ಸುಳ್ಯ ತಾಲೂಕಿನ ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇನ್ನೂ ನಾಲ್ವರು ಆರೋಪಿಗಳ ವಿರುದ್ಧ ಆರೋಪಪಟ್ಟಿ ದಾಖಲಿಸಿದೆ. ಇವರಲ್ಲಿ ಮೂವರು ತಲೆಮರೆಸಿಕೊಂಡಿದ್ದಾರೆ.
ಇದು ಈ ಪ್ರಕರಣದಲ್ಲಿ ಎನ್‌ಐಎ ಸಲ್ಲಿಸಿರುವ ದ್ವಿತೀಯ ಪೂರಕ ಆರೋಪ ಪಟ್ಟಿ ಆಗಿದ್ದು, ಇದರಲ್ಲಿ ಅಬ್ದುಲ್ ನಾಸಿರ್, ನೌಶಾದ್, ಅಬ್ದುಲ್ ರಹಮಾನ್ ಮತ್ತು ಅತೀಕ್ ಅಹ್ಮದ್ ಎಂಬವರನ್ನು ಹೆಸರಿಸಲಾಗಿದೆ. ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಈ ಆರೋಪಪಟ್ಟಿ ಸಲ್ಲಿಸಲಾಗಿದೆ. ಇದರೊಂದಿಗೆ ತಲೆಮರೆಸಿರುವ 6 ಮಂದಿ ಸಹಿತ ಆರೋಪಪಟ್ಟಿ ಸಲ್ಲಿಕೆ ಆಗಿರುವ ಒಟ್ಟು ಆರೋಪಿಗಳ ಸಂಖ್ಯೆ 27ಕ್ಕೆ ಏರಿದೆ.
ಆರೋಪಿಗಳಾದ ಈ ಮೂವರು ನೆಟ್ಟಾರು ಹತ್ಯೆಯ ಪ್ರಮುಖ ಆರೋಪಿಗಳಿಗೆ ಕರ್ನಾಟಕದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಹಾಗೂ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಆಶ್ರಯ ನೀಡಿದ್ದರು ಎಂದು ತನಿಖೆಯಲ್ಲಿ ಎನ್‌ಐಎ ಕಂಡುಕೊಂಡಿದೆ.
ಇನ್ನೊಬ್ಬ ಆರೋಪಿ ತುಫೈಲ್ ಎಂ.ಎಚ್. ಎಂಬಾತನಿಗೆ ಬೆಂಗಳೂರಿನಲ್ಲಿ ಆಶ್ರಯ ನೀಡುವಲ್ಲಿ ಅಬ್ದುಲ್ ನಾಸಿರ್ ಮತ್ತು ಅಬ್ದುಲ್ ರಹಮಾನ್ ಭಾಗಿಯಾಗಿದ್ದರು ಎಂದು ಎನ್‌ಐಎ ಹೇಳಿದೆ. ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಆರೋಪಿ ಅತೀಕ್ ಮತ್ತು ಕಲಂದರ್ (ಈಗ ಮೃತಪಟ್ಟಿದ್ದಾನೆ) ಸಂಚು ರೂಪಿಸಿ 2022-23ರಲ್ಲಿ ಮುಸ್ತಫಾ ಪೈಚಾರ್‌ಗೆ ಚೆನ್ನೈಯಲ್ಲಿ ಆಶ್ರಯ ನೀಡಿದ್ದರು ಎಂದು ತಿಳಿದುಬಂದಿದೆ.
ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ,ಇನ್ನೂ ನಾಲ್ಕು ಮಂದಿಯ ಮೇಲೆ ಆರೋಪ ಪಟ್ಟಿ ದಾಖಲು!
