ಬೆಂಗಳೂರು: ವಿದ್ಯುತ್ ಹಾಗೂ ಹಾಲಿನ ದರ ಏರಿಕೆ ಮತ್ತು ಮುದ್ರಾಂಕ ಶುಲ್ಕಗಳ ಹೆಚ್ಚಳದ ಬೆನ್ನಲ್ಲೇ ಡೀಸೆಲ್ ಬೆಲೆಯೂ ಹೆಚ್ಚಾಗಿದ್ದು ಏಪ್ರಿಲ್ 1ರ ಮಂಗಳವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಏರುಗತಿಯಲ್ಲಿ ಸಾಗಿರುವ ತೆರಿಗೆ ಹೇರಿಕೆಯ ಭಾರ ಇದೀಗ ಡೀಸೆಲ್ ಮಾರಾಟದ ಮೇಲೂ ಬಿದ್ದಿದ್ದು ಶೇ.18.44ರಷ್ಟಿದ್ದ ಮಾರಾಟ ತೆರಿಗೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಶೇ.21.17ಕ್ಕೆ ಏರಿಸಿದೆ. ತತ್ಪರಿಣಾಮ ಡೀಸೆಲ್ ದರ ಸರಾಸರಿ 2 ರೂ. ಹೆಚ್ಚಳವಾಗಿದೆ. ಪ್ರಸ್ತುತ 88.99 ರೂ. ಇರುವ ಪ್ರತಿ ಲೀಟರ್ ಡೀಸೆಲ್ (ಎಚ್ ಎಸ್‌ಡಿ) ಬೆಲೆಯು 91.02 ರೂ. ಆದಂತಾಗಿದೆ.
ಈಗಾಗಲೇ ಬೆಲೆಯಬ್ಬರದ ಸರಣಿಯಿಂದ ಜನರು ಬಸವಳಿದಿದ್ದು ಒಂದರ ಹಿಂದೆ ಮತ್ತೊಂದರಂತೆ ಅಗತ್ಯ ವಸ್ತುಗಳೂ ದುಬಾರಿ ಆಗಲಾರಂಭಿಸಿವೆ. ಡೀಸೆಲ್ ದರ ಏರಿಕೆಯ ಪರಿಣಾಮವಂತೂ ಬಹುತೇಕ ಎಲ್ಲ ವಿಧದ ವಾಹನಗಳ ಮೇಲೂ ಬೀರಲಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆಯೇರಿಕೆಯ ಸರದಿಯೂ ಶುರುವಾಗಲಿದೆ ಎಂಬ ಆತಂಕ ಎಲ್ಲರಲ್ಲಿ ಮನೆ ಮಾಡಿದೆ
ರಾಜ್ಯದ ಜನತೆಗೆ ಮತ್ತೆ ಗಾಯದ ಮೇಲೆ ಬರೆ ಎಳೆದ ರಾಜ್ಯ ಸರಕಾರ, ಡಿಸೇಲ್ ಬೆಲೆ ಮತ್ತೆ ಏರಿಕೆ
