ಅಕ್ರಮವಾಗಿ ಕಾಡು ಪ್ರಾಣಿ ಬೇಟೆಯಾಡಿ ಬಂದು ಮಾಂಸ ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಕಾಡು ಪ್ರಾಣಿ ಮಾಂಸ ಸೇರಿದಂತೆ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ನಿವಾಸಿ ಜೋಸ್ಸಿ ಅಲ್ವಿನ್ ಲೋಬೋ ಎಂಬವರ ಮನೆಯ ಶೆಡ್ ನಲ್ಲಿ ಅಕ್ರಮವಾಗಿ ಕೋವಿಯಿಂದ ಕಾಡು ಪ್ರಾಣಿ ಬೇಟೆಯಾಡಿ ತಂದು ಮಾಂಸ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಪ್ಯಾಕ್ ಮಾಡಿಕೊಂಡು ಕಾರಿನಲ್ಲಿಟ್ಟು ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಜುಲೈ 12 ರಂದು ರಾತ್ರಿ ದಾಳಿ ಮಾಡಿ ಜುಲೈ 13 ರಂದು ಪ್ರಕರಣ ದಾಖಲಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ.
ದಾಳಿ ವೇಳೆ ಬೇಟೆಯಾಡಿ ಕಾಡು ಪ್ರಾಣಿ ಸಾಗಾಟಕ್ಕೆ ಬಳಸಿದ ಕಳಿಯ ಗ್ರಾಮದ ಕುಲಾಯಿ ಮೇಗಿನ ಮನೆ ನಿವಾಸಿ ಶರತ್ ಶೆಟ್ಟಿ ಎಂಬಾತನಿಗೆ ಸೇರಿದ ರಕ್ತದ ಕಲೆಗಳಿದ್ದ KA-21-P-0345 ನಂಬರಿನ ಬಿಳಿ ಬಣ್ಣದ ಈಯೊನ್ ಕಾರು,ಒಂದು ಸಿಂಗಲ್ ಬ್ಯಾರಲ್ ಕೋವಿ, ಮೂರು ಕಾಟೇಜ್,ಒಂದು ಕತ್ತಿ, 17 ಕೆ.ಜಿ ಕಾಡು ಪ್ರಾಣಿ ಮಾಂಸ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಕಾಡುಪ್ರಾಣಿ ಮಾಂಸವನ್ನು ಖಚಿತ ಪಡಿಸಿ ವರದಿಗಾಗಿ ಪ್ರಯೋಗಾಲಯಕ್ಕೆ ಅರಣ್ಯಾಧಿಕಾರಿಗಳು ಕಳುಹಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಆರೋಪಿಗಳಾದ ಜೋಸ್ಸಿ ಅಲ್ವಿನ್ ಲೋಬೋ ಮತ್ತು ಶರತ್ ಶೆಟ್ಟಿ ವಿರುದ್ಧ ಜುಲೈ 13 ರಂದು ವನ್ಯಜೀವಿ ಅಪರಾಧ ಪ್ರಕರಣ ದಾಖಲಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ ಬಳಿಕ ಪ್ರಕರಣದ ಸತ್ಯಸತ್ಯತೆ ತಿಳಿದುಬರಲಿದೆ.
ಕಾಡು ಪ್ರಾಣಿ ಭೇಟೆಯಾಡಿ ಸಾಗಾಟಕ್ಕೆ ಯತ್ನ,ಅರಣ್ಯ ಇಲಾಖೆ ದಾಳಿ

















