಆದಿವಾಸಿಗಳು ಮಾತನಾಡುವ ಹಲವು ಭಾಷೆಗಳಿವೆ ಎಂದರು.
ರಾಷ್ಟ್ರದಲ್ಲಿ 19,250 ಹೆಚ್ಚು ತಾಯಿ ನುಡಿ ಭಾಷೆಗಳಿವೆ, ಹಾಗೆಯೇ ರಾಜ್ಯದಲ್ಲಿ 230 ಕ್ಕೂ ಹೆಚ್ಚು ಸಣ್ಣ ಭಾಷೆಗಳು ಇದ್ದು, ಇವುಗಳನ್ನು ಉಳಿಸಬೇಕು. ಮುಂದಿನ 30 ವರ್ಷದಲ್ಲಿ 172 ಕ್ಕೂ ಹೆಚ್ಚು ಸಣ್ಣ ಭಾಷೆಗಳು ನಶಿಸುವ ಬಗ್ಗೆ ಮಾಹಿತಿ ಇದೆ ಡಾ.ಪುರುಷೋತ್ತಮ ಬಿಳಿಮಲೆ ಅವರು ಆತಂಕ ವ್ಯಕ್ತಪಡಿದರು.
ರಾಷ್ಟ್ರದಲ್ಲಿ ಹಿಂದಿ ಭಾಷೆ ಮಾತನಾಡುವವರ ಸಂಖ್ಯೆ ಶೇ.66 ಕ್ಕೂ ಹೆಚ್ಚು ವೇಗವಾಗಿ ಬೆಳವಣಿಗೆ ಆಗುತ್ತಿದೆ. ಆದರೆ ಅರೆಭಾಷೆ, ಕೊಡವ, ಯರವ ಭಾಷೆ ಮಾತನಾಡುವವರ ಸಂಖ್ಯೆ ಕಡಿಮೆ ಆಗುತ್ತಿರುವ ಬಗ್ಗೆ ಅಂಕಿ ಅಂಶಗಳು ಹೇಳುತ್ತಿವೆ. ಆದ್ದರಿಂದ ಸಣ್ಣ ಸಣ್ಣ ಭಾಷೆ ಮಾತನಾಡಬೇಕು. ಮಾತೃ ಭಾಷೆ ಉಳಿಸಬೇಕು. ಇದು ಒಂದು ರೀತಿ ದೊಡ್ಡ ಸವಾಲು ಆಗಿದೆ ಎಂದರು.
ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಪುನರ್ ಕಾರ್ಯವು ನಡೆಯುವ ಬಗ್ಗೆ ಚರ್ಚೆ ನಡೆದಿದೆ. ಇದರಿಂದಾಗಿ ದಕ್ಷಿಣ ರಾಜ್ಯಗಳಿಗೆ ಯಾವ ರೀತಿಯ ನ್ಯಾಯ ಸಿಗಲಿದೆ ಎಂಬುದನ್ನು ಗಮನಿಸಬೇಕಿದೆ ಎಂದು ಡಾ.ಪುರುಷೋತ್ತಮ ಬಿಳಿಮಲೆ ಅವರು ತಿಳಿಸಿದರು.
ಇತ್ತೀಚೆಗೆ ಹೊಸ ವಿವಿ ಮುಚ್ಚುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆಧುನಿಕ ಯುಗದಲ್ಲಿ ಸ್ಪರ್ಧೆ ಅನಿವಾರ್ಯ, ಆ ನಿಟ್ಟಿನಲ್ಲಿ ಕೌಶಲ್ಯ ಹೆಚ್ಚಿಸಿಕೊಳ್ಳುವತ್ತ ಎಲ್ಲರೂ ಗಮನಹರಿಸಬೇಕು. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಎದುರಿಸಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸಲಹೆ ಮಾಡಿದರು.
ಮುಂದಿನ ದಿನಗಳಲ್ಲಿ ಪ್ರಾಥಮಿಕ ಶಾಲೆಗಳ ಸ್ಥಿತಿಗತಿ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸಬೇಕಿದೆ. ಒಂದು ಕಡೆ ಸರ್ಕಾರಿ ಶಾಲೆ ಮುಚ್ಚುವುದು, ಮತ್ತೊಂದು ಕಡೆ ಇಂಗ್ಲಿಷ್ ಶಾಲೆ ಆರಂಭಿಸುವುದು ಕಂಡುಬರುತ್ತಿದೆ ಎಂದರು.
ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಅರೆಭಾಷೆ ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವಂತಾಗಬೇಕು. ಮುಂದಿನ ಪೀಳಿಗೆಗೆ ಅರೆಭಾಷೆ ಕಲಿಸಬೇಕು ಎಂದರು.
ಪ್ರತಿಯೊಬ್ಬರೂ ಅರೆಭಾಷೆ ಮಾತನಾಡುವ ಮೂಲಕ ಭಾಷೆ ಉಳಿಸಲು ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಭಾಷೆ ಬೆಳವಣಿಗೆಗೆ ಶ್ರಮಿಸಬೇಕು ಎಂದು ಡಾ.ಮಂತರ್ ಗೌಡ ಅವರು ಕರೆ ನೀಡಿದರು.
ವಿಧಾನಸಭಾ ಮಾಜಿ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಅರೆಭಾಷೆ ಎಲ್ಲೆಡೆ ಗಟ್ಟಿಯಾಗಿ ಬೆಳೆಯಬೇಕು, ಅರೆಭಾಷೆ ಮೂಲ ಸಂಸ್ಕೃತಿ ಉಳಿಯಬೇಕು ಮತ್ತು ಪಸರಿಸುವಂತಾಗಬೇಕು ಎಂದು ಕರೆ ನೀಡಿದರು.
ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಬೇಕು. ಅರೆಭಾಷೆ ಅಕಾಡೆಮಿ ಸ್ಥಾಪನೆಯಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅರೆಭಾಷೆ ಗುರಿತಿಸುವಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಮಾತನಾಡಿ ಅರೆಭಾಷೆ ಅಕಾಡೆಮಿ ವತಿಯಿಂದ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ವಿವಿಧ ಚಟುವಟಿಕೆ ಕೈಗೊಳ್ಳಲಾಗಿದೆ ಎಂದರು.
ಸಂಶೋಧನಾ ಹಾಗೂ ವಿವಿಧ ಅರೆಭಾಷೆ ಕೃತಿಗಳ ಪ್ರಕಟ, ಅರೆಭಾಷಿಕರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಗಡಿನಾಡ ಉತ್ಸವ, ಹಿಂಗಾರ ತ್ರೈಮಾಸಿಕ ಹೊತ್ತಿಗೆ ಹೀಗೆ ವಿವಿಧ ಕಾರ್ಯ ಚಟುವಟಿಕೆ ಮುಂದುವರೆಸಿಕೊಂಡು ಬರಲಾಗಿದೆ. ಮುಂದಿನ ವರ್ಷದಲ್ಲಿ ಅರೆಭಾಷೆ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು, ಹಿಂಗಾರ ತ್ರೈಮಾಸಿಕ ತರಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಚಂದಾದಾರರಾಗಬೇಕು ಎಂದರು.
ಅರೆಭಾಷಿಕರ ಜನಗಣತಿ ಹಾಗೂ ಸ್ಥಳನಾಮ ಸಂಬಂಧ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಸದಾನಂದ ಮಾವಜಿ ಅವರು ತಿಳಿಸಿದರು.
ಪಿರಿಯಾಪಟ್ಟಣ ಗೌಡ ಸಮಾಜದ ಅಶ್ವಿನಿಕುಮಾರ್ ಅವರು ಮಾತನಾಡಿದರು.
ಅಕಾಡೆಮಿ ಸದಸ್ಯರಾದ ಸೂದನ ಈರಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಕೊಪ್ಪ ಗೇಟ್ ಬಳಿ ತಾಯಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ ಅವರು ಚಾಲನೆ ನೀಡಿದರು.
ಮೆರವಣಿಗೆಯು ಕೊಪ್ಪ ಗೇಟ್ ಬಳಿಯಿಂದ ಕುಶಾಲನಗರ ಮುಖ್ಯ ರಸ್ತೆಯಲ್ಲಿ ಸಾಗಿ ಗಮನ ಸೆಳೆಯಿತು, ಅರೆಭಾಷೆ ಉಡುಪಿನಲ್ಲಿ ಹಲವರು ಪಾಲ್ಗೊಂಡು ಗಮನ ಸೆಳೆದರು.
ಭಾಗಮಂಡಲದ ಅಭಿನಯ ಕಲಾ ಮಿಲನ ಚಾರಿಟೇಬಲ್ ಟ್ರಸ್ಟ್, ಸುಳ್ಯದ ಅರೆಭಾಷೆ ಸಿರಿ ಸಂಸ್ಕೃತಿ, ಪ್ರಸ್ತುತಿ ಶಶಿಕಾಂತ್ ಮಿತ್ತೂರು ಹಾಗೂ ಸ್ಥಳೀಯ ತಂಡದವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು,
ವಿವಿಧ ಗೌಡ ಸಮಾಜದ ಅಧ್ಯಕ್ಷರಾದ ಚಿಲ್ಲನ ಗಣಿ ಪ್ರಸಾದ್, ದೇವಾಯಿರ ಗಿರೀಶ್, ಕುಂಜಿಲನ ಮಂಜುನಾಥ್, ಗುಡ್ಡೆಮನೆ ವಿಶುಕುಮಾರ್, ಬಾರನ ಭರತ್,
ಅಕಾಡೆಮಿ ಸದಸ್ಯರಾದ ಪೊನ್ನಚ್ಚನ ಮೋಹನ್, ಸಂದೀಪ್ ಪೂಳಕಂಡ, ಚಂದ್ರಶೇಖರ ಪೇರಾಲು, ತೇಜಕುಮಾರ್ ಕುಡಕಲ್ಲು, ನಿಡ್ಯಮಲೆ ಡಾ.ಜ್ಞಾನೇಶ್, ಚಂದ್ರಾವತಿ ಬಡ್ಡಡ್ಕ, ಪಿ.ಎಸ್.ಕಾರ್ಯಪ್ಪ, ಲತಾ ಪ್ರಸಾದ್ ಕುದ್ಪಾಜೆ, ಸೂದನ ಈರಪ್ಪ, ವಿನೋದ್ ಮೂಡಗದ್ದೆ, ಲೋಕೇಶ್ ಊರುಬೈಲು, ಕುದ್ಪಾಜೆ ಪ್ರಕಾಶ್, ರಿಜಿಸ್ಟ್ರಾರ್ ಚಿನ್ನಸ್ವಾಮಿ ಇತರರು ಇದ್ದರು.
ಅರೆಭಾಷೆಯ ಹಲವು ಚಟುವಟಿಕೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸರ್ಕಾರ 5 ಕೋಟಿ ರೂ ಬಿಡುಗಡೆ ಮಾಡಬೇಕು : ಪುರುಷೋತ್ತಮ ಬಿಳಿಮಲೆ
