ಅಡಿಯಿಡಲು ಭುವಿಗೆ
ಸೇರಿದ್ದ ಎಲ್ಲರ ಚಿತ್ತದೊಳೊಂದೇ
ಪ್ರಶ್ನೆ ………….
ಹೆಣ್ಣೇ……………. ಗಂಡೇ..,………..
ಎಲ್ಲರ ಬಾಯಲ್ಲೂ ಒಂದೇ ಉತ್ತರ
ಹೆಣ್ಣು……………….ಹೆಣ್ಣು……………ಹೆಣ್ಣು
ದೇವರು ಕೊಟ್ಟದ್ದು ಎನ್ನುತ್ತಲೇ
ಅತ್ತ ಚದುರಿತು ಜನ ಸಮೂಹ
ಇತ್ತ ಒಡೆಯಿತು ಅಪ್ಪ-ಅಮ್ಮನ ಮನ
ಕೋಪಿಸಿದರು, ಶಪಿಸಿದರು, ಹಳಿದರು
ನಮ್ಮ ನಾಶ ಮಾಡಲೆಂದು ಬಂದೆಯಾ? ಎಂದರು.
ಆಡಿದೊಂದೂ ಮಾತು ತಿಳಿಯದೇ ಬದುಕಿದಳು
ದಿಟ್ಟತನದಿ ಮೆರೆದಳು
ಗಟ್ಟಿತನದಿ ಬೆಳೆದಳು
ಎಲ್ಲವನ್ನೂ ಸಹಿಸಿಕೊಂಡು ಜೀವನ ಕಟ್ಟಿಕೊಂಡಳು
ಆದರೂ ಸಮಾಜ ಹೇಳಿತ್ತು…………….
ಎಷ್ಟೆಂದರೂ ನೀನು ಹೆಣ್ಣು!………..
ಆಕಾಶದಲ್ಲಿ ಹಾರಬಲ್ಲಳು
ಸಮುದ್ರದಲ್ಲಿ ಈಜಾಡಬಲ್ಲಳು
ರಸ್ತೆಯಲ್ಲಿ ಓಡಾಡಬಲ್ಲಳು
ಎಲ್ಲಾ ಕ್ಷೇತ್ರದಲ್ಲೂ ಸೈ ಎನಿಸಿಕೊಂಡಳು
ಆದರೂ ಸಮಾಜ ಹೇಳಿತ್ತು…………….
ಎಷ್ಟೆಂದರೂ ನೀನು ಹೆಣ್ಣು!………..
ತೊಟ್ಟಿಲ ತೂಗುವ ಕೈಯಲ್ಲಿ ದೇಶವನ್ನಾಳಿದಳು
ರಾಕೆಟ್ಟಿನಲ್ಲಿ ಕೂತು ಆಕಾಶದೆತ್ತರಕ್ಕೆ ಚಿಮ್ಮಿದಳು
ಹಿಮಗಡ್ಡೆಗಳ ಲೆಕ್ಕಿಸದೇ ಶಿಖರವನ್ನೇರಿದಳು
ದೇಶ ರಕ್ಷಣೆಗಾಗಿ ಬಂದೂಕ ಹಿಡಿದಳು
ಆದರೂ ಸಮಾಜ ಹೇಳಿತ್ತು…………….
ಎಷ್ಟೆಂದರೂ ನೀನು ಹೆಣ್ಣು!………..
ಶೈಕ್ಷಣಿಕವಾಗಿ ಮುಂದೋಡಿದಳು
ರಾಜಕೀಯವಾಗಿ ಬೆಳೆದು ನಿಂತಳು
ಸಾಮಾಜಿಕವಾಗಿ ಸಂಘಟನೆಗಿಳಿದಳು
ವೈಜ್ಞಾನಿಕವಾಗಿ ಆವಿಷ್ಕಾರಕ್ಕೆ ತೊಡಗಿದಳು
ಆದರೂ ಸಮಾಜ ಹೇಳಿತ್ತು…………….
