ಪುತ್ತೂರು; ಕಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿ ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಪುತ್ತೂರಿನ ಮುರ ಎಂಬಲ್ಲಿ ನಡೆದಿದೆ. ಅಂಡೆಪುಣಿ ಈಶ್ವರ ಭಟ್ ಮತ್ತು ಅವರ ಮಗಳು ಅಪೂರ್ವ ಹಾಗು ಮೊಮ್ಮಗಳು ಗಂಭೀರವಾಗಿ ಗಾಯಗೊಂಡವರು.
ಈಶ್ವರ್ ಭಟ್ ಅಂಡೆಪುನಿ ಅವರ ಮನೆಯಲ್ಲಿ ಕಾರ್ಯಕ್ರಮವಿತ್ತು. ಇದರಲ್ಲಿ ಭಾಗವಹಿಸಲು ಅವರ ಮಗಳು ಅಪೂರ್ವ ಹಾಗೂ ಮೊಮ್ಮಗಳು ಬೆಂಗಳೂರಿನಿಂದ ಪುತ್ತೂರಿಗೆ ಬಸ್ಸಿನಲ್ಲಿ ಬಂದಿದ್ದರು. ಈಶ್ವರ್ ಭಟ್ ಅವರು ಪುತ್ತೂರು ಪೇಟೆಯಿಂದ ಇವರನ್ನು ತಮ್ಮ ವ್ಯಾಗನರ್ ಕಾರಿನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಮುರ ಜಂಕ್ಷನ್ ಬಳಿ ಕಾರಿಗೆ ಹಿಂಬದಿಯಿಂದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.
ಅಪಘಾತ ನಡೆದ ಕೂಡಲೇ ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ, ನಜ್ಜುಗುಜ್ಜಾಗಿದ್ದ ಕಾರಿನಿಂದ ಗಾಯಾಳುಗಳನ್ನು ಹೊರತೆಗೆದಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.