ವಾಷಿಂಗ್ಟನ್: ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಮತ್ತು ಪರಮಾಣು ಕಾರ್ಯಕ್ರಮದ ಬಗ್ಗೆ ಅಮೆರಿಕದ ಜೊತೆ ಮಾತುಕತೆಗೆ ಒಪ್ಪದಿದ್ದರೆ ಇರಾನ್ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಬೆದರಿಕೆ ಹಾಕಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಯುಎಸ್ ಮತ್ತು ಇರಾನಿನ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ ಎಂದು ದೃಢಪಡಿಸಿದರು.ಈ ಬಗ್ಗೆ ಅಂತಿಮ ಎಚ್ಚರಿಕೆಯ ಸಂದೇಶ ರವಾನಿಸಿದ ಟ್ರಂಪ್, “ಅವರು ಒಪ್ಪಂದ ಮಾಡಿಕೊಳ್ಳದಿದ್ದರೆ, ಬಾಂಬ್ ದಾಳಿ ನಡೆಸಬೇಕಾಗುತ್ತದೆ. ಅವರು ಹಿಂದೆಂದೂ ನೋಡಿರದ ರೀತಿಯಲ್ಲಿ ಅವರ ಮೇಲೆ ಬಾಂಬ್ ದಾಳಿ ನಡೆಸುತ್ತೇವೆ.” ಎಂದು ಬೆದರಿಕೆ ಹಾಕಿದ್ದಾರೆ. ಇರಾನ್ ಮೇಲೆ “ದ್ವಿತೀಯ ಸುಂಕ” ವಿಧಿಸುವುದಾಗಿಯೂ ಅವರು ಎಚ್ಚರಿಸಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಂದ ಪತ್ರ ಬಂದ ನಂತರ ಇರಾನ್ ಅಮೆರಿಕದೊಂದಿಗೆ ನೇರ ಮಾತುಕತೆ ನಡೆಸಲು ನಿರಾಕರಿಸಿತು. ದೇಶವು ತನ್ನ ಪರಮಾಣು ಕಾರ್ಯಕ್ರಮದ ಬಗ್ಗೆ ಅಮೆರಿಕದೊಂದಿಗೆ ನೇರವಾಗಿ ಮಾತುಕತೆ ನಡೆಸುವುದಿಲ್ಲ ಎಂದು ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಹೇಳಿದರು. ನೇರ ಮಾತುಕತೆಗಳನ್ನು ಇರಾನ್ ತಿರಸ್ಕರಿಸಿದರೂ, ಅಮೆರಿಕದೊಂದಿಗೆ ಪರೋಕ್ಷ ಮಾತುಕತೆಗಳ ಸಾಧ್ಯತೆಯನ್ನು ಅವರು ತಳ್ಳಿಹಾಕಿಲ್ಲ.
ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ; ಇರಾನ್‌ಗೆ ಟ್ರಂಪ್ ಬೆದರಿಕೆ
