ನವದೆಹಲಿ : ಪ್ರತಿಪಕ್ಷಗಳ ಆಕ್ಷೇಪದ
ನಡುವೆಯೂ ಏ.02ರಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ವಕ್ಸ್ ತಿದ್ದುಪಡಿ ಮಸೂದೆ(2024)ಯನ್ನು ಮಂಡಿಸಿದ್ದಾರೆ.
ಲೋಕಸಭೆ ಕಲಾಪದ ಪ್ರಶೋತ್ತರ ವೇಳೆಯಲ್ಲಿ ಸಚಿವ ರಿಜಿಜು ಅವರು ವಕ್ಸ್ ತಿದ್ದುಪಡಿ ಮಸೂದೆಯನ್ನು ಮಂಡಿಸಿ, ಮಾತನಾಡಿ ಜಗತ್ತಿನ ಅತೀ ಹೆಚ್ಚು ವಕ್ಸ್ ಆಸ್ತಿ ಭಾರತದಲ್ಲಿದೆ. ಆದರೂ ಭಾರತದ ಮುಸ್ಲಿಮರು ಬಡವರಾಗಿದ್ದಾರೆ. ಆ ನಿಟ್ಟಿನಲ್ಲಿ ಆರ್ಥಿಕವಾಗಿ ಶ್ರೀಮಂತವಾಗಿರುವ ವಕ್ಸ್ ಮಂಡಳಿಯನ್ನು ಬಡ ಮುಸ್ಲಿಮರ ಏಳಿಗೆಗಾಗಿ ಬಳಸಲಾಗುವುದು ಎಂದು ತಿಳಿಸಿದ್ದಾರೆ.
ವಕ್ಸ್ ಕಾಯ್ದೆ ಸ್ವಾತಂತ್ರ್ಯಕ್ಕಿಂತಲೂ ಪೂರ್ವದಲ್ಲೇ ಚಾಲ್ತಿಯಲ್ಲಿತ್ತು. ವಕ್ಸ್ ಮಸೂದೆ ಹೊಸದೇನು ಅಲ್ಲ. 1913ರಲ್ಲೇ ಈ ಕಾಯ್ದೆಯನ್ನು ಅಂಗೀಕರಿಸಲಾಗಿತ್ತು. 1923ರಲ್ಲಿ ಮುಸಲ್ಮಾನ್ ವಕ್ಸ್ ಕಾಯ್ದೆ ಜಾರಿಯಾಗಿತ್ತು. ಸ್ವಾತಂತ್ರ್ಯ ನಂತರ 1954ರಲ್ಲಿ ವಕ್ಸ್ ಕಾಯ್ದೆಗೆ ರಾಜ್ಯ ವಕ್ಸ್ ಮಂಡಳಿಯನ್ನು ಸೇರ್ಪಡೆಗೊಳಿಸಲಾಗಿತ್ತು ಎಂದು ರಿಜಿಜು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಈ ಕಾನೂನು ಪಾರದರ್ಶಕವಾಗಿದೆ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ವಕ್ಸ್ ತಿದ್ದುಪಡಿ ಮಸೂದೆಯಿಂದ ಯಾವ ಮುಸ್ಲಿಮರು ತಮ್ಮ ಆಸ್ತಿಯನ್ನು ಕಳೆದುಕೊಳ್ಳುವುದಿಲ್ಲ. ಅದೇ ರೀತಿ ನೋಂದಾಯಿತ ಆಸ್ತಿಗೆ ಇದರಿಂದ ಯಾವ ತೊಂದರೆಯೂ ಇಲ್ಲ ಎಂದು ಹೇಳಿದರು.
ಸಚಿವ ಕಿರಣ್ ರಿಜಿಜು ವಕ್ಸ್ ತಿದ್ದುಪಡಿ ಮಸೂದೆ ಮಂಡಿಸಿ, ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ವೇಳೆ ವಿಪಕ್ಷ ಸದಸ್ಯರು ಭಾರೀ ಗದ್ದಲ ಎಬ್ಬಿಸಿದಾಗ ಸ್ಪೀಕರ್ ಬಿರ್ಲಾ ಅವರು, ಇದು ಲೋಕಸಭೆ ಕಲಾಪ, ಗೌರವದಿಂದ ನಡೆದುಕೊಳ್ಳಿ, ನಿಮಗೆ ಅವಕಾಶ ಕೊಟ್ಟಾಗ ಮಾತನಾಡಿ. ಅನಾವಶ್ಯಕವಾಗಿ ಗದ್ದಲ ನಡೆಸಬಾರದು ಎಂದು ಎಚ್ಚರಿಕೆ ನೀಡಿದ ಪ್ರಸಂಗ ನಡೆಯಿತು
ಪ್ರತಿಪಕ್ಷಗಳ ಭಾರೀ ಆಕ್ಷೇಪ,ಗದ್ದಲದ ನಡುವೆಯೂ, ವಕ್ಸ್ ತಿದ್ದುಪಡಿ ಮಸೂದೆ ಮಂಡನೆ
