ಕಾಸರಗೋಡು : ಮದ್ಯಪಾನ ಮಾಡಿ ಬಂದು ಅಂಗಡಿ ಮುಂದೆ ಗಲಾಟೆ ಮಾಡುತ್ತಿದ್ದಾನೆಂದು ದೂರು ನೀಡಿದ ಆಕ್ರೋಶದಲ್ಲಿ ವ್ಯಕ್ತಿಯೊಬ್ಬ ಆ್ಯಸಿಡ್ ಎರಚಿ ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿದ ಘಟನೆ ಕಾಸರಗೋಡು ಜಿಲ್ಲೆಯ ಬೇಡಡ್ಕ ಎಂಬಲ್ಲಿ ನಡೆದು ಮಹಿಳೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಎಪ್ರಿಲ್ 8ರಂದು ರಮಿತಾ (30) ಎಂಬ ಮಹಿಳೆ ಮೇಲೆ ಏಸಿಡ್ ಎರಚಿ ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ದೇಹದ ಭಾಗ ಸುಟ್ಟು ಹೋಗಿದ್ದರಿಂದ ಕೂಡಲೇ ಆಕೆಯನ್ನು ಕಾಞಂಗಾಡು ಸರಕಾರಿ ಆಸ್ಪತ್ರೆಗೆ ಒಯ್ಯಲಾಗಿತ್ತು. ಆನಂತರ ಮಂಗಳೂರಿನ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಹಿಳೆ ಎ.14ರಂದು ಮೃತಪಟ್ಟಿದ್ದಾರೆ.
ರಮಿತಾ ಬೇಡಡ್ಕದಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದರು. ಅದರ ಪಕ್ಕದಲ್ಲೇ ತಮಿಳುನಾಡು ಮೂಲದ ರಾಮಕೃತಮ್ (57) ಎಂಬ ವ್ಯಕ್ತಿ ಫರ್ನಿಚರ್ ಶಾಪ್ ಒಂದನ್ನು ನಡೆಸುತ್ತಿದ್ದ. ದಿನವೂ ಕುಡಿದು ಬಂದು ಗಲಾಟೆ ನಡೆಸುತ್ತಿದ್ದುದರಿಂದ ರಮಿತಾ ಕಟ್ಟಡದ ಮಾಲಕರಿಗೆ ದೂರು ನೀಡಿದ್ದಳು. ಇದರಿಂದ ಕಟ್ಟಡ ಮಾಲಕ ರಾಮಕೃತನಿಗೆ ಫರ್ನಿಚರ್ ಶಾಪ್ ತೆರವು ಮಾಡುವಂತೆ ಸೂಚಿಸಿದ್ದರು. ಇದರಿಂದ ಸಿಟ್ಟಿಗೆದ್ದ ರಾಮಕೃತ ಎಪ್ರಿಲ್ 8ರಂದು ಮತ್ತೆ ಕುಡಿದು ಬಂದು ಗಲಾಟೆ ಮಾಡಿದ್ದಲ್ಲದೆ, ಕೈಯಲ್ಲಿದ್ದ ಆ್ಯಸಿಡ್ ಬಾಟಲಿಯನ್ನು ಮಹಿಳೆ ರಮಿತಾ ಮೈಮೇಲೆ ಎರಚಿದ್ದಾನೆ. ಬಳಿಕ ಬೆಂಕಿ ಹಚ್ಚಿದ್ದು ಅಂಗಡಿಗೂ ಬೆಂಕಿ ತಗಲಿತ್ತು. ಈ ವೇಳೆ, ರಮಿತಾ ತೀವ್ರ ಸುಟ್ಟ ಗಾಯಕ್ಕೀಡಾಗಿದ್ದರೆ, ಆಕೆಯ ಎಂಟು ವರ್ಷದ ಮಗ ಸ್ವಲ್ಪದರಲ್ಲಿ ಪಾರಾಗಿದ್ದ.
ಕೂಡಲೇ ರಾಮಕೃತ ಅಲ್ಲಿಂದ ಎಸ್ಕೆಪ್ ಆಗಿದ್ದು, ಬಸ್ಸಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ, ಅಂಗಡಿಗೆ ಸಾಮಗ್ರಿ ಖರೀದಿಗೆ ಬಂದಿದ್ದ ಸಜಿತಾ ಎಂಬ ಮತ್ತೊಬ್ಬ ಮಹಿಳೆ ಆರೋಪಿಯನ್ನು ಬೆನ್ನಟ್ಟಿದ್ದು, ಬಸ್ಸಿನ ಹಿಂದಕ್ಕೆ ಓಡಿ ನಿಲ್ಲಿಸಿದ್ದಾಳೆ. ಬಳಿಕ ಸಾರ್ವಜನಿಕರು ಸೇರಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆ ಸಾವು
