ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದು ಅಮಾಯಕರನ್ನು ಕೊಂದ ಬಳಿಕ ಭಯೋತ್ಪಾದಕರು, ಇದನ್ನು ಮೋದಿಗೆ ಹೇಳು ಎಂದು ಹೇಳಿದ್ದಾರಂತೆ.
ಕರ್ನಾಟಕದ ಶಿವಮೊಗ್ಗ ಮಂಜುನಾಥ್ ತನ್ನ ಪತ್ನಿ ಪಲ್ಲವಿ ಮತ್ತು ಅವರ ಚಿಕ್ಕ ಮಗನೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ನಡೆದ ದಾಳಿಯಲ್ಲಿ ಮಂಜುನಾಥ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಮ್ಮನ್ನು ಕೊಲ್ಲು ಎಂದು ಭಯೋತ್ಪಾದಕರಿಗೆ ಪತ್ನಿ ಪಲ್ಲವಿ ಹೇಳಿದಾಗ ‘ಮೋದಿಗೆ ಹೇಳು’ ಎಂದು ಭಯೋತ್ಪಾದಕ ಹೇಳಿದ್ದಾನೆ.
ಪಲ್ಲವಿ ಈ ಘಟನೆಯ ಬಗ್ಗೆ ವಿವರಿಸುತ್ತಾ, ನಾವು ಮೂವರು ಕಾಶ್ಮೀರಕ್ಕೆ ಹೋಗಿದ್ದೆವು. ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ನಾನು ಭಾವಿಸುತ್ತೇನೆ. ನನ್ನ ಪತಿಯನ್ನು ಕಣ್ಣ ಮುಂದೆಯೇ ಕೊಂದು ಹಾಕಿದ್ದಾರೆ. ಇನ್ನೂ ಇದೊಂದು ಕೆಟ್ಟ ಕನಸಿನಂತೆ ಭಾಸವಾಗುತ್ತಿದೆ ಎಂದು ಅವರು ನೋವಿನಿಂದ ಹೇಳಿದ್ದಾರೆ.
ಭಯೋತ್ಪಾದಕ ದಾಳಿಯ ನಂತರ ಸ್ಥಳೀಯ ನಾಗರಿಕರು ತಕ್ಷಣ ನಮಗೆ ಸಹಾಯ ಮಾಡಿದ್ದಾರೆ. ಮೂವರು ಸ್ಥಳೀಯರು ನನ್ನನ್ನು ರಕ್ಷಿಸಿದ್ದಾರೆ ಎಂದು ಪಲ್ಲವಿ ಹೇಳಿದ್ದಾರೆ. ದಾಳಿಕೋರರು ಹಿಂದೂಗಳನ್ನು ಗುರಿಯಾಗಿಸಿದಂತೆ ಕಂಡು ಬಂತು. ಮೂರರಿಂದ ನಾಲ್ಕು ಜನರು ನಮ್ಮ ಮೇಲೆ ದಾಳಿ ಮಾಡಿದರು. ನಾನು ಅವರಿಗೆ ಹೇಳಿದೆ, ನೀವು ನನ್ನ ಗಂಡನನ್ನು ಕೊಂದಿದ್ದೀರಿ, ನನ್ನನ್ನೂ ಕೊಲ್ಲಿ ಎಂದು, ಅವರಲ್ಲಿ ಒಬ್ಬರು, ‘ನಾನು ನಿನ್ನನ್ನು ಕೊಲ್ಲುವುದಿಲ್ಲ. ಹೋಗಿ ಮೋದಿಗೆ ಇದನ್ನು ಹೇಳು ಎಂದನು ಎಂದು ಅವರು ಹೇಳಿದ್ದಾರೆ.
ಗಂಡನನ್ನು ಕೊಂದು ಹಾಕಿ,ಪತ್ನಿಗೆ, ಹೋಗು ಮೋದಿಗೆ ಹೇಳು ಎಂದ ಭಯೋತ್ಪಾದಕ !
