ರಾಷ್ಟ್ರೀಯ ಹೆದ್ದಾರಿ 66ರ ಮಂಜೇಶ್ವರ ತಾಲೂಕಿನ ಹೊಸಂಗಡಿ ಹಳೆ ಚೆಕ್ ಪೋಸ್ಟ್ ಬಳಿ ಸೋಮವಾರ ರಾತ್ರಿ ಭೀಕರ ಕಾರು ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಸೇತುವೆಯ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪೈವಳಿಕೆ ಬಾಯಿಕಟ್ಟೆ ನಿವಾಸಿ ಜನಾರ್ದನ (ತಂದೆ) ಮತ್ತು ಅವರ ಇಬ್ಬರು ಪುತ್ರರಾದ ವರುಣ್, ಕೃಷ್ಣ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.
ನಾಲ್ಕನೇ ವ್ಯಕ್ತಿ ರತನ್ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರಯಾಣಿಕರು ಪೈವಳಿಕೆ ಬಾಯಿಕಟ್ಟೆಯಿಂದ ಮಂಗಳೂರಿನತ್ತ ಪ್ರಯಾಣಿಸುತ್ತಿದ್ದರು. ಅಪಘಾತದ ತೀವ್ರತೆಯಿಂದ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಗಾಯಗೊಂಡ ರತನ್ ಅವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ವೈದ್ಯಕೀಯ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಜೇಶ್ವರ : ಭೀಕರ ಕಾರು ಅಪಘಾತ ಮೂವರು ಸಾವು