ಎಷ್ಟೆಂದರೂ ನೀನು ಹೆಣ್ಣು!………..
ಅಪ್ಪ ಅಮ್ಮನ ಮುದ್ದಿನ ಮಗಳಾದಳು
ಗಂಡನ ಪ್ರೀತಿಯ ಮಡದಿಯಾದಳು
ಮಕ್ಕಳ ಮಮತೆಯ ತಾಯಿಯಾದಳು
ಸಂಸಾರ ನೌಕೆಯ ಸರಾಗವಾಗಿ ಎಳೆದಳು
ಆದರೂ ಸಮಾಜ ಹೇಳಿತ್ತು…………….
ಎಷ್ಟೆಂದರೂ ನೀನು ಹೆಣ್ಣು!………..
ಕಷ್ಟ ಕೋಟಲೆಗಳ ಮೆಟ್ಟಿ ನಿಂತಳು
ಅತ್ಯಾಚಾರದ ಸುಳಿಗೆ ಸಿಲುಕಿದಳು
ಆದರೂ ಸಾಧನೆಯ ಮೆಟ್ಟಿಲೇರಿದಳು
ಪ್ರಶಸ್ತಿ ಪುರಸ್ಕಾರಗಳ ಬಾಚಿಕೊಂಡಳು
ಆದರೂ ಸಮಾಜ ಹೇಳಿತ್ತು…………….
ಎಷ್ಟೆಂದರೂ ನೀನು ಹೆಣ್ಣು!………..
ಮುಂದೋಡಿದಾಗ ಹಿಂದೆ ಎಳೆದರು
ಭವಿಷ್ಯವನ್ನೇ ಚಿವುಟ ಹೊರಟರು
ಹಿಂದಿನಿಂದಲೇ ಆಡತೊಡಗಿದರು
ಸಮಸ್ಯೆಗಳ ಸುಳಿಯೊಳಗೆ ಸಿಕ್ಕಾಗ ನಕ್ಕು ನುಡಿದರು
ಎಷ್ಟೆಂದರೂ ನೀನು ಹೆಣ್ಣು!………..
ಹೆಣ್ಣೇ ಇನ್ನೊಂದು ಹೆಣ್ಣನ್ನು ಸಹಿಸದಾಯಿತು
ಹೆಣ್ಣೇ ಇನ್ನೊಂದು ಹೆಣ್ಣಿನ ಕಣ್ಣೀರಿಗೆ ಕಾರಣವಾಯಿತು
“ಹೆಣ್ಣಿಗೆ ಹೆಣ್ಣೇ ಶತ್ರು” ಎಂಬ ಮನುವಿನ ಮಾತು ನಿಜವಾಯಿತು
ಸಮಾಜ ನಕ್ಕು ಹೇಳಿತ್ತು…………….
ಎಷ್ಟೆಂದರೂ ನೀನು ಹೆಣ್ಣು!………..
ಬೇಕಿಲ್ಲ ಹೆಣ್ಣಿಗೆ ಸಮಾನತೆ…………..
ಬೇಕಿಲ್ಲ ಹೆಣ್ಣಿಗೆ ಮೀಸಲಾತಿ..,……..
ಬೇಕಿಲ್ಲ ಹೆಣ್ಣಿಗೆ ಪೂಜಾನೀಯ ಸ್ಥಾನ …………
ಬೇಕಿಲ್ಲ ಹೆಣ್ಣಿಗೆ ಆಸ್ತಿ ಅಂತಸ್ತು……….
ಬದಲಾಗಬೇಕಿದೆ ಅವಳನ್ನು ನೋಡುವ ದೃಷ್ಟಿಕೋನ
ಬೇಕಿದೆ ಅವಳನ್ನು ಮನುಷ್ಯಳಾಗಿ ನೋಡುವ ಮನ
✍️ಡಾ. ಅನುರಾಧಾ ಕುರುಂಜಿ
.